ADVERTISEMENT

ಸಿಬಿಐನಿಂದ ಎತ್ತಂಗಡಿಯಾದ ರಾಕೇಶ್ ಅಸ್ತಾನಾ ಈಗ ವಾಯುಯಾನ ಭದ್ರತಾ ಮುಖ್ಯಸ್ಥ

​ಪ್ರಜಾವಾಣಿ ವಾರ್ತೆ
Published 18 ಜನವರಿ 2019, 10:24 IST
Last Updated 18 ಜನವರಿ 2019, 10:24 IST
   

ನವದೆಹಲಿ:ವಿಶೇಷ ನಿರ್ದೇಶಕ ರಾಕೇಶ್‌ ಅಸ್ತಾನಾ ಅವರನ್ನು ಸಿಬಿಐನಿಂದ ಎತ್ತಂಗಡಿ ಮಾಡಿದ ಕೇಂದ್ರ ಸರ್ಕಾರ ವಾಯುಯಾನ ಭದ್ರತಾ ಮುಖ್ಯಸ್ಥರನ್ನಾಗಿ ನೇಮಿಸಿದೆ.

ಗುಜರಾತ್‌ ಕೆಡರ್‌ನ1984 ಬ್ಯಾಚ್‌ನ ಐಪಿಎಸ್‌ ಅಧಿಕಾರಿಯಾದ ಅಸ್ತಾನ ಅವರು, ಇನ್ನು ಎರಡು ವರ್ಷಗಳ ಕಾಲ ನಾಗರಿಕ ವಾಯುಯಾನ ಭದ್ರತಾ ಸಂಸ್ಥೆಯ ಮುಖ್ಯಸ್ಥರಾಗಿ ಸೇವೆ ಸಲ್ಲಿಸಲಿದ್ದಾರೆ.

ಅಸ್ತಾನ ಅವರೊಂದಿಗೆ ಸಿಬಿಐನ ಜಂಟಿ ನಿರ್ದೇಶಕ ಅರುಣ್‌ ಕುಮಾರ್ ಶರ್ಮಾ, ಡಿಐಜಿ ಮನೀಶ್‌ ಕುಮಾರ್ ಸಿನ್ಹ ಮತ್ತು ಎಸ್‌ಪಿ ಜಯಂತ್‌ ಜೆ. ನಾಯ್ಕನವರೆ ಅವರನ್ನೂಕೇಂದ್ರ ಸರ್ಕಾರ ಹೊರಹಾಕಿದೆ. ಶರ್ಮಾ ಅವರನ್ನು ಕೇಂದ್ರ ಮೀಸಲು ಪೊಲೀಸ್‌ ಪಡೆಯ ಹೆಚ್ಚುವರಿ ನಿರ್ದೇಶಕರನ್ನಾಗಿ ನೇಮಿಸಲಾಗಿದೆ.

ADVERTISEMENT

ಸಿಬಿಐಗೆ ಹೊಸ ಮುಖ್ಯಸ್ಥರ ನೇಮಕಕ್ಕೂ ಮುಂಚೆ ಸಂಸ್ಥೆಯೊಳಗಿನ ಸ್ಥಿತಿಯನ್ನು ಸರಿಪಡಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಈ ಕ್ರಮಕೈಗೊಂಡಿದೆಎನ್ನಲಾಗುತ್ತಿದೆ. ಸಿಬಿಐ ನಿರ್ದೇಶಕರ ಆಯ್ಕೆ ಸಮಿತಿ ಸಭೆ ಇದೇ 24ರಂದು ನಡೆಯಲಿದೆ.

ಪ್ರಧಾನಿ ನೇತೃತ್ವದ ಆಯ್ಕೆ ಸಮಿತಿಯು ಸಿಬಿಐ ಮುಖ್ಯಸ್ಥ ಅಲೋಕ್‌ ವರ್ಮಾ ಅವರನ್ನು ವರ್ಗಾಯಿಸಿದ ಕೆಲವೇ ದಿನಗಳಲ್ಲಿ ಅಸ್ತಾನಾ ಅವರನ್ನೂ ಎತ್ತಂಗಡಿ ಮಾಡಿದೆ.

ಈ ಇಬ್ಬರ ಕಚ್ಚಾಟ ಬೀದಿಗೆ ಬಂದ ಕಾರಣದಿಂದ ಕೇಂದ್ರ ಸರ್ಕಾರ ಮತ್ತು ಪ್ರತಿಷ್ಠಿತ ತನಿಖಾ ಸಂಸ್ಥೆ ಸಿಬಿಐ ಮುಜುಗರ ಅನುಭವಿಸುವಂತಾಗಿತ್ತು.ಒಳಜಗಳದ ಕಾರಣದಿಂದಾಗಿ ಅಸ್ತಾನಾ ಅವರನ್ನು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕಡ್ಡಾಯ ರಜೆ ಮೇಲೆ ಕಳುಹಿಸಲಾಗಿತ್ತು.

ಅಸ್ತಾನಾ ಅವರು ಸಿಬಿಐಯ ಎರಡನೇ ಅತ್ಯುನ್ನತ ಅಧಿಕಾರಿಯಾಗಿದ್ದರು. ಜಂಟಿ ನಿರ್ದೇಶಕ ಅರುಣ್‌ ಕುಮಾರ್‌ ಶರ್ಮಾ, ಉಪಮಹಾನಿರೀಕ್ಷಕ ಮನೀಶ್‌ ಕುಮಾರ್‌ ಸಿನ್ಹಾ ಮತ್ತು ಎಸ್‌ಪಿ ಜಯಂತ್‌ ಜೆ. ನೈಕ್‌ನವರೆ ಅವರನ್ನು ಕೂಡ ಸಿಬಿಐನಿಂದ ಹೊರಗೆ ಕಳುಹಿಸಲಾಗಿದೆ.

ವರ್ಮಾ ಮತ್ತು ಅಸ್ತಾನಾ ಅವರು ಪರಸ್ಪರರ ವಿರುದ್ಧ ಭ್ರಷ್ಟಾಚಾರದ ಗಂಭೀರ ಆರೋಪಗಳನ್ನು ಮಾಡಿದ್ದರು. ವರ್ಮಾ ಅವರು ಸಿಬಿಐ ಮುಖ್ಯಸ್ಥರಾಗಿದ್ದ ಅವಧಿಯಲ್ಲಿ ಅಸ್ತಾನಾ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿತ್ತು. ಬಳಿಕ, ವರ್ಮಾ ಅವರನ್ನು ಕಡ್ಡಾಯ ರಜೆಯ ಮೇಲೆ ಕಳುಹಿಸಿ ಎಂ. ನಾಗೇಶ್ವರ ರಾವ್‌ ಅವರನ್ನು ಸಿಬಿಐ ಮಧ್ಯಂತರ ಮುಖ್ಯಸ್ಥರಾಗಿ ಕೇಂದ್ರ ಸರ್ಕಾರ ನೇಮಿಸಿತ್ತು.

ಅಸ್ತಾನಾ ವಿರುದ್ಧದ ಪ್ರಕರಣದ ತನಿಖೆ ನಡೆಸುತ್ತಿದ್ದ ಸಿನ್ಹಾ ಅವರನ್ನು ರಾವ್‌ ಅವರು ವರ್ಗಾಯಿಸಿದ್ದರು. ಸುಪ್ರೀಂ ಕೋರ್ಟ್‌ ಆದೇಶದಂತೆ ಸಿಬಿಐ ಮುಖ್ಯಸ್ಥ ಹುದ್ದೆಗೆ ಕೆಲವೇ ದಿನಗಳ ಮಟ್ಟಿಗೆ ಮರಳಿದ್ದ ವರ್ಮಾ ಅವರು ಸಿನ್ಹಾ ವರ್ಗಾವಣೆಯನ್ನು ರದ್ದುಪಡಿಸಿದ್ದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.