ADVERTISEMENT

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ರಂಜನ್ ಗೊಗೊಯ್

ಖಡಕ್ ಮಾತಿನ ಮೃದುಹೃದಯಿ ನ್ಯಾಯಮೂರ್ತಿ: ಗೊಗೊಯ್ ಬದುಕು ಸಾಗಿಬಂದ ಹಾದಿ

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2018, 6:07 IST
Last Updated 3 ಅಕ್ಟೋಬರ್ 2018, 6:07 IST
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್‌ಗೊಗೊಯ್
ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ರಂಜನ್‌ಗೊಗೊಯ್   

ನವದೆಹಲಿ: ಸುಪ್ರೀಂಕೋರ್ಟ್‌ನ 46ನೇಮುಖ್ಯನ್ಯಾಯಮೂರ್ತಿಯಾಗಿ ರಂಜನ್‌ ಗೊಗೊಯ್ ಮಂಗಳವಾರ ಪ್ರಮಾಣವಚನ ಸ್ವೀಕರಿಸಿದರು. ಈ ಮೂಲಕಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಯಾಗಿ ಪ್ರಮಾಣವಚನ ಸ್ವೀಕರಿಸಿದ ಈಶಾನ್ಯ ಭಾರತದ ಮೊದಲ ವ್ಯಕ್ತಿ ಎನ್ನುವ ಶ್ರೇಯಕ್ಕೂ ಗೊಗೊಯ್ ಪಾತ್ರರಾದರು. ಮುಂದಿನ ವರ್ಷ ನವೆಂಬರ್‌ವರೆಗೆ ಅವರ ಅಧಿಕಾರ ಅವಧಿ ಇದೆ. ರಾಷ್ಟ್ರಪತಿ ರಾಮನಾಥ ಕೋವಿಂದ್ ಪ್ರಮಾಣವಚನ ಬೋಧಿಸಿದರು.

ಶಿಷ್ಟಾಚಾರದಂತೆ ಮುಖ್ಯ ನ್ಯಾಯಮೂರ್ತಿ ಸ್ಥಾನಕ್ಕೆ ರಂಜನ್ ಗೊಗೊಯ್ ಅವರ ಹೆಸರನ್ನು ಈಚೆಗಷ್ಟೇ ನಿವೃತ್ತರಾದ ನ್ಯಾಯಮೂರ್ತಿ ದೀಪಕ್ ಮಿಶ್ರಾ ಶಿಫಾರಸು ಮಾಡಿದ್ದರು. ಪ್ರಸ್ತುತ ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳ ಪೈಕಿ ರಂಜನ್ ಗೊಗೊಯ್ಸೇವಾ ಹಿರಿತನದಲ್ಲಿ ಮೊದಲಿಗರಾಗಿದ್ದರು. ಮಿಶ್ರಾ ಅವರ ಪ್ರಸ್ತಾಪವನ್ನು ರಾಷ್ಟ್ರಪತಿ ರಾಮನಾಥ ಕೋವಿಂದ್ ಕಳೆದ ಸೆಪ್ಟೆಂಬರ್‌ನಲ್ಲಿ ಒಪ್ಪಿಕೊಂಡಿದ್ದರು.

ಗುವಾಹತಿ ಹೈಕೋರ್ಟ್ ನ್ಯಾಯಾಧೀಶರಾಗಿ ಗೊಗೊಯ್ ಫೆಬ್ರುವರಿ 2001ರಿಂದ ತಮ್ಮ ವೃತ್ತಿ ಆರಂಭಿಸಿದರು. 2010ರಲ್ಲಿ ದಿನಗಳಲ್ಲಿಪಂಜಾಬ್ ಮತ್ತು ಹರ್ಯಾಣ ಹೈಕೋರ್ಟ್‌ಗೆ ವರ್ಗಾವಣೆ ಮಾಡಲಾಗಿತ್ತು. 2011ರಲ್ಲಿ ಹೈಕೋರ್ಟ್ ಮುಖ್ಯ ನ್ಯಾಯಾಧೀಶರಾಗಿ ನೇಮಿಸಲಾಗಿತ್ತು. ಸುಪ್ರೀಂಕೋರ್ಟ್‌ ನ್ಯಾಯಾಧೀಶರಾಗಿ ಏಪ್ರಿಲ್ 23, 2012ರಿಂದ ಗೊಗೊಯ್ ಕೆಲಸ ಮಾಡುತ್ತಿದ್ದಾರೆ.

ADVERTISEMENT

ಕಳೆದ ಜನವರಿ 12ರಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿಗಳಾದ ಜೆ.ಚಲಮೇಶ್ವರ್, ಮದನ್ ಬಿ.ಲೊಕೂರ್ ಮತ್ತು ಜೋಸೆಫ್ ಕುರಿಯನ್ ಅವರ ಜೊತೆಗೂಡಿ ಗೊಗೊಯ್ ಪತ್ರಿಕಾಗೋಷ್ಠಿ ನಡೆಸಿದ್ದರು. ಅಂದಿನ ಮುಖ್ಯನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ವಿಚಾರಣೆಗಾಗಿ ಪ್ರಕರಣಗಳನ್ನು ಹಂಚುವ ನಡೆಯನ್ನು ಅವರು ಪ್ರಶ್ನಿಸಿದ್ದರು. ಇದು ಮುಖ್ಯನ್ಯಾಯಮೂರ್ತಿ ಸ್ಥಾನಕ್ಕೆ ಗೊಗೊಯ್ ಅವರ ಆಯ್ಕೆಯ ಬಗ್ಗೆ ಅನುಮಾನ ಮೂಡಲು ಕಾರಣವಾಗಿತ್ತು.

ರಂಜನ್ ಗೊಗೊಯ್ ಮತ್ತು ದೀಪಕ್ ಮಿಶ್ರಾ

ಖಡಕ್ ಮಾತಿನ ಮೃದುಹೃದಯಿ ನ್ಯಾಯಮೂರ್ತಿ

ಸುಪ್ರೀಂ ಕೋರ್ಟ್‌ ಇತಿಹಾಸದಲ್ಲಿಯೇ ಮೊದಲ ಬಾರಿಗೆ, ಹಾಲಿ ನ್ಯಾಯಮೂರ್ತಿಗಳು ಮಾಧ್ಯಮಗೋಷ್ಠಿ ನಡೆಸಿದ್ದು ದೇಶದಾದ್ಯಂತ ಸಂಚಲನ ಮೂಡಿಸಿತ್ತು. ಸುಪ್ರೀಂಕೋರ್ಟ್‌ನ ಕಾರ್ಯವೈಖರಿಯ ಬಗ್ಗೆ ದೇಶದಾದ್ಯಂತ ಭಾರಿ ಚರ್ಚೆಗೆ ಈ ಮಾಧ್ಯಮಗೋಷ್ಠಿ ಕಾರಣವಾಗಿತ್ತು.ಮುಖ್ಯ ನ್ಯಾಯಮೂರ್ತಿ ವಿರುದ್ಧ ಬಂಡಾಯ ಸಾರಿದ್ದಸುಪ್ರೀಂಕೋರ್ಟ್‌ ನಾಲ್ವರು ಹಿರಿಯ ನ್ಯಾಯಮೂರ್ತಿಗಳಲ್ಲಿ ಗೊಗೊಯ್‌ ಕೂಡ ಇದ್ದರು.ಇದೀಗ ನ್ಯಾಯಮೂರ್ತಿ ಗೊಗೊಯ್‌ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಸ್ಥಾನ ಅಲಂಕರಿಸಿದ್ದಾರೆ.

ಮಗ ಮುಂದೊಂದು ದಿನ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಆಗುತ್ತಾನೆ ಎಂದುರಂಜನ್‌ ಗೊಗೊಯ್ ಅವರ ತಂದೆ ಅಸ್ಸಾಂ ಮಾಜಿ ಮುಖ್ಯಮಂತ್ರಿ ಕೇಶವ್‌ ಚಂದ್ರ ಗೊಗೊಯ್ ಬಹಳ ಹಿಂದೆಯೇ ಭವಿಷ್ಯ ನುಡಿದಿದ್ದರು. ಅವರ ಹಾರೈಕೆ ಫಲಿಸಿದೆ. ಈಶಾನ್ಯ ಭಾರತದಿಂದ ಈ ಹುದ್ದೆಗೆ ಏರುತ್ತಿರುವ ಮೊದಲ ವ್ಯಕ್ತಿ ಎಂಬ ಹಿರಿಮೆ ಇವರದ್ದಾಗಿದೆ. ಇವರು 1954ರ ನವೆಂಬರ್ 18ರಂದುಪೂರ್ವ ಅಸ್ಸಾಂನ ದಿಬ್ರುಗರ್‌ನಲ್ಲಿ ಜನಿಸಿದರು. ಐವರು ಮಕ್ಕಳಲ್ಲಿ ಒಬ್ಬರಾಗಿದ್ದ ರಂಜನ್‌ ಅವರಿಗೆ ತಂದೆ ಎಂದರೆ ಅಚ್ಚುಮೆಚ್ಚು. ‌ಅವರ ಹೆಜ್ಜೆ ಗುರುತುಗಳನ್ನೇ ಹಿಂಬಾಲಿಸಿ ನ್ಯಾಯಾಂಗ ಹಾದಿಯಲ್ಲಿಯೇ ಸಾಗಿದರು.

ಶಿಸ್ತಿನ ಸಿಪಾಯಿಯಾದ ಇವರನ್ನು ಸಹೋದ್ಯೋಗಿಗಳು ಮೆದು ಮಾತಿನ, ಅತ್ಯಂತ ಕಠಿಣ ನ್ಯಾಯಮೂರ್ತಿ, ನಿಷ್ಪಕ್ಷಪಾತಿ, ನ್ಯಾಯನಿಷ್ಠುರ ಎಂದು ಬಣ್ಣಿಸುತ್ತಾರೆ.ಯಾವುದಾದರೂ ಒಂದು ಪ್ರಕರಣ ನ್ಯಾಯಾಲಯದ ಮೆಟ್ಟಿಲೇರಿತು ಎಂದಾದರೆ, ಅದರ ಇತ್ಯರ್ಥಕ್ಕೆ ವರ್ಷಗಳೇ ಕಳೆದು ಹೋಗುತ್ತವೆ ಎಂಬುದನ್ನು ಆಗಾಗ್ಗೆ ಕೇಳುತ್ತಿರುತ್ತೇವೆ. ಆದರೆ, ಅದನ್ನು ಸುಳ್ಳು ಮಾಡುವುದಕ್ಕಾಗಿ ಇವರು ಪಣತೊಟ್ಟಿದ್ದರು ಎಂದು ವಕೀಲರ ಸಂಘದಅಧ್ಯಕ್ಷ ಅತುಲ್ ಚಂದ್ರ ನೆನಪಿಸಿಕೊಂಡರು.

ಒಂದೇ ರೀತಿಯ ಪ್ರಕರಣಗಳನ್ನು ಒಟ್ಟಾಗಿಸಿ, ಅವುಗಳೆಲ್ಲದರ ವಿಚಾರಣೆಯನ್ನೂ ಒಮ್ಮೆಯೇ ಪೂರ್ಣಗೊಳಿಸಿ, ತೀರ್ಪು ನೀಡಿ ಬಿಡುತ್ತಿದ್ದರು. ಅಸ್ಸಾಂನ ಶಿಕ್ಷಣ ಇಲಾಖೆಯ 10 ಸಾವಿರ ಪ್ರಕರಣಗಳನ್ನು ಹೀಗೆಯೇ ಬಗೆಹರಿಸಿದ್ದರು.ಕ್ಷುಲ್ಲಕ ಕಾರಣಕ್ಕೆಲ್ಲ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದರೆ ಇವರಿಗೆ ಎಲ್ಲಿಲ್ಲದ ಸಿಟ್ಟು. ಸಿಸೇರಿಯನ್‌ ಹೆರಿಗೆ ಮಾಡಿಸುವುದಕ್ಕೆ ಮಾರ್ಗಸೂಚಿ ರೂಪಿಸಬೇಕು ಎಂದು ಕೋರಿ ಸಲ್ಲಿಸಿದ್ದ ಪಿಐಎಲ್‌ ವಿಚಾರಣೆ ನಡೆಸಿದ ‌ನ್ಯಾಯಮೂರ್ತಿ ಗೊಗೊಯ್‌ ನೇತೃತ್ವದ ಪೀಠವು ₹25 ಸಾವಿರ ದಂಡ ವಿಧಿಸಿತ್ತು.

ಸಂಸದರು ಮತ್ತು ಶಾಸಕರ ವಿರುದ್ಧದ ಪ್ರಕರಣಗಳ ವಿಚಾರಣೆಗೆ ಪ್ರತ್ಯೇಕ ನ್ಯಾಯಾಲಯ ಸ್ಥಾಪನೆ, ರಾಜೀವ್‌ ಗಾಂಧಿ ಹಂತಕರ ಶಿಕ್ಷೆ ಇಳಿಕೆ, ಲೋಕಪಾಲ ನೇಮಕ ಹಾಗೂಅಸ್ಸಾಂನ ರಾಷ್ಟ್ರೀಯ ಪೌರ ನೋಂದಣಿಯಂತಹ ಮಹತ್ವದ ವಿಚಾರಗಳಲ್ಲಿ ಇವರು ತೀರ್ಪು ನೀಡಿದ್ದಾರೆ.

ಖಡಕ್‌ ಮಾತಿನ ಮೂಲಕವೇ ಎಲ್ಲರ ಗಮನ ಸೆಳೆಯುವ ವ್ಯಕ್ತಿತ್ವ ಇವರದು. ಜುಲೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಹೇಳಿದ ಮಾತು ಸಾಕಷ್ಟು ಸುದ್ದಿ ಮಾಡಿತ್ತು. ’ಸ್ವತಂತ್ರವಾಗಿ ಕಾರ್ಯನಿರ್ವಹಿಸುವ ಪತ್ರಕರ್ತರು ಹಾಗೂ ಕ್ರಿಯಾಶೀಲನ್ಯಾಯಮೂರ್ತಿಗಳು ಪ್ರಜಾಪ್ರಭುತ್ವದ ರಕ್ಷಣೆಯಲ್ಲಿ ಮುಂಚೂಣಿಯಲ್ಲಿರಬೇಕು’ ಹಾಗೂ ‘ಕಾನೂನಿನ ಅರ್ಥೈಸುವಿಕೆಯಲ್ಲಿ ನ್ಯಾಯಾಂಗ ಪ್ರಾಂಜಲ ಮನಸ್ಥಿತಿ ಹೊಂದಿರಬೇಕು’... ಇಂತಹ ಸಾಕಷ್ಟು ನೇರ ಹೇಳಿಕೆಗಳು ಅವರನ್ನು ಇತರ ನ್ಯಾಯಮೂರ್ತಿಗಳಿಗಿಂತ ಭಿನ್ನಗೊಳಿಸಿವೆ.

ನ್ಯಾಯಮೂರ್ತಿ ಕೆ.ಎನ್‌. ಶಿಕೈ ಅವರ ಸ್ಮರಣಾರ್ಥ ಹಮ್ಮಿಕೊಂಡಿದ್ದ ಉಪನ್ಯಾಸದಲ್ಲಿ ಮಾತನಾಡಿದ್ದ ಗೊಗೊಯ್, ‘ದೇಶದ ಎಲ್ಲಾ ಹೈಕೋರ್ಟ್‌ಗಳಲ್ಲಿ ಸಾಕಷ್ಟು ನ್ಯಾಯಾಮೂರ್ತಿಗಳ ಹುದ್ದೆಗಳು ಖಾಲಿ ಇವೆ. ಜಿಲ್ಲಾ ನ್ಯಾಯಾಲಯಗಳಲ್ಲಿ 2.68 ಕೋಟಿ ಪ್ರಕರಣಗಳು ಇತ್ಯರ್ಥವಾಗದೆ ಉಳಿದಿವೆ’ ಎಂದಿದ್ದರು. ಮುಖ್ಯ ನ್ಯಾಯಮೂರ್ತಿ ಸ್ಥಾನವಹಿಸಿರುವ ಗೊಗೊಯ್ ಆ ಪ್ರಕರಣಗಳ ಇತ್ಯರ್ಥಕ್ಕೆ ಯಾವ ರೀತಿ ಕ್ರಮಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

ವಿವಿಧ ಪೀಠಗಳಿಗೆ‍ಪ್ರಕರಣಗಳ ಹಂಚಿಕೆಯನ್ನು ಮುಖ್ಯ ನ್ಯಾಯಮೂರ್ತಿಯವರು ತಮ್ಮಿಷ್ಟದಂತೆ ಮಾಡಬಾರದು. ಅದಕ್ಕಾಗಿ ಒಂದು ವ್ಯವಸ್ಥೆ ಇರಬೇಕು ಎಂದು ನ್ಯಾಯಮೂರ್ತಿಯಾಗಿದ್ದಾಗ ಗೊಗೊಯ್‌ ಅವರೇ ಸುದ್ದಿಗೋಷ್ಠಿಯಲ್ಲಿ ಬೇಡಿಕೆ ಇಟ್ಟಿದ್ದರು. ಹೀಗೆ ಮುಖ್ಯ ನ್ಯಾಯಾಮೂರ್ತಿ ಹುದ್ದೆಗೆ ಏರಿರುವ ರಂಜನ್‌ ಗೊಗೊಯ್ ಸಾಕಷ್ಟು ವಿಷಯಗಳ ಬಗ್ಗೆ ಟೀಕೆ, ಅಸಮಾಧಾನ ವ್ಯಕ್ತಪಡಿಸಿದ್ದರು. ಮುಂದಿನ ಒಂದು ವರ್ಷದ ಅಧಿಕಾರಾವಧಿಯಲ್ಲಿ ಆ ಎಲ್ಲಾ ವಿಷಯಗಳನ್ನು ಹೇಗೆ ನಿಭಾಯಿಸುತ್ತಾರೆ ಎನ್ನುವ ಕುತೂಲಹ ಎಲ್ಲೆಡೆ ಮನೆಮಾಡಿದೆ.

ನ್ಯಾಯಮೂರ್ತಿ ಗೊಗೊಯ್ ಬದುಕಿನಮೈಲಿಗಲ್ಲುಗಳು

ನವೆಂಬರ್‌ 18, 1954: ಜನನ

1978ರಲ್ಲಿ ವಕೀಲರಾಗಿ ನೋಂದಣಿ

ಫೆಬ್ರುವರಿ 28, 2001:ಗುವಾಹಟಿ ಹೈಕೋರ್ಟ್‌ನ ಕಾಯಂ ನ್ಯಾಯಮೂರ್ತಿಯಾಗಿ ನೇಮಕ

ಸೆಪ್ಟೆಂಬರ್‌ 9, 2010:ಪಂಜಾಬ್‌–ಹರಿಯಾಣ ಹೈಕೋರ್ಟ್‌ಗೆ ವರ್ಗ

ಫೆಬ್ರುವರಿ 12, 2011:ಪಂಜಾಬ್‌–ಹರಿಯಾಣ ಹೈಕೋರ್ಟ್‌ ಮುಖ್ಯ ನ್ಯಾಯಾಮೂರ್ತಿಯಾಗಿ ಬಡ್ತಿ

ಏಪ್ರಿಲ್‌ 23, 2012:ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಿ ಬಡ್ತಿ

ಅಕ್ಟೋಬರ್‌ 3, 2018:ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿಯಾಗಿ ಅಧಿಕಾರ ಸ್ವೀಕಾರ

ನವೆಂಬರ್‌ 17, 2019:ನಿವೃತ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.