ADVERTISEMENT

ಗಣಿ ಸುರಂಗದಲ್ಲಿ ಸಿಲುಕಿರುವ 15 ಕಾರ್ಮಿಕರು: ನುಗ್ಗಿದ ನೀರು, ಕಾರ್ಯಾಚರಣೆ ಸ್ಥಗಿತ

ಮೇಘಾಲಯ ಗಣಿ

ಪಿಟಿಐ
Published 25 ಡಿಸೆಂಬರ್ 2018, 19:08 IST
Last Updated 25 ಡಿಸೆಂಬರ್ 2018, 19:08 IST
ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಎನ್‌ಡಿಆರ್‌ಎಫ್‌ ಸಿಬ್ಬಂದಿ
ಕಾರ್ಮಿಕರ ರಕ್ಷಣಾ ಕಾರ್ಯದಲ್ಲಿ ತೊಡಗಿದ್ದ ಎನ್‌ಡಿಆರ್‌ಎಫ್‌ ಸಿಬ್ಬಂದಿ   

ಶಿಲ್ಲಾಂಗ್‌: ಕಲ್ಲಿದ್ದಲು ಗಣಿಗಾರಿಕೆ ನಡೆಯುತ್ತಿದ್ದ ಸುರಂಗದಲ್ಲಿ ಎರಡು ವಾರಗಳ ಹಿಂದೆ ಸಿಲುಕಿರುವ 15 ಕಾರ್ಮಿಕರ ರಕ್ಷಣೆಗಾಗಿ ನಡೆಯುತ್ತಿದ್ದ ಕಾರ್ಯಾಚರಣೆಯನ್ನು ಮೇಘಾಲಯ ಸರ್ಕಾರ ಸ್ಥಗಿತಗೊಳಿಸಿದೆ.

ಲುಂಥಾರಿ ಗ್ರಾಮದ ಬಳಿ ಸುರಂಗ ಕೊರೆದು ಗಣಿಗಾರಿಕೆ ನಡೆಸಲಾಗುತ್ತಿತ್ತು. ಮೇಘಾಲಯದ ಪೂರ್ವ ಜೈಂತಿಯಾ ಹಿಲ್ಸ್‌ ಜಿಲ್ಲೆಯಲ್ಲಿ ಈ ಗ್ರಾಮವಿದೆ. 15 ಕಾರ್ಮಿಕರಲ್ಲಿ, ಮೂವರು ಗ್ರಾಮಸ್ಥರು ಈ ಸುರಂಗದಲ್ಲಿ ಸಿಲುಕಿದ್ದಾರೆ.

ಸುರಂಗದಲ್ಲಿ ನೀರು ತುಂಬಿದ್ದು ಕಾರ್ಯಾಚರಣೆಗೆ ಅಡ್ಡಿಯಾಗಿದೆ. ಕಾರ್ಮಿಕರ ದೇಹವು ತಂಪಾದ ವಾತಾವರಣಕ್ಕೆ ಹೊಂದಿಕೊಳ್ಳುವುದು ಕಷ್ಟವಾಗುತ್ತಿದೆ. ಎನ್‌ಡಿಆರ್‌ಎಫ್‌ ಸಿಬ್ಬಂದಿಗೂ ಈ ಅತಿ ಶೀತದ ವಾತಾವರಣದಲ್ಲಿ ಕಾರ್ಯಾಚರಣೆ ನಡೆಸಲು ಕಷ್ಟವಾಗುತ್ತಿದೆ. ಸುರಂಗದಲ್ಲಿ ಗಾಳಿ–ಬೆಳಕಿನ ಕೊರತೆ ಇರುವುದರಿಂದ ಕಾರ್ಮಿಕರ ಪ್ರಾಣಕ್ಕೂಕಂಟಕ ಎದುರಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

‘ಗಣಿಯಲ್ಲಿ ಕಾರ್ಮಿಕರು ಸಿಲುಕಿಕೊಂಡಿರುವ ಬಗ್ಗೆ ಮಾಹಿತಿ ನೀಡಲು ಸ್ಥಳೀಯರು ಹಿಂದೇಟು ಹಾಕಿದ್ದರು. ಗಣಿ ಮಾಲೀಕರಿಂದ ಬೆದರಿಕೆ ಇರುವುದರಿಂದ ಜನರಿಗೆ ಭಯ ಇದೆಹೀಗಾಗಿ, ಗಣಿ ಪತ್ತೆ ಮಾಡುವುದು ವಿಳಂಬವಾಯಿತು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಗಣಿಗಾರಿಕೆ ನಿಷೇಧ

ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯು (ಎನ್‌ಜಿಟಿ) ನಾಲ್ಕು ವರ್ಷಗಳ ಹಿಂದೆಯೇ (2014) ಮೇಘಾಲಯದಲ್ಲಿ ಕಲ್ಲಿದ್ದಲು ಗಣಿಗಾರಿಕೆಯನ್ನು ನಿಷೇಧಿಸಿದೆ. ಆದರೂ, ಗಣಿಗಾರಿಕೆ ನಡೆಯುತ್ತಿರುವುದರಿಂದ ಕಾರ್ಮಿಕರು ನಿತ್ಯವೂ ಪ್ರಾಣಾಪಾಯ ಎದುರಿಸುವಂತಾಗಿದೆ.

ಪೊಲೀಸ್‌ ಸಿಬ್ಬಂದಿ ಕೊರತೆ

ಪೂರ್ವ ಜೈಂತಿಯಾ ಹಿಲ್ಸ್‌ ಜಿಲ್ಲೆಯು 2,000 ಕಿ.ಮೀ. ವಿಸ್ತಾರ ಹೊಂದಿದೆ. ಆದರೆ, ಇಲ್ಲಿ 100ಕ್ಕೂ ಕಡಿಮೆ ಪೊಲೀಸ್‌ ಸಿಬ್ಬಂದಿ ಇದ್ದಾರೆ. ಈ ಪೈಕಿ ಶಸ್ತ್ರಾಸ್ತ್ರ ಹೊಂದಿರುವ ಪೊಲೀಸರ ಸಂಖ್ಯೆ 26 ಮಾತ್ರ. ಪೊಲೀಸ್‌ ಸಿಬ್ಬಂದಿ ಕೊರತೆಯ ಪರಿಣಾಮ ಇಲ್ಲಿ ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲು ಕಷ್ಟವಾಗುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.