ADVERTISEMENT

ರಾಣಾ ಗಡೀಪಾರಿನಲ್ಲಿ ಪ್ರಮುಖ ಪಾತ್ರ ವಹಿಸಿದ ವಕೀಲ ದಯಾನ್‌ ಅವರ ಬೆಂಗಳೂರಿನ ನಂಟು

ಪಿಟಿಐ
Published 10 ಏಪ್ರಿಲ್ 2025, 14:18 IST
Last Updated 10 ಏಪ್ರಿಲ್ 2025, 14:18 IST
<div class="paragraphs"><p>ದಯಾನ್ ಕೃಷ್ಣನ್</p></div>

ದಯಾನ್ ಕೃಷ್ಣನ್

   

ಪಿಟಿಐ ಚಿತ್ರ

ನವದೆಹಲಿ: 2008ರಲ್ಲಿ ಮುಂಬೈಯಲ್ಲಿ ನಡೆದಿದ್ದ ಭಯೋತ್ಪಾದಕರ ದಾಳಿ (26/11) ಪ್ರಕರಣದಲ್ಲಿ ಭಾರತಕ್ಕೆ ಬೇಕಾಗಿದ್ದ ಪ್ರಮುಖ ಆರೋಪಿ ತಹವ್ವುರ್ ರಾಣಾ ಅಮೆರಿಕದಿಂದ ಗಡೀಪಾರಾಗಲು ಅಲ್ಲಿನ ನ್ಯಾಯಾಲಯದಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ದಯಾನ್ ಕೃಷ್ಣನ್ ಅವರೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ವಕೀಲರಾಗಿ ದೆಹಲಿಯಲ್ಲಿ ವಾದ ಮಂಡಿಸಲಿದ್ದಾರೆ.

ADVERTISEMENT

‘ಇದೇ ಪ್ರಕರಣದಲ್ಲಿ ಭಾಗಿಯಾಗಿದ್ದ ರಾಣಾ ಆಪ್ತ ಡೇವಿಡ್ ಹೆಡ್ಲಿ ಅಲಿಯಾಸ್ ದಾವೂದ್ ಗಿಲಾನಿ ಅರ್ಜಿಯನ್ನು ಅಮೆರಿಕ ನ್ಯಾಯಾಲಯ ವಜಾಗೊಳಿಸಿದ್ದು, ಈತನನ್ನೂ ಶೀಘ್ರದಲ್ಲಿ ಭಾರತಕ್ಕೆ ಕರೆತರಲಾಗುವುದು. 26/11 ಪ್ರಕರಣದ ಪ್ರಮುಖ ರೂವಾರಿ ರಾಣಾನನ್ನು ಭಾರತಕ್ಕೆ ಕರೆತಂದು ನ್ಯಾಯಾಂಗ ಪ್ರಕ್ರಿಯೆಗೆ ಒಳಪಡಿಸುವ ಹಲವು ವರ್ಷಗಳ ಪ್ರಯತ್ನ ಕಡೆಗೂ ಕೈಗೂಡಿದೆ’ ಎಂದು ಎನ್‌ಐಎ ಗುರುವಾರ ಹೇಳಿದೆ.

ಕೃಷ್ಣನ್ ಅವರು 1993ರಲ್ಲಿ ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆ ವಿಶ್ವವಿದ್ಯಾಲಯದಿಂದ ಪದವಿ ಪಡೆದವರು. ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಮೂರ್ತಿಯಾಗಿದ್ದ ಸಂತೋಷ್ ಹೆಗ್ಡೆ ಅವರು ವಕೀಲರಾಗಿದ್ದಾಗ ಅವರೊಂದಿಗೆ ಕೆಲಸ ಮಾಡಿ ಅನುಭವ ಪಡೆದವರು. 1999ರಲ್ಲಿ ಸ್ವತಂತ್ರ ವಕೀಲರಾಗಿ ಕೆಲಸ ಆರಂಭಿಸಿದರು. 

2001ರ ಸಂಸತ್ ಭವನ ಮೇಲಿನ ದಾಳಿ, ಕಾವೇರಿ ನದಿ ನೀರು ಹಂಚಿಕೆ ವಿವಾದ, ದೂರಸಂಪರ್ಕಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಇವರು ನಿರ್ವಹಿಸಿದ್ದಾರೆ. 2012ರ ದೆಹಲಿ ಸಾಮೂಹಿಕ ಅತ್ಯಾಚಾರ ಪ್ರಕರಣದಲ್ಲಿ ಸ್ಪೆಷಲ್ ಪಬ್ಲಿಕ್ ಪ್ರಾಸಿಕ್ಯೂಟರ್ ಆಗಿ ನೇಮಕಗೊಂಡಿದ್ದರು. ಇನ್ನೂ ಹಲವು ಪ್ರಮುಖ ಪ್ರಕರಣಗಳಲ್ಲಿ ಇವರು ಎನ್‌ಐಎ, ದೆಹಲಿ ಸರ್ಕಾರ ಮತ್ತು ದೆಹಲಿ ಪೊಲೀಸರ ಪರ ವಾದ ಮಂಡಿಸಿದ್ದಾರೆ. 

ರವಿ ಶಂಕರನ್‌ ಗಡೀಪಾರು ಪ್ರಕರಣದಲ್ಲಿ ಬ್ರಿಟನ್‌ ನ್ಯಾಯಾಲಯದಲ್ಲಿ 2011ರಲ್ಲಿ ಭಾರತದ ಪರ ವಾದ ಮಂಡಿಸಿದ್ದರು. 26/11ರ ಪ್ರಕರಣದ ಪ್ರಮುಖ ರೂವಾರಿ ಡೇವಿಡ್ ಹೆಡ್ಲಿ ಗಡೀಪಾರು ವಿಷಯವಾಗಿ ಎನ್‌ಐಎ ರಚಿಸಿದ್ದ ನಾಲ್ವರು ಸದಸ್ಯರ ತಂಡದಲ್ಲಿ ದಯಾನ್ ಕೃಷ್ಣನ್ ಕೂಡಾ ಒಬ್ಬರಾಗಿದ್ದರು. ಷಿಕಾಗೊದಲ್ಲಿ ನಡೆದ ವಿಚಾರಣೆಯಲ್ಲಿ ಭಾಗವಹಿಸಿದ್ದರು.

ಕೃಷ್ಣನ್ ಅವರೊಂದಿಗೆ 2010ರಿಂದ ನರೇಂದರ್ ಮಾನ್‌ ಅವರು ವಿಶೇಷ ಪ್ರಾಸಿಕ್ಯೂಟರ್ ಆಗಿ ಕೆಲಸ ಮಾಡುತ್ತಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.