ದಾಜಿ ಪನ್ಶೀಕರ್
ಚಿತ್ರಕೃಪೆ: X/@DrSEShinde
ಠಾಣೆ (ಮಹಾರಾಷ್ಟ್ರ): ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ವಿದ್ವಾಂಸ, ಲೇಖಕ ದಾಜಿ ಪನ್ಶೀಕರ್ ಅವರು ಠಾಣೆಯಲ್ಲಿರುವ ತಮ್ಮ ನಿವಾಸದಲ್ಲಿ ಇಂದು ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
ದಾಜಿ ಅವರಿಗೆ 92 ವರ್ಷ ವಯಸ್ಸಾಗಿತ್ತು.
ತಮ್ಮ ಜೀವನದ ಐದು ದಶಕಗಳಿಗೂ ಹೆಚ್ಚು ಸಮಯವನ್ನು ಹಿಂದೂ ಧರ್ಮಗ್ರಂಥಗಳ ಪ್ರಸಾರ ಮತ್ತು ಅರ್ಥ ವ್ಯಾಖ್ಯಾನಕ್ಕೆ ಮೀಸಲಿಟ್ಟಿದ್ದ ದಾಜಿ, ಮಹಾಕಾವ್ಯಗಳಾದ ರಾಮಾಯಣ, ಮಹಾಭಾರತ ಹಾಗೂ ಸಂತ ಕವಿಗಳ ಸಾಹಿತ್ಯದ ವಿದ್ವಾಂಸರಾಗಿದ್ದರು. ದೇಶ–ವಿದೇಶಗಳಲ್ಲಿ ಸುಮಾರು 2,500ಕ್ಕೂ ಹೆಚ್ಚು ಉಪನ್ಯಾಸಗಳನ್ನು ನೀಡಿದ್ದರು.
ಮರಾಠಿ ದಿನ ಪತ್ರಿಕೆ ಸಾಮ್ನಾದಲ್ಲಿ ಸತತ 16 ವರ್ಷ ಅವರ ಅಂಕಣ ಪ್ರಸಾರವಾಗಿತ್ತು.
'ಮಹಾಭಾರತ: ಏಕ್ ಸುದಾಚಾ ಪ್ರವಾಸ್', 'ಕರ್ಣ: ಖರ ಕೋನ್ ತೋಟಾ?', 'ಕಥಾಮೃತ್', 'ಕಣಿಕನೀತಿ' ಹಾಗೂ 'ಅಪರಿಚಿತ ರಾಮಾಯಣ' – ಇವು ಅವರ ಪ್ರಮುಖ ಕೃತಿಗಳು.
ತಮ್ಮ ಸಹೋದರ, ನಟ ಪ್ರಭಾಕರ್ ಪನ್ಶೀಕರ್ ಸ್ಥಾಪಿಸಿದ ನಾಟಕ ಸಂಸ್ಥೆ 'ನಾಟ್ಯಸಂಪದ ನಾಟ್ಯ ಸಂಸ್ಥೆ'ಯ ವ್ಯವಸ್ಥಾಪಕರೂ ಆಗಿದ್ದ ದಾಜಿ, ವಿವಿಧ ಕ್ಷೇತ್ರಗಳ ದಿಗ್ಗಜರೊಂದಿಗೆ ನಿಕಟವಾಗಿ ಕೆಲಸ ಮಾಡಿದ್ದರು.
ಪತ್ನಿ, ಇಬ್ಬರು ಹೆಣ್ಣುಮಕ್ಕಳು, ಒಬ್ಬ ಮಗ ಸೇರಿದಂತೆ ಕುಟುಂಬವರನ್ನು ದಾಜಿ ಅಗಲಿದ್ದಾರೆ. ಠಾಣೆಯ ಪಶ್ಚಿಮದಲ್ಲಿರುವ ಜವಾಹರ್ ಬಾಗ್ ಸ್ಮಶಾನದಲ್ಲಿ ಇಂದು (ಶನಿವಾರ) ಅಂತ್ಯಕ್ರಿಯೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.