ಪ್ರಧಾನಿ ಮೋದಿಯನ್ನು ಸ್ವಾಗತಿಸಲು ಸೇರಿದ ಜನರು
–ಪಿಟಿಐ ಚಿತ್ರ
ಅಯೋಧ್ಯೆ: ರಾಮ ಮಂದಿರ ನಿರ್ಮಾಣ ಪೂರ್ಣವಾಗಿದ್ದರ ಸಂಕೇತವಾಗಿ ಏರ್ಪಡಿಸಲಾದ ‘ಧ್ವಜಾರೋಹಣ’ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಆಗಮಿಸಿದ ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರ ಸಂಕೀರ್ಣದಲ್ಲಿ ರೋಡ್ ಶೋ ನಡೆಸಿದ್ದಾರೆ.
ಮುಖ್ಯ ಕಾರ್ಯಕ್ರಮಕ್ಕೂ ಮುನ್ನ ರಾಮ ಜನ್ಮಭೂಮಿ ಮಂದಿರ ಸಂಕೀರ್ಣದಲ್ಲಿರುವ ಸಪ್ತ ಮಂದಿರದಲ್ಲಿ ಪ್ರಧಾನಿ ಮೋದಿ ಪ್ರಾರ್ಥನೆ ಸಲ್ಲಿಸಿದರು.
‘ಶ್ರೀರಾಮ ಜನ್ಮಭೂಮಿ ಮಂದಿರದ ಧ್ವಜಾರೋಹಣ ಉತ್ಸವದಲ್ಲಿ ಪಾಲ್ಗೊಳ್ಳಲು ಅಯೋಧ್ಯೆಗೆ ಬಂದೆ’ ಎಂದು ಮೋದಿ ತಮ್ಮ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.
ಪ್ರಧಾನಿ ಮೋದಿಯನ್ನು ಮಹಿಳೆಯರು, ಯುವಕರು ಸೇರಿ ಹಲವು ಮಂದಿ ರಸ್ತೆಯ ಇಕ್ಕೆಲಗಳಲ್ಲಿ ನಿಂತು ಸ್ವಾಗತಿಸಿದರು. ಹೂವಿನ ಪಕಳೆಗಳ ಮಳೆಗೈದರು.
ಇದಕ್ಕೂ ಮುನ್ನ ಮಹರ್ಷಿ ವಾಲ್ಮೀಕಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಮೋದಿಯವರನ್ನು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಹಾಗೂ ರಾಜ್ಯಪಾಲೆ ಆನಂದಿಬೆನ್ ಪಟೇಲ್ ಸ್ವಾಗತಿಸಿದರು.
ರೋಡ್ ಶೋ ಬಳಿಕ, ಹೊಸದಾಗಿ ನಿರ್ಮಿಸಲಾದ ಸಪ್ತ ಮಂದಿರಕ್ಕೆ ಮೋದಿ ಭೇಟಿ ನೀಡಿದರು. ಇದರಲ್ಲಿ ಮಹರ್ಷಿ ವಶಿಷ್ಠ, ಮಹರ್ಷಿ ವಿಶ್ವಾಮಿತ್ರ, ಮಹರ್ಷಿ ಅಗಸ್ತ್ಯ, ಮಹರ್ಷಿ ವಾಲ್ಮೀಕಿ, ದೇವಿ ಅಹಲ್ಯ, ನಿಷಾದರಾಜ ಗುಹಾ ಮತ್ತು ಮಾತಾ ಶಬರಿ ದೇವಾಲಯಗಳಿವೆ.
ಧ್ವಜಾರೋಹಣ ಸಮಾರಂಭ ಬೆಳಿಗ್ಗೆ 11.50ರ ನಂತರದ 'ಅಭಿಜಿತ್ ಮುಹೂರ್ತ'ದಲ್ಲಿ ನಿಗದಿಯಾಗಿದೆ.
ಪ್ರಧಾನಿಯವರು 10 ಅಡಿ ಎತ್ತರ ಮತ್ತು 20 ಅಡಿ ಉದ್ದದ ತ್ರಿಕೋನ ಕೇಸರಿ ಧ್ವಜವನ್ನು ಹಾರಿಸಲಿದ್ದಾರೆ,. ಸಾಂಪ್ರದಾಯಿಕ ನಾಗರ ವಾಸ್ತುಶಿಲ್ಪ ಶೈಲಿಯಲ್ಲಿ ನಿರ್ಮಿಸಲಾದ ಈ ಧ್ವಜವು ದೇಗುಲದ 'ಶಿಖರ'ದ ಮೇಲೆ ಹಾರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.