ADVERTISEMENT

ರಾಮನವಮಿ: ಮೆರವಣಿಗೆ ವೇಳೆ ಕಲ್ಲು ತೂರಾಟ; ಕಾನ್ಪುರದಲ್ಲಿ ಬಿಗಿ ಭದ್ರತೆ

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2025, 2:08 IST
Last Updated 7 ಏಪ್ರಿಲ್ 2025, 2:08 IST
<div class="paragraphs"><p>ಕಲ್ಲು ತೂರಾಟ (ಪ್ರಾತಿನಿಧಿಕ ಚಿತ್ರ)&nbsp;</p></div>

ಕಲ್ಲು ತೂರಾಟ (ಪ್ರಾತಿನಿಧಿಕ ಚಿತ್ರ) 

   

ಲಖನೌ (ಉತ್ತರ ಪ್ರದೇಶ): ಕಾನ್ಪುರದಲ್ಲಿ ರಾಮನವಮಿಯಂದು ನಡೆದ ಮೆರವಣಿಗೆ ವೇಳೆ ಕಲ್ಲು ತೂರಾಟ ನಡೆದಿದೆ ಎಂದು ಆರೋಪಿಸಲಾಗಿದ್ದು, ಬಿಗಿ ಭದ್ರತೆ ಕೈಗೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ನಯಿ ಸಡಕ್ ಪ್ರದೇಶದಲ್ಲಿ ಭಾನುವಾರ ಸಂಜೆ ನಡೆದ ಶೋಭಾಯಾತ್ರೆ ವೇಳೆ ಕಟ್ಟಡಗಳ ಮೇಲಿಂದ ಅಪರಿಚಿತರು ಕಲ್ಲು ತೂರಾಟ ನಡೆಸಿದ್ದಾರೆ ಎಂದು ಉಲ್ಲೇಖಿಸಿ ಕಾರ್ಯಕ್ರಮದ ಆಯೋಜಕರು ದೂರು ನೀಡಿರುವುದಾಗಿ ಉಪ ಪೊಲೀಸ್ ಆಯುಕ್ತ (ಪೂರ್ವ) ಶ್ರವಣ್ ಕುಮಾರ್ ಸಿಂಗ್ ತಿಳಿಸಿದ್ದಾರೆ.

ADVERTISEMENT

ಕಲ್ಲು ತೂರಾಟದಲ್ಲಿ ಹಲವು ಮಂದಿ ಓಡಿ ಹೋಗುತ್ತಿರುವ ದೃಶ್ಯಗಳನ್ನೊಂಡ ವಿಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ. ಆದರೆ ಈ ವಿಡಿಯೊಗಳ ಸತ್ಯಾಸತ್ಯತೆ ಪರಿಶೀಲಿಸಬೇಕಿದೆ ಎಂದು ಸಿಂಗ್ ಮಾಹಿತಿ ನೀಡಿದ್ದಾರೆ.

ಜನರು ಶಾಂತಿಯುತವಾಗಿ ವರ್ತಿಸಬೇಕು. ಯಾವುದೇ ವದಂತಿಗಳಿಗೆ ಕಿವಿಕೊಡಬಾರದು ಎಂದು ಪೊಲೀಸರು ಮನವಿ ಮಾಡಿದ್ದಾರೆ.

ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದೇವೆ. ಆದರೆ ಆರೋಪಿಗಳು ಪತ್ತೆಯಾಗಿಲ್ಲ. ಘಟನೆ ಸಂಬಂಧ ಸಾಕ್ಷಿ ಒದಗಿಸುವ ಯಾವುದೇ ವಿಡಿಯೊಗಳಿದ್ದರೂ ಸಾರ್ವಜನಿಕರು ಪೊಲೀಸರಿಗೆ ನೀಡುವಂತೆ ಅಧಿಕಾರಿಗಳು ತಿಳಿಸಿದ್ದಾರೆ.

ಮುನ್ನೆಚ್ಚರಿಕೆ ಕ್ರಮವಾಗಿ, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಮೀಸಲು ಪೊಲೀಸ್ ಪಡೆಗಳು ಮತ್ತು ನೆರೆಯ ಪೊಲೀಸ್ ಠಾಣೆಗಳ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.