ನವದೆಹಲಿ: ‘ಅಯೋಧ್ಯೆಯ ರಾಮಮಂದಿರದ ನಿರ್ಮಾಣ ಕಾಮಗಾರಿ ಪೂರ್ಣಗೊಳ್ಳುವ ಹಂತದಲ್ಲಿದ್ದು, ಜೂನ್ 5ರಂದು ‘ರಾಮ ದರ್ಬಾರ್’ನಲ್ಲಿ ಮೂರ್ತಿಗಳ ಪ್ರಾಣಪ್ರತಿಷ್ಠಾಪನೆ ನಡೆಯಲಿದೆ. ಆದರೆ, ಈ ಬಾರಿ ಪ್ರಾಣಪ್ರತಿಷ್ಠಾಪನೆಗೆ ಆಗಮಿಸುವ ಅತಿಥಿಗಳ ಪಟ್ಟಿಯಲ್ಲಿ ರಾಜ್ಯ ಅಥವಾ ಕೇಂದ್ರದ ವಿಐಪಿಗಳ ಹೆಸರು ಇರುವುದಿಲ್ಲ’ ಎಂದು ಶ್ರೀ ರಾಮ ಜನ್ಮಭೂಮಿ ನಿರ್ಮಾಣ ಸಮಿತಿಯ ಅಧ್ಯಕ್ಷ ನೃಪೇಂದ್ರ ಮಿಶ್ರಾ ತಿಳಿಸಿದ್ದಾರೆ.
ಪಿಟಿಐಗೆ ಬುಧವಾರ ಸಂದರ್ಶನ ನೀಡಿರುವ ಅವರು, ‘ಜೂನ್ 3ರಿಂದಲೇ ಪ್ರಾಣಪ್ರತಿಷ್ಠಾಪನೆ ಕಾರ್ಯಕ್ರಮಗಳು ಆರಂಭವಾಗಲಿವೆ. ವಿವಿಧ ಧಾರ್ಮಿಕ ಗುರುಗಳನ್ನು ಆಹ್ವಾನಿಸಲಾಗುವುದು. ಕೇಂದ್ರ ಅಥವಾ ರಾಜ್ಯದ ವಿಐಪಿಗಳನ್ನು ಆಹ್ವಾನಿಸದೇ ಇರಲು ಟ್ರಸ್ಟ್ ನಿರ್ಧರಿಸಿದೆ’ ಎಂದಿದ್ದಾರೆ.
ರಾಮ ದರ್ಬಾರ್ ಜತೆಗೆ ದೇವಾಲಯದ ಆವರಣದಲ್ಲಿರುವ ಇತರೆ 7 ದೇಗುಲಗಳ ಧಾರ್ಮಿಕ ಸಮಾರಂಭವೂ ಅದೇ ದಿನ ನಡೆಯಲಿದೆ. ರಾಮಾಯಣದ ಕಥೆಯನ್ನು ಪ್ರದರ್ಶಿಸುವ ಭಿತ್ತಿಚಿತ್ರಗಳನ್ನು ಹೊರತುಪಡಿಸಿ ದೇಗುಲದ ಮಿಕ್ಕೆಲ್ಲಾ ನಿರ್ಮಾಣ ಕಾಮಗಾರಿ ಜೂ.5ರ ಒಳಗೆ ಪೂರ್ಣಗೊಳ್ಳಲಿದೆ ಎಂದೂ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.