ರಾಮದಾಸ್, ಅನ್ಬುಮಣಿ
ಚೆನ್ನೈ: ತಮಿಳುನಾಡಿನಲ್ಲಿ ಪಿಎಂಕೆ ಪಕ್ಷದ ಸಂಸ್ಥಾಪಕ ಅಧ್ಯಕ್ಷರಾಗಿರುವ ಎಸ್.ರಾಮದಾಸ್ ತಮ್ಮ ಪುತ್ರ ಅನ್ಬುಮಣಿ ರಾಮದಾಸ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ.
ಹಲವು ತಿಂಗಳುಗಳಿಂದ ರಾಮದಾಸ್ ಕುಟುಂಬದಲ್ಲಿ ಪಕ್ಷದ ಮೇಲೆ ಹಿಡಿತ ಸಾಧಿಸಲು ಕಲಹ ನಡೆಯುತ್ತಿತ್ತು. ಇದೀಗ ರಾಮದಾಸ್ ಅವರು ಪುತ್ರನನ್ನು ಪಕ್ಷದಿಂದ ಹೊರ ಹಾಕಿದ್ದಾರೆ.
ಈ ಬಗ್ಗೆ ಮಾಧ್ಯಮಗೋಷ್ಠಿ ನಡೆಸಿದ ರಾಮದಾಸ್ ಅವರು ಅನ್ಬುಮಣಿಯನ್ನು ಪಕ್ಷದಿಂದ ಹೊರ ಹಾಕಲಾಗಿದೆ ಎಂದು ಹೇಳಿದ್ದಾರೆ.
ಪಕ್ಷದ ಅಧ್ಯಕ್ಷರ ನಿರ್ಧಾರವೇ ಅಂತಿಮವಾಗಿದ್ದು ಇದನ್ನು ಯಾರು ವಿರೋಧಿಸಲು ಸಾಧ್ಯವಿಲ್ಲ ಎಂದರು. ಅನ್ಬುಮಣಿ ಪಿಎಂಕೆ ನಾಶಮಾಡಲು ಪ್ರಯತ್ನಿಸುತ್ತಿದ್ದಾರೆ. ಅವರು ರಾಜಕೀಯದಲ್ಲಿ ಇರಲು ಅರ್ಹರಲ್ಲ ಎಂದರು. ನನ್ನ ಅನುಮತಿ ಇಲ್ಲದೇ ಅವರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದರು ಎಂದು ಆರೋಪಿಸಿದರು.
ಅನ್ಬುಮಣಿ ಅವರು ಈ ಆರೋಪಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಉತ್ತರ ತಮಿಳುನಾಡಿನಲ್ಲಿ ಅವರು ತಮ್ಮ ಪಾದಯಾತ್ರೆಯನ್ನು ಮುಂದುವರಿಸಿದ್ದಾರೆ.
ಕಳೆದ ಏಪ್ರಿಲ್ ತಿಂಗಳಲ್ಲಿ ರಾಮದಾಸ್ ಅವರು ಪಿಎಂಕೆ ಅಧ್ಯಕ್ಷರಾಗಿ ಆಯ್ಕೆಯಾಗಿದ್ದರು. ಅನ್ಬುಮಣಿಯನ್ನು ಕಾರ್ಯಕಾರಿ ಅಧ್ಯಕ್ಷರಾಗಿ ನಿಯೋಜಿಸಿದ್ದರು. ಅನ್ಬುಮಣಿಗೆ ಪಕ್ಷದ ಅಧ್ಯಕ್ಷ ಹುದ್ದೆಯ ಮೇಲೆ ಕಣ್ಣಿತ್ತು. ಆಗಿನಿಂದ ಅಪ್ಪ–ಮಗನ ನಡುವೆ ಕಲಹ ಆರಂಭವಾಗಿತ್ತು.
ಅನ್ಬುಮಣಿ ಬಿಜೆಪಿಗೆ ಹತ್ತಿರವಾಗುತ್ತಿರುವುದು ರಾಮದಾಸ್ ಅಸಮಾಧಾನಕ್ಕೆ ಕಾರಣ ಎನ್ನಲಾಗಿದೆ. ಬಿಜೆಪಿಯೊಂದಿಗಿನ ಮೈತ್ರಿಯ ಪರಿಣಾಮ ಪಿಎಂಕೆಗೆ ತೀವ್ರ ಹಿನ್ನಡೆಯಾಗಿದೆ ಎಂಬುದು ರಾಮದಾಸ್ ವಾದ ಎನ್ನಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.