ಮುಂಬೈ: ಮಹಾರಾಷ್ಟ್ರದ ಶಿವಸೇನೆ ಪಕ್ಷದಲ್ಲಿ ಬಂಡಾಯ ಇನ್ನೂ ಶಮನಗೊಂಡಿರುವ ಲಕ್ಷಣಗಳು ಕಾಣುತ್ತಿಲ್ಲ, ಇದೀಗ ಪಕ್ಷದ ನಾಯಕ ಸ್ಥಾನಕ್ಕೆ ಮಾಜಿ ಸಚಿವ ರಾಮದಾಸ್ ಕದಂ ರಾಜೀನಾಮೆ ನೀಡಿದ್ದಾರೆ.
ಉದ್ಧವ್ ಠಾಕ್ರೆ ಬಣದಲ್ಲಿ ಗುರುತಿಸಿಕೊಂಡಿದ್ದ ರಾಮದಾಸ್ ಕದಂ ಅವರು ಪಕ್ಷದಲ್ಲಿ ಪ್ರಮುಖ ನಾಯಕರಾಗಿದ್ದರು. ಅವರ ರಾಜೀನಾಮೆಯಿಂದ ಮಾಜಿ ಮುಖ್ಯಮಂತ್ರಿಉದ್ಧವ್ ಠಾಕ್ರೆ ಅವರಿಗೆ ಮತ್ತಷ್ಟು ಸಂಕಷ್ಟ ಎದುರಾಗಿದೆ ಎಂದು ರಾಜಕೀಯ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ರಾಜೀನಾಮೆ ನೀಡಿದ ಬಳಿಕ ಅವರು ಮಾಧ್ಯಮಗಳ ಜೊತೆ ಮಾತನಾಡಿಮಾಜಿ ಸಿಎಂ ಠಾಕ್ರೆ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಎನ್ಸಿಪಿ ಮತ್ತು ಕಾಂಗ್ರೆಸ್ ಪಕ್ಷದೊಂದಿಗೆ ಕೈಜೋಡಿಸುವ ಮೂಲಕ ಉದ್ಧವ್ ಠಾಕ್ರೆ ಅವರು ಬಾಳಾಸಾಹೇಬ್ ಠಾಕ್ರೆ ಅವರ ಸಿದ್ಧಾಂತಗಳನ್ನು ಗಾಳಿಗೆ ತೋರಿದ್ದಾರೆ ಎಂದು ಆರೋಪ ಮಾಡಿದ್ದಾರೆ.
ಈಗಾಗಲೇ ರಾಮದಾಸ್ ಕದಂ ಅವರು ಏಕನಾಥಶಿಂದೆ ನೇತೃತ್ವದ ಬಣದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ಕೆಲ ದಿನಗಳ ಹಿಂದೆ ಮಾತನಾಡಿದ್ದ ರಾಮದಾಸ್, ನಾನು ಶಿವಸೇನೆಯಲ್ಲಿದ್ದೇನೆ. ಉದ್ಧವ್ ಠಾಕ್ರೆ ಅವರಿಗೆ ಬೆಂಬಲ ಮುಂದುವರೆಸುತ್ತೇನೆಂದು ಹೇಳಿಕೆ ನೀಡಿದ್ದರು.
ಉದ್ಧವ್ ಠಾಕ್ರೆ ವಿರುದ್ಧ ಬಂಡಾಯ ಎದ್ದು ಏಕನಾಥಶಿಂದೆ ಬಣ ಈಗಾಗಲೇ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡಿದ್ದು ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ರಚನೆ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.