ADVERTISEMENT

ರಾಮ, ಕೃಷ್ಣ ತಂಬಾಕು ಸೇವಿಸಲಿಲ್ಲ, ನಾವೇಕೆ ಹೀಗೆ?– ಸಾಧುಗಳಿಗೆ ರಾಮ್‌ದೇವ್‌ ಉಪದೇಷ

ಏಜೆನ್ಸೀಸ್
Published 31 ಜನವರಿ 2019, 5:54 IST
Last Updated 31 ಜನವರಿ 2019, 5:54 IST
   

ಪ್ರಯಾಗ್‌ರಾಜ್‌:ಕುಂಭ ಮೇಳಕ್ಕೆ ಬಂದಿರುವ ಸಾಧು ಮತ್ತು ಸಂತರಿಗೆ ತಂಬಾಕು ಸೇವನೆ ಬಿಡುವಂತೆಯೋಗಗುರು ಬಾಬಾ ರಾವ್‌ದೇವ್‌ ಮನವೊಲಿಸಿದ್ದಾರೆ.

’ರಾಮ ಮತ್ತು ಕೃಷ್ಣರ ಆದರ್ಶಗಳನ್ನು ಪಾಲಿಸುವ ನಾವು ತಂಬಾಕು ಸೇವನೆಯನ್ನು ಏಕೆ ಮಾಡುತ್ತಿದ್ದೇವೆ? ಅವರು ತಮ್ಮ ಜೀವಮಾನದಲ್ಲಿ ಯಾವತ್ತಿಗೂ ಧೂಮಪಾನ ನಡೆಸಿರಲಿಲ್ಲ. ತಂಬಾಕು ಸೇವನೆಯನ್ನು ನಿಲ್ಲಿಸುವುದಾಗಿ ನಾವು ಶಪಥ ಮಾಡಬೇಕು’ ಎಂದು ರಾಮ್‌ದೇವ್‌ ಆಗ್ರಹಿಸಿದ್ದಾರೆ.

ಉತ್ತಮ ಕಾರ್ಯಕ್ಕಾಗಿ ತಂದೆ, ತಾಯಿ, ಮನೆ ಸೇರಿದಂತೆ ಎಲ್ಲವನ್ನೂ ತೊರೆದು ಸಾಧುಗಳಾಗಿರುವ ನಾವು; ತಂಬಾಕು ಸೇವನೆಯನ್ನು ದೂರ ಮಾಡಲು ಸಾಧ್ಯವಿಲ್ಲವೇ? ಎಂದು ಪ್ರಶ್ನಿಸಿದ್ದಾರೆ. ಹಲವು ಸಾಧುಗಳ ಕೈಗಳಲ್ಲಿ ಅಡಗಿದ್ದ ಮಣ್ಣಿನಿಂದ ಮಾಡಿದ ತಂಬಾಕು ಸೇವನೆಗೆ ಬಳಸುವ ಚಿಲುಮೆ(ಪೈಪ್‌)ಗಳನ್ನು ರಾಮ್‌ದೇವ್‌ ತೆಗೆದುಕೊಂಡಿದ್ದು, ತಂಬಾಕು ಸೇವನೆ ನಿಲ್ಲಿಸಲು ಪ್ರಮಾಣ ಮಾಡುವಂತೆ ಮಾಡಿದ್ದಾರೆ. ಅವರಿಂದ ಪಡೆದಿರುವ ಚಿಲುಮೆಗಳನ್ನು ಮುಂದಿನ ದಿನಗಳಲ್ಲಿ ನಿರ್ಮಿಸಲಿರುವ ಮ್ಯೂಸಿಯಂನಲ್ಲಿ ಇಡುವುದಾಗಿ ತಿಳಿಸಿದ್ದಾರೆ.

ADVERTISEMENT

’ಧೂಮಪಾನ ಹಾಗೂ ತಂಬಾಕು ಸೇವನೆ ಮಾಡುತ್ತಿದ್ದ ಅನೇಕ ಯುವಕರನ್ನು ಇದರಿಂದ ಮುಕ್ತಗೊಳ್ಳುವಂತೆ ಮಾಡಿದ್ದೇನೆ. ಇನ್ನೂ ಮಹಾತ್ಮರನ್ನು ಇದರಿಂದ ಹೊರ ತರಲು ಸಾಧ್ಯವಿಲ್ಲವೇ?’ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಜಗತ್ತಿನಲ್ಲಿ ಅತಿ ದೊಡ್ಡ ಧಾರ್ಮಿಕ ಮೇಳವಾಗಿರುವ 55 ದಿನಗಳ ಈ ಕುಂಭ ಮೇಳವು ಮಾರ್ಚ್‌ 4ರಂದು ಪೂರ್ಣಗೊಳ್ಳಲಿದೆ. ಸುಮಾರು 13 ಕೋಟಿ ಯಾತ್ರಾರ್ಥಿಗಳು ಇಲ್ಲಿನ ಉತ್ಸವಗಳಲ್ಲಿ ಭಾಗಿಯಾಗಿ, ಪವಿತ್ರ ಸ್ನಾನ ಮಾಡಲಿದ್ದಾರೆ ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.