ಮುಂಬೈ: ಅಂಬೇರ್‌ನಾಥ್ ನೇತಾಜಿ ಮೈದಾನದಲ್ಲಿ ಶುಕ್ರವಾರ ನಡೆದಕಾರ್ಯಕ್ರಮವೊಂದರ ವೇಳೆ ರಿಪಬ್ಲಿಕ್ ಪಾರ್ಟಿ ಆಫ್ ಇಂಡಿಯಾ (ಆರ್‌ಪಿಐ) ಅಧ್ಯಕ್ಷ, ಕೇಂದ್ರ ಸಾಮಾಜಿಕ ನ್ಯಾಯ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಮೇಲೆ ಹಲ್ಲೆ ನಡೆದಿದೆ.
ಹಲ್ಲೆ ನಡೆಸಿದ ವ್ಯಕ್ತಿಯನ್ನು ಪ್ರವೀಣ್ ಗೋಸವಿ ಎಂದು ಗುರುತಿಸಲಾಗಿದೆ. ಸಚಿವರ ಮೇಲೆ ಹಲ್ಲೆ ನಡೆಸಿದ ವ್ಯಕ್ತಿ ಮೇಲೆ ಸುಮಾರು 20ರಿಂದ 30 ಮಂದಿ ಸಭಿಕರು ಹಲ್ಲೆ ನಡೆಸಿದ್ದು, ಗಾಯಗೊಂಡ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.ಈತನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಆರ್‌ಪಿಐ ಪಕ್ಷದ ವಕ್ತಾರ ಮತ್ತು ಪ್ರಧಾನ ಕಾರ್ಯದರ್ಶಿ ಅವಿನಾಶ್ ಮಹತೇಕರ್,ಪಕ್ಷದ ನಾಯಕರಿಗೆ ಸ್ಥಳೀಯ ಪೊಲೀಸರು ಸರಿಯಾದ ಭದ್ರತೆ ನೀಡಿಲ್ಲ ಎಂದು ದೂರಿದ್ದಾರೆ.ಅಠವಾಳೆ ಅವರು ಕಾರ್ಯಕ್ರಮ ಮುಗಿಸಿ ಅಲ್ಲಿಂದ ಹೊರಡುವ ಹೊತ್ತಿಗೆ ಈ ಘಟನೆ ನಡೆದಿದೆ.ಕೇಂದ್ರ ಸಚಿವರಾದ ಅವರಿಗೆ ಜೆಡ್ ಪ್ಲಸ್ ಭದ್ರತೆ ಇದ್ದರೂ ಸ್ಥಳೀಯ ಪೊಲೀಸರು ಸರಿಯಾದ ಭದ್ರತಾ ವ್ಯವಸ್ಥೆ ಮಾಡಿಲ್ಲ ಎಂದಿದ್ದಾರೆ ಮಹತೇಕರ್.
ಸಚಿವರ ಮೇಲಿನ ಹಲ್ಲೆ ಖಂಡಿಸಿ ಭಾನುವಾರ ಉಲ್ಲಾಸ್‍ನಗರದಲ್ಲಿ ಬಂದ್‍ಗೆ ಕರೆ ನೀಡಲಾಗಿದೆ.ಅಂಬೇರ್‌ನಾಥ್, ಉಲ್ಲಾಸ್‍ನಗರ ಮತ್ತು ಕಲ್ಯಾಣ ನಗರದಲ್ಲಿ ಬಂದ್ ಆಚರಿಸಲಾಗುವುದು ಎಂದು ಉಲ್ಲಾಸ್‍ನಗರದ ಆರ್‌ಪಿಐ ಪಕ್ಷದ ಅಧ್ಯಕ್ಷ ಭಗವಾನ್ ಭಲೇರಾವ್ ಹೇಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.