ADVERTISEMENT

ರಾಮಮಂದಿರ: ಭಾರಿ ಅಭಿಯಾನಕ್ಕೆ ನಿರ್ಧಾರ

ಕುಂಭ ಮೇಳದ ಸಂದರ್ಭದಲ್ಲಿ ವಿಎಚ್‌ಪಿಯಿಂದ ಧರ್ಮ ಸಂಸತ್‌

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2018, 19:29 IST
Last Updated 28 ಅಕ್ಟೋಬರ್ 2018, 19:29 IST
ಅಯೋಧ್ಯೆ ರಾಮ ಮಂದಿರ
ಅಯೋಧ್ಯೆ ರಾಮ ಮಂದಿರ   

ಲಖನೌ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ಕುಂಭ ಮೇಳದ ನಂತರ ದೊಡ್ಡ ಪ್ರಮಾಣದಲ್ಲಿ ಅಭಿಯಾನ ಕೈಕೊಳ್ಳಲು ಸಂಘ ಪರಿವಾರ ಯೋಜನೆ ರೂಪಿಸಿದೆ.

ಜನವರಿ 31ರಿಂದ ಪ್ರಯಾಗ್‌ರಾಜ್‌ನಲ್ಲಿ (ಅಲಹಾಬಾದ್‌) ನಡೆಯುವ ಕುಂಭ ಮೇಳದ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಎರಡು ದಿನಗಳ ಧರ್ಮ ಸಂಸತ್ ನಿಗದಿಪಡಿಸಿದ್ದು, ಇದರಲ್ಲಿ ರಾಮ ಮಂದಿರ ನಿರ್ಮಾಣ ಕುರಿತು ವಿವರವಾದ ಚರ್ಚೆ ನಡೆಯಲಿದೆ. ಮುಂದಿನ ಕ್ರಮದ ಬಗ್ಗೆಯೂ ನಿರ್ಣಯ ಕೈಗೊಳ್ಳಲು ನಿರ್ಧರಿಸಲಾಗಿದೆ.

‘ಧರ್ಮ ಸಂಸತ್‌ನಲ್ಲಿ ದೇಶ, ವಿದೇಶದ ನೂರಾರು ಪ್ರಮುಖ ಸಂತರು, ಸ್ವಾಮೀಜಿಗಳು ಭಾಗವಹಿಸಲಿದ್ದಾರೆ. ರಾಮ ಮಂದಿರ ನಿರ್ಮಾಣ ಕುರಿತು ನಮ್ಮ ತಾಳ್ಮೆ ಕಡಿಮೆಯಾಗುತ್ತಿದೆ. ಅಯೋಧ್ಯೆಯಲ್ಲಿ ರಾಮನನ್ನು ಗುಡಿಸಲಿನಿಂದ ಭವ್ಯವಾದ ಮಂದಿರಕ್ಕೆ ಸ್ಥಳಾಂತರಿಸುವ ಸಮಯ ಈಗ ಬಂದಿದೆ’ ಎಂದು ವಿಎಚ್‌ಪಿ ನಾಯಕರೊಬ್ಬರು ತಿಳಿಸಿದ್ದಾರೆ.

ADVERTISEMENT

‘ಧರ್ಮ ಸಂಸತ್‌ನಲ್ಲಿ ಮಂದಿರ ನಿರ್ಮಾಣದ ಸಮಸ್ಯೆ ಬಗ್ಗೆ ಮಾತ್ರ ಚರ್ಚಿಸುವುದಿಲ್ಲ. ಜೊತೆಗೆ ಮಂದಿರ ನಿರ್ಮಾಣದಲ್ಲಿ ವಿಳಂಬವಾಗದಂತೆ ಕ್ರಮ ತೆಗೆದುಕೊಳ್ಳುವ ಬಗ್ಗೆಯೂಚರ್ಚಿಸಲಾಗುವುದು. ಮಂದಿರ ನಿರ್ಮಾಣಕ್ಕೆ ಸಂಸತ್ತಿನಲ್ಲಿ ಕಾನೂನು ರೂಪಿಸಿ ಜಾರಿಗೆ ತರಬೇಕು ಎಂದು ನಾವು ಬಯಸುತ್ತೇವೆ. ನ್ಯಾಯಾಲಯದ ತೀರ್ಪು ಬರುವವರೆಗೆ ಕಾಯಲು ಸಾಧ್ಯವಿಲ್ಲ’ ಎಂದು ಅವರು ಹೇಳಿದ್ದಾರೆ.

ಪ್ರಯಾಗ್‌ರಾಜ್‌ನಲ್ಲಿರುವ ವಿಎಚ್‌ಪಿಯ ಹಿರಿಯ ನಾಯಕರು, ವಿವಿಧ ಅಖಾಡಗಳ ಸಂತರು ಹಾಗೂ ಸ್ವಾಮೀಜಿಗಳ ಜೊತೆಗೆ ಸಭೆ ನಡೆಸುತ್ತಿದ್ದು, ಮಂದಿರ ನಿರ್ಮಾಣಕ್ಕೆ ಬೆಂಬಲ ಕೋರುತ್ತಿದ್ದಾರೆ. ಧರ್ಮ ಸಂಸತ್‌ನಲ್ಲಿ ಈ ವಿಷಯಕ್ಕೆ ಹೆಚ್ಚಿನ ಒತ್ತು ನೀಡುವಂತೆ ಮನವೊಲಿಸುತ್ತಿದ್ದಾರೆ.

ಏತನ್ಮಧ್ಯೆ ರಾಜಸ್ಥಾನದಿಂದ ಅಯೋಧ್ಯೆಗೆ ಕಲ್ಲುಗಳ ಪೂರೈಕೆಯನ್ನು ತ್ವರಿತಗೊಳಿಸಲಾಗಿದೆ. ಕೆಲವು ದಿನಗಳಿಂದ ಲಾರಿಗಳ ಮೂಲಕ ಕಲ್ಲುಗಳನ್ನು ತರುತ್ತಿರುವುದು ಏರಿಕೆಯಾಗಿದೆ.

‘ತೊಗಾಡಿಯಾ ಅಪ್ರಸ್ತುತ’

ಲಖನೌ (ಪಿಟಿಐ): ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ತಮ್ಮ ಪಕ್ಷ ಬದ್ಧವಿದ್ದು, ಈ ವಿಷಯದಲ್ಲಿ ಅಂತರರಾಷ್ಟ್ರೀಯ ಹಿಂದೂ ಪರಿಷತ್‌ ಅಧ್ಯಕ್ಷ ಪ್ರವೀಣ ತೊಗಾಡಿಯಾ ಅವರು ಈಗ ಅಪ್ರಸ್ತುತ ಎಂದು ಬಿಜೆಪಿಯಉತ್ತರ ಪ್ರದೇಶ ಘಟಕದ ಅಧ್ಯಕ್ಷ ಮಹೇಂದ್ರನಾಥ್‌ ಪಾಂಡೆ ಹೇಳಿದ್ದಾರೆ.

‘ಮಂದಿರ ನಿರ್ಮಾಣ ವಿಷಯದಲ್ಲಿಬಿಜೆಪಿ ನಿಲುವು ಸ್ಪಷ್ಟವಾಗಿದೆ. ಆದರೆ, ಮಂದಿರ ನಿರ್ಮಾಣ ಒಮ್ಮತದಿಂದ ಅಥವಾ ನ್ಯಾಯಾಲಯದ ತೀರ್ಪಿನ ಪ್ರಕಾರ ಆಗಬೇಕು ಎಂಬುದು ಬಿಜೆಪಿಯ ನಿಲುವು’ ಎಂದು ಅವರು ತಿಳಿಸಿದ್ದಾರೆ.

ಮಂದಿರ ನಿರ್ಮಾಣ ಕುರಿತು ಕೇಂದ್ರ ಸರ್ಕಾರವು ಕಾನೂನು ಜಾರಿಗೆ ತರಬೇಕು ಅಥವಾ ಸುಗ್ರೀವಾಜ್ಞೆ ಹೊರಡಿಸಬೇಕು ಎಂದು ತೊಗಾಡಿಯಾ ಇತ್ತೀಚೆಗೆ ಒತ್ತಾಯಿಸಿದ್ದರು.

ಮಂದಿರ: ವಿಚಾರಣೆ ಇಂದು ಶುರು

ನವದೆಹಲಿ: ಅಯೋಧ್ಯೆಯರಾಮ ಜನ್ಮಭೂಮಿ–ಬಾಬರಿ ಮಸೀದಿ ವಿವಾದದ ವಿಚಾರಣೆಯನ್ನು ಸುಪ್ರೀಂ ಕೋರ್ಟ್‌ ಸೋಮವಾರ ಆರಂಭಿಸಲಿದೆ.ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ಅವರ ನೇತೃತ್ವದ ಪೀಠ ವಿಚಾರಣೆ ನಡೆಸಲಿದೆ. ನ್ಯಾಯಮೂರ್ತಿಗಳಾದ ಸಂಜಯ್‌ ಕಿಶನ್‌ ಕೌಲ್‌ ಹಾಗೂ ಕೆ.ಎಂ.ಜೋಸೆಫ್‌ ಅವರೂ ಪೀಠದಲ್ಲಿ ಇದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.