
ಹರಿದ್ವಾರ (ಪಿಟಿಐ): ಉತ್ತರಾಖಂಡದ ಹರಿದ್ವಾರ ಜಿಲ್ಲಾ ಆಸ್ಪತ್ರೆ ಶವಗಾರದಲ್ಲಿ ಇರಿಸಿದ್ದ ಶವವನ್ನು ಇಲಿಗಳು ಕಚ್ಚಿ ತಿಂದ ಘಟನೆ ನಡೆದಿದೆ.
ಹೃದಯಸ್ತಂಭನದಿಂದ ಶುಕ್ರವಾರ ಮೃತಪಟ್ಟಿದ್ದ ಹರಿದ್ವಾರದ ನಿವಾಸಿ ಲಖನ್ ಕುಮಾರ್ (36) ಅವರ ಮೃತದೇಹವನ್ನು ಆಸ್ಪತ್ರೆಯ ಶವಾಗಾರದ ಡೀಪ್ ಫ್ರೀಜರ್‌ನಲ್ಲಿ ಇರಿಸಲಾಗಿತ್ತು. ಆದರೂ ಶವದ ಕಣ್ಣು, ಮೂಗು, ಕಿವಿ ಮತ್ತು ತಲೆಯ ಭಾಗವನ್ನು ಕಚ್ಚಿ ಇಲಿಗಳು ಗಾಯಗೊಳಿಸಿವೆ ಎಂದು ಕುಟುಂಬಸ್ಥರು ದೂರಿದ್ದಾರೆ.
ಡೀಪ್ ಫ್ರೀಜರ್‌ನಲ್ಲಿ ದೊಡ್ಡ ರಂಧ್ರವಿದ್ದು, ಇಲಿಗಳು ಅದರ ಮೂಲಕ ಪ್ರವೇಶಿಸಿ, ಶವದ ಅಂಗಾಂಗ ಕಚ್ಚಿ ಗಾಯಗೊಳಿಸಿವೆ ಎಂದು ಆರೋಪಿಸಿರುವ ಕುಟುಂಬಸ್ಥರು, ಶವಾಗಾರದ ಬಹುತೇಕ ಫ್ರೀಜರ್‌ಗಳು ಹಾಳಾಗಿವೆ ಎಂದಿದ್ದಾರೆ.
‘ಶವಾಗಾರದಲ್ಲಿರುವ ಡೀಪ್ ಫ್ರೀಜರ್‌ನ ಎರಡು ಅಥವಾ ಮೂರು ಗೇಟ್‌ಗಳು ಹಾಳಾಗಿವೆ. ಅವುಗಳ ದುರಸ್ತಿಯ ಹೊಣೆ ಹೊತ್ತಿರುವ ಸಂಸ್ಥೆಯ ನಿಲರ್ಕ್ಷ್ಯದಿಂದ ಈ ಘಟನೆ ಸಂಭವಿಸಿದೆ. ಸಂಸ್ಥೆಯ ವಿರುದ್ಧ ಕ್ರಮ ಕೈಗೊಳ್ಳಲಾಗುವುದು’ ಎಂದು ಆಸ್ಪತ್ರೆ ಅಧಿಕಾರಿ ರಣವೀರ್ ಕುಮಾರ್ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.