
ಸೂರತ್: ಮೇಘಾಲಯ ತಂಡದ ಆಕಾಶ್ ಕುಮಾರ್ ಸತತ ಎಂಟು ಸಿಕ್ಸರ್‌ಗಳನ್ನು ಹೊಡೆದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ದಾಖಲೆ ಬರೆದರು. ಅಷ್ಟೇ ಅಲ್ಲ; 11 ಎಸೆತಗಳಲ್ಲಿ ಅರ್ಧಶತಕ ಗಳಿಸಿ ‘ಶರವೇಗದ ಸರದಾರ’ನಾದರು.
ರಣಜಿ ಟ್ರೋಫಿ ಕ್ರಿಕೆಟ್ ಟೂರ್ನಿಯ ಪ್ಲೇಟ್ ಗುಂಪಿನಲ್ಲಿ ನಡೆದ ಅರುಣಾಚಲ ಪ್ರದೇಶ ಎದುರು ನಡೆದ ಪಂದ್ಯದಲ್ಲಿ ಅವರು ಈ ಸಾಧನೆ ಮಾಡಿದರು. ಎಂಟನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಿದ 25 ವರ್ಷದ ಚೌಧರಿ ಅವರು ಪಂದ್ಯದ ಎರಡನೇ ದಿನದಾಟದಲ್ಲಿ ಈ ಸಾಧನೆ ಮಾಡಿದರು. ಮೇಘಾಲಯ ತಂಡವು ಮೊದಲ ಇನಿಂಗ್ಸ್‌ನಲ್ಲಿ 6 ವಿಕೆಟ್‌ಗಳಿಗೆ 628 ರನ್ ಗಳಿಸಿ ಡಿಕ್ಲೇರ್ ಮಾಡಿಕೊಂಡಿತು.
2012ರಲ್ಲಿ ಲಿಸ್ಟರ್‌ಶೈರ್ ತಂಡದ ವೇಯ್ನ್ ವೈಟ್ ಅವರು ಎಸ್ಸೆಕ್ಸ್ ತಂಡದ ವಿರುದ್ಧ 12 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದು ಇದುವರೆಗಿನ ದಾಖಲೆಯಾಗಿತ್ತು.
ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ ಸತತ ಆರು ಸಿಕ್ಸರ್ ಹೊಡೆದ ಮೂರನೇ ಆಟಗಾರನೆಂಬ ಹೆಗ್ಗಳಿಕೆಯೂ ಅವರದ್ದಾಯಿತು. ವೆಸ್ಟ್ ಇಂಡೀಸ್‌ನ ಸರ್ ಗ್ಯಾರ್‌ಫೀಲ್ಡ್ ಸೋಬರ್ಸ್ ಮತ್ತು ಭಾರತದ ರವಿಶಾಸ್ತ್ರಿ ಈ ಮೊದಲು ಇಂತಹ ದಾಖಲೆ ಬರೆದಿದ್ದರು.
ಚೌಧರಿ ಅವರು ಕ್ರೀಸ್‌ಗೆ ಬಂದು ಎದುರಿಸಿದ ಮೊದಲ ಎಸೆತವು ಡಾಟ್ ಆಗಿತ್ತು. ನಂತರ ಎರಡು ಸಿಂಗಲ್ಸ್ ಗಳಿಸಿದರು. ಬಲಗೈ ಬ್ಯಾಟರ್ ಚೌಧರಿ ಅವರು ಲಿಮರ್ ದಾಬಿ ಅವರು ಹಾಕಿದ 126ನೇ ಓವರ್‌ನ ಎಲ್ಲ ಎಸೆತಗಳಲ್ಲಿಯೂ ಸಿಕ್ಸರ್ ಹೊಡೆದರು. ಇನ್ನೊಂದು ಓವರ್‌ನಲ್ಲಿ ಮತ್ತೆ ತಾವು ಕ್ರೀಸ್‌ಗೆ ಬಂದಾಗ ಎದುರಿಸಿದ ಎರಡು ಎಸೆತಗಳನ್ನು ಬೌಂಡರಿ ಹಗ್ಗದಾಚೆ ಕಳಿಸಿದರು. ತಮ್ಮ 31ನೇ ಪ್ರಥಮ ದರ್ಜೆ ಪಂದ್ಯ ಆಡುತ್ತಿರುವ ಆಕಾಶ್ ಹೊಸ ದಾಖಲೆ ಮಾಡಿದರು.
ಇನಿಂಗ್ಸ್ ಆರಂಭಿಸಿರುವ ಅರುಣಾಚಲ ತಂಡವು ಮೊದಲ ಇನಿಂಗ್ಸ್‌ನಲ್ಲಿ 73 ರನ್‌ಗಳಿಗೆ ಆಲೌಟ್ ಆಯಿತು. ಫಾಲೋ ಆನ್ ಪಡೆದು ಎರಡನೇ ಇನಿಂಗ್ಸ್‌ನಲ್ಲಿ 29 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.