ADVERTISEMENT

ಹೋರಾಟ ನಿರತ ರೈತರಿಗೆ ಕೋವಿಡ್‌ ಲಸಿಕೆ ನೀಡಲು ಕೇಂದ್ರಕ್ಕೆ ಟಿಕಾಯತ್‌ ಒತ್ತಾಯ

ಏಜೆನ್ಸೀಸ್
Published 18 ಮಾರ್ಚ್ 2021, 9:57 IST
Last Updated 18 ಮಾರ್ಚ್ 2021, 9:57 IST
ರಾಕೇಶ್‌ ಟಿಕಾಯತ್‌
ರಾಕೇಶ್‌ ಟಿಕಾಯತ್‌   

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿರುವ ರೈತರಿಗೆ ಕೋವಿಡ್‌ ಲಸಿಕೆ ನೀಡಬೇಕೆಂದು ರೈತ ಮುಖಂಡ ರಾಕೇಶ್‌ ಟಿಕಾಯತ್‌ ಗುರುವಾರ ಒತ್ತಾಯಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಅವರು, 'ದೇಶದಾದ್ಯಂತ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡುಬರುತ್ತಿದೆ. ಪ್ರತಿಭಟನಾ ಸ್ಥಳಗಳಲ್ಲಿ ನಾವು (ರೈತರು) ಕೋವಿಡ್‌ ಸಂಬಂಧಿತ ಮಾರ್ಗಸೂಚಿಗಳನ್ನು ಅನುಸರಿಸುತ್ತಿದ್ದೇವೆ. ದೈಹಿಕ ಅಂತರ ಕಾಯ್ದುಕೊಳ್ಳುತ್ತಿದ್ದೇವೆ. ಹೋರಾಟದಲ್ಲಿ ಪಾಲ್ಗೊಂಡಿರುವ ರೈತರಿಗೆ ಸರ್ಕಾರವು ಲಸಿಕೆ ನೀಡಬೇಕು. ನಾನು ಕೂಡ ಲಸಿಕೆ ಪಡೆಯುತ್ತೇನೆ' ಎಂದು ಹೇಳಿದ್ದಾರೆ.

'ಕೋವಿಡ್‌ ಭಯದಿಂದ ನಾವು ಪ್ರತಿಭಟನೆಯನ್ನು ಕೊನೆಗೊಳಿಸುವುದಿಲ್ಲ. ದೈಹಿಕ ಅಂತರ ಕಾಪಾಡಲು ಡೇರೆಗಳ ಗಾತ್ರವನ್ನು ಹೆಚ್ಚಿಸುತ್ತೇವೆ. ಕೇಂದ್ರ ಸರ್ಕಾರ ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವವರೆಗೂ ನಾವು ಹೋರಾಟವನ್ನು ಮುಂದುವರೆಸಲಿದ್ದೇವೆ' ಎಂದು ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.

ಕೇಂದ್ರ ಸರ್ಕಾರ ರೂಪಿಸಿರುವ ಮೂರು ಕೃಷಿ ಕಾಯ್ದೆಗಳನ್ನು ರದ್ದುಪಡಿಸುವಂತೆ ಒತ್ತಾಯಿಸಿ ನಡೆಸುತ್ತಿರುವ ಹೋರಾಟವನ್ನು ಡಿಸೆಂಬರ್‌ವರೆಗೂ ಮುಂದುವರಿಸುವ ಸಾಧ್ಯತೆ ಇದೆ ಎಂದು ರಾಕೇಶ್ ಟಿಕಾಯತ್ ಈಗಾಗಲೇ ತಿಳಿಸಿದ್ದಾರೆ.

ADVERTISEMENT

ಕಳೆದ ವರ್ಷ ನವೆಂಬರ್ 28 ರಿಂದ ಹರಿಯಾಣ, ಪಂಜಾಬ್ ಮತ್ತು ಉತ್ತರ ಪ್ರದೇಶದ ರೈತರು ದೆಹಲಿಯ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ಪ್ರತಿಭಟನಾ ನಿರತ ರೈತ ಒಕ್ಕೂಟಗಳೊಂದಿಗೆ ಸರ್ಕಾರ 11 ಸುತ್ತಿನ ಮಾತುಕತೆ ನಡೆಸಿದ್ದರೂ, ಯಾವುದೇ ಪ್ರಯೋಜನವಾಗಿಲ್ಲ.

24 ಗಂಟೆಗಳಲ್ಲಿ ದೇಶದಾದ್ಯಂತ 35,871 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿವೆ. ಈ ಪ್ರಮಾಣ ಕಳೆದ ಡಿಸೆಂಬರ್‌ನಲ್ಲಿ ದಾಖಲಾಗಿತ್ತು.

ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಲಸಿಕೆ ಅಭಿಯಾನ ಮತ್ತಷ್ಟು ಚುರುಕುಗೊಂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.