ADVERTISEMENT

ಪುರಿ: ರಥಯಾತ್ರೆಗೆ ಅದ್ದೂರಿ ಚಾಲನೆ; ಮೊಳಗಿದ ಜೈ ಜಗನ್ನಾಥ ನಾಮಸ್ಮರಣೆ

ಪಿಟಿಐ
Published 27 ಜೂನ್ 2025, 14:34 IST
Last Updated 27 ಜೂನ್ 2025, 14:34 IST
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಜನಸ್ತೋಮ
ಪುರಿ ಜಗನ್ನಾಥ ರಥಯಾತ್ರೆಯಲ್ಲಿ ಜನಸ್ತೋಮ   

ಪುರಿ: ಐತಿಹಾಸಿಕ ಪುರಿ ಜಗನ್ನಾಥ ದೇವಾಲಯದ ರಥಯಾತ್ರೆಗೆ ಶುಕ್ರವಾರ ಅದ್ದೂರಿ ಚಾಲನೆ ದೊರೆತಿದೆ. ಸಹಸ್ರಾರು ಭಕ್ತಾದಿಗಳು ರಥದ ಹಗ್ಗವನ್ನು ಎಳೆಯುತ್ತಾ ‘ಜೈ ಜಗನ್ನಾಥ, ಹರಿ ಬೋಲ್‌’ ಘೋಷಣೆಗಳನ್ನು ಮೊಳಗಿಸಿದ್ದಾರೆ. 

12ನೇ ಶತಮಾನದ ಪುರಿ ದೇವಾಲಯದಿಂದ 2.6 ಕಿ.ಮೀ.ದೂರದಲ್ಲಿರುವ ಗುಂಡಿಚ ದೇಗುಲದ ಮಾರ್ಗವಾಗಿ ಜಗನ್ನಾಥ, ದೇವಿ ಸುಭದ್ರ ಹಾಗೂ ಬಲಭದ್ರನ ರಥ‌ಗಳು ಸಾಗಿವೆ. ಒಡಿಶಾ ರಾಜ್ಯಪಾಲ ಹರಿ ಬಾಬು ಕಂಬಾಂಪತಿ, ಮುಖ್ಯಮಂತ್ರಿ ಮೋಹನ್‌ ಚರಣ್‌ ಮಾಝಿ ಹಾಗೂ ಇನ್ನಿತರ ಗಣ್ಯರು ಕೂಡ ಭಾಗಿಯಾಗಿ ರಥ ಎಳೆದಿದ್ದಾರೆ. 

ಪಹಂಡಿ ಪೂಜೆಯ ಬಳಿಕ ದೇವರುಗಳ ವಿಗ್ರಹಗಳನ್ನು ತಂದು ರಥದಲ್ಲಿ ಇರಿಸಿ ಮಂತ್ರೋಪಾಸನೆ ನಡೆಸಿ, ಬಳಿಕ ರಥಯಾತ್ರೆ ಆರಂಭಿಸಲಾಗಿದೆ. ಒಡಿಸ್ಸಿ ನೃತ್ಯಗಾರರು, ಸಂಗೀತ ಕಲಾವಿದರ ವಿವಿಧ ತಂಡಗಳು ಹರ್ಷದಿಂದ ರಥದ ಮುಂದೆ ಸಾಗಿದ್ದು, ನೋಡುಗರ ಕಣ್ಮನ ಸೆಳೆಯಿತು. 

ADVERTISEMENT

ಗೋವರ್ಧನ ಪೀಠದ ಶಂಕರಾಚಾರ್ಯರು, ಸ್ವಾಮಿ ನಿಶ್ಚಲಾನಂದ ಸರಸ್ವತಿ ಸೇರಿದಂತೆ ವಿವಿಧ ಮಠಾಧೀಶರು, ಸ್ವಾಮಿಗಳು ಯಾತ್ರೆಯಲ್ಲಿ ಪಾಲ್ಗೊಂಡಿದ್ದರು. 

ಪ.ಬಂಗಾಳದಲ್ಲೂ ರಥಯಾತ್ರೆ

ಪಶ್ಚಿಮ ಬಂಗಾಳದ ದಿಘಾ ಪ್ರದೇಶದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಜಗನ್ನಾಥ ದೇಗುಲದ ಮೊದಲ ರಥಯಾತ್ರೆಗೆ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಶುಕ್ರವಾರ ಚಾಲನೆ ನೀಡಿದರು. ಮಮತಾ ಅವರೊಂದಿಗೆ ಅವರ ಸಂಪುಟ ಸಚಿವರು ಕೂಡ ರಥದ ಹಗ್ಗವನ್ನು ಎಳೆದು ‘ಜೈ ಜಗನ್ನಾಥ’ ಘೋಷಗಳನ್ನು ಮೊಳಗಿಸಿದರು. ವಿದೇಶಿಗರು ಸೇರಿದಂತೆ ಸಹಸ್ರಾರು ಭಕ್ತರು ಸೇರಿದ್ದ ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆ ಜರುಗದಂತೆ ಭದ್ರತೆ ವ್ಯವಸ್ಥೆ ಮಾಡಿದ್ದು ಸಾವಧಾನದಿಂದ ಯಾತ್ರೆಯಲ್ಲಿ ಪಾಲ್ಗೊಳ್ಳುವಂತೆ ಮಮತಾ ಮನವಿ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.