ADVERTISEMENT

ಕೋವಿಡ್‌ಗೆ ಔಷಧ ಕಂಡು ಹಿಡಿದ ಪತಂಜಲಿ: ಬಾಬಾ ರಾಮ್‌ದೇವ್ ಹೇಳಿಕೆ

ಏಜೆನ್ಸೀಸ್
Published 23 ಜೂನ್ 2020, 9:54 IST
Last Updated 23 ಜೂನ್ 2020, 9:54 IST
ಬಾಬಾ ರಾಮದೇವ್‌
ಬಾಬಾ ರಾಮದೇವ್‌   

ಹರಿದ್ವಾರ: ಇಡೀ ಜಗತ್ತು ಕೋವಿಡ್‌ಗೆ ಲಸಿಕೆ ಕಂಡು ಹಿಡಿಯಲು ಶತಪ್ರಯತ್ನ ನಡೆಸುತ್ತಿರುವ ಸಮಯದಲ್ಲಿ, ಕೊರೊನಾ ವೈರಸ್‌ ವಿರುದ್ಧ ಹೋರಾಡಬಲ್ಲ ಮೊದಲ ಆಯುರ್ವೇದಿಕ್ ಔಷಧವನ್ನು ಅಭಿವೃದ್ದಿಪಡಿಸಲಾಗಿದೆ ಎಂದು ಯೋಗಗುರು ಬಾಬಾ ರಾಮ್‌ದೇವ್ ಅವರು ಮಂಗಳವಾರ ಹೇಳಿದ್ದಾರೆ.

ರಾಮ್‌ದೇವ್ ಅವರ ಪತಂಜಲಿ ಸಂಸ್ಥೆ ಅಭಿವೃದ್ಧಿಪಡಿಸಿರುವ ‘ಕೊರೊನಿಲ್’ ಮತ್ತು ‘ಸ್ವಸಾರಿ’ ಎಂಬ ಎರಡು ಔಷಧಿಗಳು ರೋಗಿಗಳ ಮೇಲೆ ಶೇ 100ರಷ್ಟು ಸಕಾರಾತ್ಮಕ ಫಲಿತಾಂಶ ನೀಡಿವೆ ಎಂದು ಸಂಸ್ಥೆ ಹೇಳಿಕೊಂಡಿದೆ.

‘ಇಡೀ ಜಗತ್ತು ಕೋವಿಡ್ ಲಸಿಕೆಗೆ ಕಾದು ಕುಳಿತಿರುವಾಗ ಪತಂಜಲಿ ಸಂಶೋಧನಾ ಸಂಸ್ಥೆ ಹಾಗೂ ಎನ್‌ಐಎಂಎಸ್ ಸಂಸ್ಥೆಗಳು ಒಗ್ಗೂಡಿ ಮೊದಲ ಆಯುರ್ವೇದಿಕ್ ಔಷಧ ಸಿದ್ಧಪಡಿಸಿವೆ. ಈ ಔಷಧಿಗಳು ದೀರ್ಘ ಸಂಶೋಧನೆಯಿಂದ, ಪ್ರಾಯೋಗಿಕವಾಗಿ ತಯಾರಾಗಿವೆ ಎಂದು ರಾಮ್‌ದೇವ್ ಅವರು ಹರಿದ್ವಾರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. 3–7 ದಿನಗಳ ಅವಧಿಯಲ್ಲಿ ರೋಗಿಗಳು ಗುಣಮುಖರಾಗುತ್ತಾರೆ ಎಂದು ಅವರು ಆಶಾಭಾವ ವ್ಯಕ್ತಪಡಿಸಿದ್ದಾರೆ.

ADVERTISEMENT

‘ಎರಡು ಪ್ರಯೋಗಗಳನ್ನು ಔಷಧಗಳ ಮೇಲೆ ನಡೆಸಲಾಗಿದೆ. ಮೊದಲನೆಯ ಕ್ಲಿನಿಕಲ್ ಆಧರಿತ ಅಧ್ಯಯನವನ್ನು ದೆಹಲಿ, ಅಹಮದಾಬಾದ್ ಸೇರಿ ಹಲವು ನಗರಗಳಲ್ಲಿ ಕೈಗೊಳ್ಳಲಾಗಿದೆ. 280 ರೋಗಿಗಳು ಶೇ 100ರಷ್ಟು ಗುಣಮುಖರಾಗಿದ್ದಾರೆ. ಈ ಔಷಧದ ಮೂಲಕ ಕೊರೊನಾ ವೈರಸ್‌ ಅನ್ನು ನಿಯಂತ್ರಿಸಬಹುದು’ ಎಂದರು.

ಕೊರೊನಾ ಕಿಟ್ ₹545ಕ್ಕೆ ಲಭ್ಯ ಎಂದು ಪತಂಜಲಿ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಆಚಾರ್ಯ ಬಾಲಕೃಷ್ಣ ಅವರು ತಿಳಿಸಿದರು. ಈ ಕಿಟ್ 30 ದಿನ ಬಳಸಬಹುದು.

ಮುಂದಿನ ಒಂದು ವಾರದೊಳಗೆ ಎಲ್ಲ ಪತಂಜಲಿ ಮಳಿಗೆಗಳಲ್ಲಿ ಕಿಟ್ ಲಭ್ಯವಾಗಲಿದೆ. ಕಿಟ್‌ಗಳನ್ನು ಗ್ರಾಹಕರಿಗೆ ತಲುಪಿಸಲು ಆ್ಯಪ್ ಬಿಡುಗಡೆ ಮಾಡಲಾಗುತ್ತಿದೆ ಎಂದು ರಾಮ್‌ದೇವ್ ತಿಳಿಸಿದರು.

ಔಷಧಿಗಳನ್ನು ರೋಗಿಗಳ ಮೇಲೆ ಪ್ರಯೋಗಿಸಲು ಅಗತ್ಯ ಅನುಮತಿಯನ್ನು ಸಂಬಂಧಪಟ್ಟ ಪ್ರಾಧಿಕಾರದಿಂದ ಪಡೆಯಲಾಗಿದೆ ಎಂದು ರಾಮ್‌ದೇವ್ ಒತ್ತಿ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.