ADVERTISEMENT

ಜೂನ್‌ 10ರಿಂದ ರಾಮ ಮಂದಿರ ನಿರ್ಮಾಣ ಆರಂಭ

​ಪ್ರಜಾವಾಣಿ ವಾರ್ತೆ
Published 7 ಜೂನ್ 2020, 12:10 IST
Last Updated 7 ಜೂನ್ 2020, 12:10 IST
ರಾಮ ಮಂದಿರ- ಪ್ರಾತಿನಿಧಿಕ ಚಿತ್ರ
ರಾಮ ಮಂದಿರ- ಪ್ರಾತಿನಿಧಿಕ ಚಿತ್ರ   

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕಾರ್ಯ ಜೂನ್‌ 10ರಿಂದ ಆರಂಭವಾಗಲಿದೆ ಎಂದು ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್‌ನ ಮೂಲಗಳು ತಿಳಿಸಿವೆ.

‘ರುದ್ರಾಭಿಷೇಕ ಸೇರಿದಂತೆ ಇತರ ಧಾರ್ಮಿಕ ವಿಧಿಗಳನ್ನು ನೆರವೇರಿಸಿದ ನಂತರ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು’ ಎಂದು ಟ್ರಸ್ಟ್‌ನ ಅಧ್ಯಕ್ಷ ನೃತ್ಯಗೋಪಾಲ್ ದಾಸ್‌ ಅವರ ಉತ್ತರಾಧಿಕಾರಿ ಮಹಾಂತ ಕಮಲನಯನ್‌ ದಾಸ್‌ ಹೇಳಿದರು.

‘ಲಂಕಾಧಿ‍ಪತಿ ರಾವಣನ ವಿರುದ್ಧ ಯುದ್ಧ ಹೂಡುವ ಮುನ್ನ ಶ್ರೀರಾಮ ಸಹ ರುದ್ರಾಭಿಷೇಕ ನೆರವೇರಿಸಿದ್ದ’ ಎಂದೂ ಅವರು ಹೇಳಿದರು.

ADVERTISEMENT

ರುದ್ರಾಭಿಷೇಕ ಹಾಗೂ ಇತರ ಧಾರ್ಮಿಕ ವಿಧಿ ನೆರವೇರಿಸಲು ಎಷ್ಟು ಜನ ಸ್ವಾಮೀಜಿಗಳು ಪಾಲ್ಗೊಳ್ಳಲಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಕುರಿತ ಪ್ರಶ್ನೆಗೆ ‘ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿರುವ ಸ್ವಾಮೀಜಿಗಳ ಸಂಖ್ಯೆಗೆ ಮಹತ್ವ ಇಲ್ಲ’ ಎಂದು ಕಮಲನಯನ್‌ ದಾಸ್‌ ಪ್ರತಿಕ್ರಿಯಿಸಿದರು.

‘ಮಂದಿರ ನಿರ್ಮಿಸುವ ಜಾಗವನ್ನು ಸಮತಟ್ಟು ಮಾಡುವ ಕಾರ್ಯ ಪೂರ್ಣಗೊಂಡಿದೆ. ನಿರ್ಮಾಣ ಕಾರ್ಯದ ಗುತ್ತಿಗೆ ಪಡೆದಿರುವ ಸಂಸ್ಥೆಯೂ ಸಹ ಕಾಮಗಾರಿ ಆರಂಭಿಸಲು ಸನ್ನದ್ಧ ಎಂದು ತಿಳಿಸಿದೆ. ವಿಶ್ವ ಹಿಂದೂ ಪರಿಷತ್‌ನ ಕಾರ್ಯಾಗಾರದಲ್ಲಿ ಸಂಗ್ರಹಿಸಿ ಇಡಲಾಗಿರುವ ಕೆತ್ತನೆ ಮಾಡಿದ ಶಿಲೆಗಳನ್ನು ಸಹ ನಿರ್ಮಾಣ ಕಾರ್ಯಕ್ಕೆ ಬಳಸಿಕೊಳ್ಳಲಾಗುವುದು’ ಎಂದೂ ಅವರು ತಿಳಿಸಿದರು.

ಹೇಳಿಕೆಗೆ ಮಹತ್ವ

ಅಯೋಧ್ಯೆಯಲ್ಲಿರುವ ಪ್ರಮುಖ ಸ್ವಾಮೀಜಿಗಳು, ವಿಶ್ವ ಹಿಂದೂ ಪರಿಷತ್‌ ವಿನ್ಯಾಸಗೊಳಿಸಿರುವ ರಾಮ ಮಂದಿರದ ಮಾದರಿಯನ್ನು ಒಪ್ಪುವುದಿಲ್ಲ. ಮಂದಿರ ವಿನ್ಯಾಸದಲ್ಲಿ ಹಲವು ಬದಲಾವಣೆ ಅಗತ್ಯ ಎಂದು ಈ ಸ್ವಾಮೀಜಿಗಳು ಪಟ್ಟು ಹಿಡಿದಿದ್ದಾರೆ. ಈ ಕಾರಣದಿಂದ ಮಹಾಂತ ಕಮಲನಯಸ್‌ ದಾಸ್‌ ಅವರ ಹೇಳಿಕೆಗೆ ಮಹತ್ವ ಇದೆ ಎನ್ನಲಾಗುತ್ತಿದೆ.

‘ರಾಮ ಮಂದಿರ ನಿರ್ಮಾಣಕ್ಕಾಗಿ ನಡೆದ ಹೋರಾಟದ ಮುಂಚೂಣಿಯಲ್ಲಿದ್ದ ನಾಯಕರು, ಸ್ವಾಮೀಜಿಗಳನ್ನು ಈಗ ಮೂಲೆಗುಂಪು ಮಾಡಲಾಗಿದೆ’ ಎಂಬುದು ಅಯೋಧ್ಯೆಯಲ್ಲಿರುವ ಸ್ವಾಮೀಜಿಗಳ ಆರೋಪ. ದಿಗಂಬರ ಅಖಾಡ ಮುಖ್ಯಸ್ಥ ಮಹಾಂತ ಸುರೇಶ್‌ ದಾಸ್‌, ಬಿಜೆಪಿಯ ಮಾಜಿ ಸಂಸದ ರಾಮವಿಲಾಸ್‌ ವೇದಾಂತಿ ಅವರು ಸಹ ಈ ಮಾತಿಗೆ ದನಿಗೂಡಿಸುತ್ತಾರೆ.

ಆದರೆ, ಮಂದಿರದ ವಿನ್ಯಾಸದಲ್ಲಿ ಬದಲಾವಣೆಯನ್ನು ಒಪ್ಪದ ವಿಶ್ವ ಹಿಂದೂ ಪರಿಷತ್‌, ಇದಕ್ಕೆ ವಿರೋಧ ವ್ಯಕ್ತಪಡಿಸುತ್ತಿರುವವರನ್ನು ‘ರಾವಣ’ ಎಂದು ಟೀಕಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.