ರಾಮಮಂದಿರ ಹಾಗೂ ಅಯೋಧ್ಯೆಯ ವಿಮಾನ ನಿಲ್ದಾಣದ ಉದ್ಘಾಟನೆಯ ಕಾರಣಕ್ಕಾಗಿ ನಗರದ ಎಲ್ಲೆಡೆ ರಾಮಮಂದಿರ ಹಾಗೂ ವಿಮಾನ ಹಾರಾಟದ ಚಿತ್ರವಿರುವ ದೊಡ್ಡ ದೊಡ್ಡ ಪೋಸ್ಟರ್‌ಗಳನ್ನು ಅಳವಡಿಸಲಾಗುತ್ತಿದೆ. ‘ಅಯೋಧ್ಯೆಯು ಮರ್ಯಾದೆ, ಧರ್ಮ ಹಾಗೂ ಸಂಸ್ಕೃತಿಯ ನಗರವಾಗಿದೆ’ ಎಂದು ಪೋಸ್ಟರ್‌ಗಳಲ್ಲಿ ಬರೆಯಲಾಗಿದೆ.
ಪಿಟಿಐ
ನವದೆಹಲಿ: ರಾಮಮಂದಿರ ಉದ್ಘಾಟನಾ ಕಾರ್ಯಕ್ರಮವು ‘ಇಂಡಿಯಾ’ ಮೈತ್ರಿಕೂಟದಲ್ಲಿ ಗೊಂದಲ ಹಾಗೂ ಸಂದಿಗ್ಧ ಪರಿಸ್ಥಿತಿಯನ್ನುಂಟು ಮಾಡಿದೆ. ಕಾಂಗ್ರೆಸ್ ತನ್ನ ನಿರ್ಧಾರವನ್ನು ಇದುವರೆಗೂ ತಿಳಿಸದೇ ಇರುವುದೇ ಇದಕ್ಕೆ ಮುಖ್ಯ ಕಾರಣ. ಬಿಜೆಪಿಯ ಜಾಲದಲ್ಲಿ ಸಿಲುಕಿಕೊಳ್ಳದಂತೆ ಕಾಂಗ್ರೆಸ್‌ಗೆ ಮೈತ್ರಿಕೂಟದ ಇತರ ಪಕ್ಷಗಳು ಎಚ್ಚರಿಕೆಯನ್ನೂ ನೀಡಿವೆ.
ತೃಣಮೂಲ ಕಾಂಗ್ರೆಸ್, ಮುಸ್ಲಿಂ ಲೀಗ್ ಹಾಗೂ ಸಿಪಿಎಂ ಪಕ್ಷಗಳು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ಸಾರ್ವಜನಿಕವಾಗಿ ಹೇಳಿಕೆ ನೀಡಿವೆ. ‘ಇಂಡಿಯಾ’ದ ಅಂಗ ಪಕ್ಷಗಳ ಈ ನಿರ್ಧಾರವು ಕಾಂಗ್ರೆಸ್‌ಗೆ ಹೆಚ್ಚಿನ ಸಂಕಷ್ಟವನ್ನು ತಂದೊಡ್ಡಿದೆ. ಕಾರ್ಯಕ್ರಮಕ್ಕೆ ಹೋಗುವುದು ಅಥವಾ ಹೋಗದಿರುವುದು ಕಾಂಗ್ರೆಸ್‌ಗೆ ಕಷ್ಟವಾಗಲಿದೆ. ಕೇರಳ ಕಾಂಗ್ರೆಸ್‌ನ ಹಿರಿಯ ನಾಯಕ, ಸಂಸದ ಕೆ.ಮುರಳೀಧರನ್ ಅವರು ‘ಕಾರ್ಯಕ್ರಮದಲ್ಲಿ ಪಕ್ಷವು ಭಾಗವಹಿಸಬಾರದು’ ಎಂದಿದ್ದಾರೆ.
‘ಕೆಲವರು ಈ ವಿಚಾರವನ್ನು ರಾಜಕೀಯಗೊಳಿಸುತ್ತಿದ್ದಾರೆ. ಒಂದು ವೇಳೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದರೆ ಪಕ್ಷವು ಬಿಜೆಪಿ ಹೇಳಿದಂತೆ ಕೇಳಿತು ಎಂದು ಹೇಳುತ್ತಾರೆ. ಕಾರ್ಯಕ್ರಮಕ್ಕೆ ಹೋಗಲಿಲ್ಲ ಎಂದರೆ, ಇವರು ಹಿಂದೂ ವಿರೋಧಿಗಳು ಎನ್ನುತ್ತಾರೆ. ಆದರೆ, ಇದು ಸರಿಯಲ್ಲ. ಕಾರ್ಯಕ್ರಮಕ್ಕೆ ಹೋಗದಿರುವುದು ಹಿಂದೂ ವಿರೋಧಿ ಆಗುವುದಿಲ್ಲ’ ಎನ್ನುತ್ತಾರೆ ಸಂಸದ ಶಶಿ ತರೂರ್.
‘ಪಕ್ಷದ ನಾಯಕರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕು’ ಎನ್ನುವುದು ರಾಜ್ಯಸಭಾ ಸದಸ್ಯ ದಿಗ್ವಿಜಯ ಸಿಂಗ್ ಅವರ ಅಭಿಪ್ರಾಯ.
ಬಿಜೆಪಿಯ ಕಾರ್ಯಕ್ರಮದಲ್ಲಿ ಭಾಗವಹಿಸಲು ಯಾರು ಇಚ್ಛಿಸುತ್ತಾರೆ. ಇದು ರಾಷ್ಟ್ರೀಯ ಕಾರ್ಯಕ್ರಮವಲ್ಲ ಇದು ಬಿಜೆಪಿಯ ಕಾರ್ಯಕ್ರಮ. ಇದರಲ್ಲಿ ಯಾವ ದೈವತ್ವವೂ ಇಲ್ಲ. ಬಿಜೆಪಿ ಕಾರ್ಯಕ್ರಮ ಮುಗಿದ ಬಳಿಕ ನಾವು ಅಯೋಧ್ಯೆಗೆ ಭೇಟಿ ನೀಡುತ್ತೇವೆ. ಅವರು ರಾಮನನ್ನು ಅಪಹರಿಸಿದ್ದಾರೆ ಎನ್ನುವಂತಿದೆ.ಸಂಜಯ್ ರಾವುತ್, ಶಿವಸೇನಾ (ಉದ್ಧವ್ ಬಣ) ನಾಯಕ
ನಮಗೆ ಇದುವರೆಗೂ ಆಮಂತ್ರಣ ಬಂದಿಲ್ಲ. ಒಂದು ವೇಳೆ ಬಂದರೆ ಕಾರ್ಯಕ್ರಮಕ್ಕೆ ಹೋಗುತ್ತೇವೆ. ಇಲ್ಲವಾದಲ್ಲಿ ಉದ್ಘಾಟನೆಯಾದ ಬಳಿಕ ಒಂದು ದಿನ ಅಖಿಲೇಶ್ ಯಾದವ್ ಅವರು ಅಯೋಧ್ಯೆಗೆ ಹೋಗುತ್ತಾರೆ.ಡಿಂಪಲ್ ಯಾದವ್, ಹಿರಿಯ ನಾಯಕಿ, ಎಸ್‌ಪಿ
ನನಗೆ ಇದುವರೆಗೂ ಆಮಂತ್ರಣ ಬಂದಿಲ್ಲ. ಒಂದು ವೇಳೆ ಆಮಂತ್ರಣ ಬಂದರೆ ಕಾರ್ಯಕ್ರಮಕ್ಕೆ ಹೋಗುತ್ತೇನೆ.ಹೇಮಂತ್ ಸೊರೇನ್, ಜಾರ್ಖಂಡ್ ಮುಖ್ಯಮಂತ್ರಿ
ಬಿಜೆಪಿಯು ಕಾಂಗ್ರೆಸ್‌ಗೆ ಒಂದು ಸರಳ ಪ್ರಶ್ನೆಯನ್ನು ಕೇಳಬಯಸುತ್ತದೆ: ಮಾಕ್ಸ್‌ವಾದಿ ಪಕ್ಷ ಎಡರಂಗ ಪಕ್ಷಗಳು ಕೆಲವು ಧಾರ್ಮಿಕ ನಾಯಕರು ಒಡ್ಡಿರುವ ಬೆದರಿಕೆಗೆ ಕಾಂಗ್ರೆಸ್ ಬಗ್ಗುತ್ತದೆಯೇ?.ಕೆ.ಸುರೇಂದ್ರನ್, ಕೇರಳದ ಬಿಜೆಪಿ ಘಟಕ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.