ADVERTISEMENT

ಸುಸ್ತಿದಾರರ ಮಾಹಿತಿ ತಿಳಿಸಿ: ಸುಪ್ರೀಂ ಕೋರ್ಟ್‌ ಆಕ್ರೋಶ

ತೀರ್ಪು ಪಾಲಿಸದ ಆರ್‌ಬಿಐ ವಿರುದ್ಧ

ಪಿಟಿಐ
Published 26 ಏಪ್ರಿಲ್ 2019, 20:12 IST
Last Updated 26 ಏಪ್ರಿಲ್ 2019, 20:12 IST
   

ನವದೆಹಲಿ: ಬ್ಯಾಂಕುಗಳಿಗೆ ಸಾಲ ಬಾಕಿ ಉಳಿಸಿಕೊಂಡಿರುವವರ ಹೆಸರು ಬಹಿರಂಗಪಡಿಸುವುದು ಭಾರತೀಯ ರಿಸರ್ವ್‌ ಬ್ಯಾಂಕಿನ (ಆರ್‌ಬಿಐ) ಕರ್ತವ್ಯ ಎಂದು ಸುಪ್ರೀಂ ಕೋರ್ಟ್‌ ಹೇಳಿದೆ. ಸುಸ್ತಿದಾರರ ವಿವರಗಳನ್ನು ಈವರೆಗೆ ಬಹಿರಂಗ ಮಾಡದಿರುವ ಆರ್‌ಬಿಐ ಕ್ರಮದ ಬಗ್ಗೆ ಸುಪ್ರೀಂ ಕೋರ್ಟ್‌ ಆಕ್ರೋಶ ವ್ಯಕ್ತಪಡಿಸಿದೆ.

ಪಾರದರ್ಶಕತೆ ಕಾನೂನಿನ ಅಡಿಯಲ್ಲಿ ಇಂತಹ ಮಾಹಿತಿಯನ್ನು ಸಾರ್ವಜನಿಕರಿಗೆ ತಿಳಿಸಲೇಬೇಕು. ಈ ಸಲವೂ ಕೋರ್ಟ್‌ನ ನಿರ್ದೇಶನ ಪಾಲಿಸದಿದ್ದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದು ಎಚ್ಚರಿಸಿದೆ.

ಪರಿಶೀಲನಾ ವರದಿ ಮತ್ತು ಇತರ ದಾಖಲೆಗಳನ್ನು ಮಾಹಿತಿ ಹಕ್ಕು ಕಾಯ್ದೆಯಡಿ ಸಾರ್ವಜನಿಕರಿಗೆ ನೀಡಬೇಕು. ರಾಷ್ಟ್ರೀಯ ಆರ್ಥಿಕ ಹಿತಾಸಕ್ತಿಯ ವಿಚಾರಗಳಿಗೆ ಮಾತ್ರ ಇದರಿಂದ ವಿನಾಯಿತಿ ಇದೆ ಎಂದು ನ್ಯಾಯಮೂರ್ತಿಗಳಾದ ಎಲ್‌.ಎ. ನಾಗೇಶ್ವರ ರಾವ್‌ ಮತ್ತು ಎಂ.ಆರ್‌. ಶಾ ಅವರ ಪೀಠವು ಹೇಳಿದೆ.

ADVERTISEMENT

ಸುಸ್ತಿದಾರರ ಮಾಹಿತಿಯನ್ನು ಬಹಿರಂಗಪಡಿಸಬೇಕು ಎಂದು 2015ರ ಡಿಸೆಂಬರ್‌ನಲ್ಲಿ ಸುಪ್ರೀಂ ಕೋರ್ಟ್‌ ತೀರ್ಪು ನೀಡಿತ್ತು. ಆದರೆ, ಆರ್‌ಬಿಐ ಅದನ್ನು ಪಾಲಿಸಿಲ್ಲ. ಹಾಗಾಗಿ, ಆರ್‌ಬಿಐ ವಿರುದ್ಧ ನ್ಯಾಯಾಂಗ ನಿಂದನೆಯ ಹಲವು ದೂರು ದಾಖಲಾಗಿದ್ದವು. ಈ ದೂರುಗಳ ವಿಚಾರಣೆ ನಡೆಸಿದ್ದ ಸುಪ್ರೀಂ ಕೋರ್ಟ್‌, ತೀರ್ಪನ್ನು ಕಾಯ್ದಿರಿಸಿತ್ತು. ಅದಾದ ಬಳಿಕ, ಮಾಹಿತಿ ಬಹಿರಂಗಪಡಿಸುವುದಕ್ಕೆ ಸಂಬಂಧಿಸಿ ಆರ್‌ಬಿಐ ಹೊಸ ನೀತಿಯನ್ನು ಪ್ರಕಟಿಸಿತ್ತು.

ಯಾವ ಮಾಹಿತಿಗಳನ್ನು ಬಹಿರಂಗಪಡಿಸಬೇಕು ಎಂದು ಸುಪ್ರೀಂ ಕೋರ್ಟ್‌ ಹೇಳಿತ್ತೋ ಅವುಗಳನ್ನು ಹೊಸ ನೀತಿಯಡಿ ಬಹಿರಂಗಪಡಿಸಬೇಕಿಲ್ಲ ಎಂದು ವಿವಿಧ ವಿಭಾಗಗಳಿಗೆ ಆರ್‌ಬಿಐ ನಿರ್ದೇಶನ ನೀಡಿತ್ತು. ಇದು ಸುಪ್ರೀಂ ಕೋರ್ಟ್‌ನ ಆಕ್ರೋಶಕ್ಕೆ ಕಾರಣವಾಗಿದೆ.

‘ಆರ್‌ಬಿಐ ನ್ಯಾಯಾಂಗ ನಿಂದನೆ ಎಸಗಿದೆ ಎಂಬುದು ನಮ್ಮ ಅಭಿಪ್ರಾಯ. ಯಾವ ಮಾಹಿತಿ ಬಹಿರಂಗಪಡಿಸಬೇಕು ಎಂದು ನ್ಯಾಯಾಲಯವು ಹೇಳಿತ್ತೋ ಅದೇ ವಿವರಗಳನ್ನು ಮುಚ್ಚಿಡಲು ಆರ್‌ಬಿಐ ಸೂಚಿಸಿದೆ’ ಎಂದು ಪೀಠವು ಶುಕ್ರವಾರ ಹೇಳಿದೆ.

ನ್ಯಾಯಾಲಯದ ನಿರ್ದೇಶನಗಳನ್ನು ಉಲ್ಲಂಘಿಸಿರುವ ಆರ್‌ಬಿಐ ವಿರುದ್ಧ ಗಂಭೀರ ಕ್ರಮ ಕೈಗೊಳ್ಳಬೇಕು. ಆದರೆ, ಕೊನೆಯ ಅವಕಾಶ ಕೊಡಲಾಗುವುದು. ನ್ಯಾಯಾಲಯದ ನಿರ್ದೇಶನಗಳಿಗೆ ವಿರುದ್ಧವಾಗಿರುವ ಮಾಹಿತಿ ಬಹಿರಂಗ ನೀತಿಯನ್ನು ತಕ್ಷಣವೇ ಹಿಂಪಡೆಯಲು ಪೀಠ ಸೂಚಿಸಿತು.

2015ರಲ್ಲಿ ನೀಡಿದ ತೀರ್ಪಿನಲ್ಲಿ ಗೊಂದಲಕಾರಿ ಅಂಶಗಳು ಯಾವುವೂ ಇರಲಿಲ್ಲ. ಆರ್‌ಟಿಐ ಅಡಿ ಕೇಳುವ ಮಾಹಿತಿಯನ್ನು ಆರ್‌ಬಿಐ ನಿರಾಕರಿಸುವಂತಿಲ್ಲ ಎಂದು ಆ ತೀರ್ಪಿನಲ್ಲಿ ಸ್ಪಷ್ಟವಾಗಿತ್ತು. ಯಾವುದಾದರೂ ಬ್ಯಾಂಕ್‌ಗೆ ಮುಜುಗರ ಆಗಬಹುದು ಎಂಬ ಕಾರಣಕ್ಕೆ ಮಾಹಿತಿಯನ್ನು ಆರ್‌ಬಿಐ ಮುಚ್ಚಿಡುವಂತಿಲ್ಲ ಎಂದು ಪೀಠವು ದೃಢವಾಗಿ ಹೇಳಿತು. ಸುಸ್ತಿದಾರರ ಮಾಹಿತಿಯನ್ನು ಬಹಿರಂಗಪಡಿಸುವುದರಿಂದ ದೇಶದ ಆರ್ಥಿಕ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ಆರ್‌ಬಿಐ ವಾದಿಸಿತು. ಇದನ್ನು ಪೀಠ ತಳ್ಳಿ ಹಾಕಿತು.

ನ್ಯಾಯಾಂಗ ನಿಂದನೆ ಅರ್ಜಿ

ಆರ್‌ಬಿಐನ ಗವರ್ನರ್‌ (ಆಗಿನ) ಉರ್ಜಿತ್‌ ಪಟೇಲ್‌ ‘ಉದ್ದೇಶಪೂರ್ವಕವಾಗಿ’ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಉಲ್ಲಂಘಿಸುತ್ತಿದ್ದಾರೆ ಎಂದು ಸತೀಶ್ಚಂದ್ರ ಅಗರ್‌ವಾಲ್‌, ಗಿರೀಶ್‌ ಮಿತ್ತಲ್‌ ಮತ್ತು ಇತರರು ದೂರು ಸಲ್ಲಿಸಿದ್ದರು.

ಐಸಿಐಸಿಐ, ಆ್ಯಕ್ಷಿಸ್‌, ಎಚ್‌ಡಿಎಫ್‌ಸಿ ಮತ್ತು ಭಾರತೀಯ ಸ್ಟೇಟ್‌ ಬ್ಯಾಂಕ್‌ಗಳ ಪರಿಶೀಲನಾ ವರದಿಗಳನ್ನು ಬಹಿರಂಗಪಡಿಸಬೇಕು ಎಂದು ಮಿತ್ತಲ್‌ ಕೇಳಿದ್ದರು. ಸಹಾರಾ ಮತ್ತು ರಾಜಸ್ಥಾನ್‌ ಬ್ಯಾಂಕ್‌ಗೆ ಸಂಬಂಧಿಸಿದ ವಿವರಗಳನ್ನೂ ಕೋರಿದ್ದರು. ವಿದೇಶಿ ಹಣಕಾಸು ಗುತ್ತಿಗೆಯಲ್ಲಿ ದೇಶಕ್ಕೆ ₹32 ಸಾವಿರ ಕೋಟಿ ನಷ್ಟವಾಗಿದೆ ಎಂಬುದರ ಮಾಹಿತಿಯನ್ನು ಮತ್ತೊಬ್ಬರು ಕೇಳಿದ್ದರು. ಯಾವ ಬ್ಯಾಂಕ್‌ಗೆ ಎಷ್ಟು ನಷ್ಟವಾಗಿದೆ ಎಂಬ ಮಾಹಿತಿ ಕೊಡುವಂತೆ ಕೋರಿದ್ದರು. ಆದರೆ, ಮಾಹಿತಿ ಹಕ್ಕು ಕಾಯ್ದೆಯ ಸೆಕ್ಷನ್‌ 8 (1) (ಇ) ಮತ್ತು ಆರ್‌ಬಿಐ ಕಾಯ್ದೆಯ 45 ಎನ್‌ಬಿ ಸೆಕ್ಷನ್‌ ಪ್ರಕಾರ ಮಾಹಿತಿ ಬಹಿರಂಗಪಡಿಸಲು ಸಾಧ್ಯವಿಲ್ಲ ಎಂದು ಆರ್‌ಬಿಐ ಹೇಳಿತ್ತು.
**


l 2015ರ ಡಿಸೆಂಬರ್‌ 16: ಆರ್‌ಟಿಐ ಅಡಿಯಲ್ಲಿ ಕೇಳಿದ ಮಾಹಿತಿ ಬಹಿರಂಗಪಡಿಸಲು ಸುಪ್ರೀಂ ಕೋರ್ಟ್‌ ಆದೇಶ

l 2019ರ ಏಪ್ರಿಲ್‌ 2: ಆರ್‌ಬಿಐ ವಿರುದ್ಧದ ನ್ಯಾಯಾಂಗ ನಿಂದನೆ ದೂರುಗಳ ತೀರ್ಪು ಕಾಯ್ದಿರಿಸಿದ ಸುಪ್ರೀಂ ಕೋರ್ಟ್‌

l 2019ರ ಏಪ್ರಿಲ್‌ 12: ಮಾಹಿತಿ ಬಹಿರಂಗಕ್ಕೆ ಹೊಸ ನೀತಿ ಪ್ರಕಟಿಸಿದ ಆರ್‌ಬಿಐ; ಆರ್‌ಟಿಐ ಅಡಿಯಲ್ಲಿ ಮಾಹಿತಿ ಬಹಿರಂಗಕ್ಕೆ ನಿಷೇಧ

l 2019ರ ಏಪ್ರಿಲ್‌ 26: ಮಾಹಿತಿ ಬಹಿರಂಗವನ್ನು ನಿಷೇಧಿಸುವ ನೀತಿಯನ್ನು ವೆಬ್‌ಸೈಟ್‌ನಿಂದ ಅಳಿಸಿ ಹಾಕಿದ ಆರ್‌ಬಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.