ADVERTISEMENT

ಮಾನಹಾನಿ ಪ್ರಕರಣ: ವೈಯಕ್ತಿಕ ಹಾಜರಾತಿ ವಿನಾಯಿತಿ ಕೋರಿದ್ದ ರಾಹುಲ್‌ ಗಾಂಧಿ ಅರ್ಜಿ ವಜಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 3 ಮೇ 2023, 11:21 IST
Last Updated 3 ಮೇ 2023, 11:21 IST
ರಾಹುಲ್‌ ಗಾಂಧಿ
ರಾಹುಲ್‌ ಗಾಂಧಿ   

ನವದೆಹಲಿ: ‘ಮೋದಿ ಉಪನಾಮ’ ಕುರಿತ ಹೇಳಿಕೆಗೆ ಸಂಬಂಧಿಸಿದ ಕ್ರಿಮಿನಲ್‌ ಮಾನನಷ್ಟ ಮೊಕದ್ದಮೆಯಲ್ಲಿ ಶಿಕ್ಷೆಗೆ ಗುರಿಯಾಗಿ, ಸಂಸತ್‌ ಸ್ಥಾನದಿಂದ ಅನರ್ಹಗೊಂಡಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ರಾಂಚಿಯ ಜನಪ್ರತಿನಿಧಿಗಳ ನ್ಯಾಯಾಲಯದಲ್ಲಿ ಹಿನ್ನೆಡೆಯಾಗಿದೆ.

ಪ್ರಕರಣದ ವಿಚಾರಣೆ ಸಂಬಂಧ ವೈಯಕ್ತಿಕ ಹಾಜರಾತಿಗೆ ವಿನಾಯಿತಿ ನೀಡುವಂತೆ ಕೋರಿ ರಾಹುಲ್ ಗಾಂಧಿ ಅವರು ನ್ಯಾಯಾಲಯದ ಮೊರೆ ಹೋಗಿದ್ದರು. ಇಂದು (ಬುಧವಾರ) ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿಯನ್ನು ವಜಾಗೊಳಿಸಿದೆ.

ರಾಂಚಿಯಲ್ಲಿ ಪ್ರದೀಪ್ ಮೋದಿ ಎಂಬುವರು ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ಹೂಡಿದ್ದರು.

ADVERTISEMENT

ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಅವರಿಗೆ ಮಾನಹಾನಿ ಪ್ರಕರಣದಲ್ಲಿ ಮಧ್ಯಂತರ ರಕ್ಷಣೆ ನೀಡಲು ಗುಜರಾತ್‌ ಹೈಕೋರ್ಟ್‌ ಮಂಗಳವಾರ ನಿರಾಕರಿಸಿದೆ.

ರಾಹುಲ್ ಅವರು ಮೋದಿ ಉಪ ನಾಮದ ಕುರಿತು 2019ರಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿ ಸೂರತ್‌ನ ಮ್ಯಾಜಿಸ್ಟ್ರೇಟ್‌ ನ್ಯಾಯಾಲಯವೊಂದು ಅವರಿಗೆ ಎರಡು ವರ್ಷ ಶಿಕ್ಷೆ ವಿಧಿಸಿತ್ತು. ಇದನ್ನು ಪ್ರಶ್ನಿಸಿ ಅವರು ಮೇಲ್ಮನವಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೇಮಂತ್‌ ಪ್ರಚ್ಚಕ್‌ ಅವರ ಪೀಠವು ಬೇಸಿಗೆ ರಜೆಯ (ಮೇ 5ರಿಂದ ಜೂನ್ 4) ನಂತರ ತೀರ್ಪು ಪ್ರಕಟಿಸುವುದಾಗಿ ಹೇಳಿದೆ.

‘ನ್ಯಾಯದ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಅರ್ಜಿಯ ವಿಚಾರಣೆ ನಡೆಸಲಾಗಿದೆ. ಮಧ್ಯಂತರ ರಕ್ಷಣೆಯನ್ನು ಈ ಹಂತದಲ್ಲಿ ನೀಡುವುದಕ್ಕೆ ಸಾಧ್ಯವೇ ಇಲ್ಲ. ಹೀಗಾಗಿ ಅರ್ಜಿದಾರರ ಮನವಿ ತಿರಸ್ಕೃತಗೊಂಡಿದೆ. ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳು ಹಾಗೂ ಮಾಹಿತಿಯನ್ನು ಸೂರತ್‌ನ ಜಿಲ್ಲಾ ನ್ಯಾಯಾಲಯದಿಂದ ತರಿಸಿಕೊಳ್ಳುವಂತೆ ರಿಜಿಸ್ಟ್ರಿ ಕಚೇರಿಗೆ ನಿರ್ದೇಶಿಸಲಾಗಿದೆ’ ಎಂದು ಪೀಠ ತಿಳಿಸಿದೆ.

ರಾಹುಲ್‌ ಪರ ನ್ಯಾಯಾಲಯಕ್ಕೆ ಹಾಜರಾಗಿದ್ದ ವಕೀಲ ಅಭಿಷೇಕ್‌ ಮನು ಸಿಂಘ್ವಿ, ‘ಹೈಕೋರ್ಟ್‌ಗೆ ಒಂದು ತಿಂಗಳು ಬೇಸಿಗೆ ರಜೆ ಇರುವುದರಿಂದಾಗಿ ಅಂತಿಮ ಆದೇಶ ಪ್ರಕಟಿಸಬೇಕು. ಇಲ್ಲವೇ ತಮ್ಮ ಕಕ್ಷಿದಾರರಿಗೆ ಮಧ್ಯಂತರ ರಕ್ಷಣೆ ನೀಡಬೇಕು’ ಎಂದು ಮನವಿ ಮಾಡಿದ್ದರು.

‘ನಾನು ವಿದೇಶ ಪ್ರಯಾಣ ಕೈಗೊಳ್ಳುತ್ತಿದ್ದೇನೆ. ಹೀಗಾಗಿ ಬೇಸಿಗೆ ರಜೆ ಬಳಿಕವೇ ಅಂತಿಮ ತೀರ್ಪು ಪ್ರಕಟಿಸಲಾಗುವುದು’ ಎಂದು ನ್ಯಾಯಮೂರ್ತಿ ಹೇಮಂತ್‌ ಹೇಳಿದ್ದರು.

‘ಮಾನಹಾನಿ ಪ್ರಕರಣದಲ್ಲಿ ವ್ಯಕ್ತಿಯೊಬ್ಬರಿಗೆ ಗರಿಷ್ಠ ಶಿಕ್ಷೆ ವಿಧಿಸಿರುವುದು ಇದೇ ಮೊದಲು. ರಾಹುಲ್‌ ವಿರುದ್ಧದ ಪ್ರಕರಣವು ಗಂಭೀರವಾದುದಲ್ಲ. ಅದು ಸಮಾಜ ವಿರೋಧಿ ಕೃತ್ಯದ ವ್ಯಾಪ್ತಿಗೂ ಒಳಪಡುವುದಿಲ್ಲ. ಶಿಕ್ಷೆಗೆ ತಡೆ ನೀಡಬೇಕು’ ಎಂದೂ ಸಿಂಘ್ವಿ ಕೋರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.