ADVERTISEMENT

ತಿರುವನಂತಪುರ: ತೈಲ ತುಂಬಿದ ಕಂಟೇನರ್‌ ಸಮುದ್ರಪಾಲು

ಪಿಟಿಐ
Published 24 ಮೇ 2025, 15:48 IST
Last Updated 24 ಮೇ 2025, 15:48 IST
   

ತಿರುವನಂತಪುರ: ಕೊಚ್ಚಿಗೆ ಬರುತ್ತಿದ್ದ ಸರಕು ಸಾಗಣೆ ಹಡಗಿನಲ್ಲಿದ್ದ ತೈಲ ತುಂಬಿದ ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದ ಕಾರಣ ಆತಂಕ ಸೃಷ್ಟಿಯಾಗಿದೆ. ಕಂಟೇನರ್‌ಗಳು ದಡಕ್ಕೆ ಬಂದರೆ ಅವುಗಳ ಬಳಿ ತೆರಳದಂತೆ ಕೇರಳ ರಾಜ್ಯ ನೈಸರ್ಗಿಕ ವಿಕೋಪ ನಿರ್ವಹಣೆ ಪ್ರಾಧಿಕಾರವು (ಕೆಎಸ್‌ಡಿಎಂಎ) ಜನರಿಗೆ ಎಚ್ಚರಿಸಿದೆ. 

ಕೊಚ್ಚಿ ಕರಾವಳಿಯಿಂದ ನೈರುತ್ಯಕ್ಕೆ 38 ನಾಟಿಕಲ್ ಮೈಲುಗಳಷ್ಟು ದೂರದಲ್ಲಿ ಅರಬ್ಬಿ ಸಮುದ್ರದಲ್ಲಿ ಅಪಘಾತ ಸಂಭವಿಸಿದೆ. ಲೈಬೀರಿಯಾ ಧ್ವಜ ಹೊತ್ತಿದ್ದ ಹಡಗು ವಿಝಿಂಜಂನಿಂದ ಕೊಚ್ಚಿಗೆ ಪ್ರಯಾಣಿಸುತ್ತಿದ್ದಾಗ ಒಂದು ಭಾಗಕ್ಕೆ ವಾಲಿದ್ದರಿಂದ ಸುಮಾರು ಹತ್ತು ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದಿವೆ ಎಂದು ಪ್ರಾಥಮಿಕ ವರದಿಗಳಿಂದ ತಿಳಿದುಬಂದಿದೆ. 

ಹಡಗಿನಲ್ಲಿದ್ದ ಎಲ್ಲ 24 ಸಿಬ್ಬಂದಿಯನ್ನು ಕರಾವಳಿ ಕಾವಲು ಪಡೆ ಮತ್ತು ನೌಕಾಪಡೆ ರಕ್ಷಿಸಿದೆ. ಕಂಟೇನರ್‌ಗಳಲ್ಲಿ ಮರೀನ್‌ ಗ್ಯಾಸ್ ಆಯಿಲ್ (ಹಡಗು, ನೌಕೆಗಳಲ್ಲಿ ಬಳಸುವ ಇಂಧನ) ಸಾಗಿಸಲಾಗುತ್ತಿತ್ತು ಎನ್ನಲಾಗಿದೆ. 

ADVERTISEMENT

'ಅಪಾಯಕಾರಿ ವಸ್ತು' ಹೊಂದಿರುವ ಕಂಟೇನರ್‌ಗಳು ಸಮುದ್ರಕ್ಕೆ ಬಿದ್ದಿದ್ದು, ಅವು ದಡಕ್ಕೆ ಸೇರಬಹುದು ಎಂದು ಕರಾವಳಿ ಕಾವಲು ಪಡೆ ಎಚ್ಚರಿಸಿದೆ. ಆದ್ದರಿಂದ, ಜನರು ಕಂಟೇನರ್‌ಗಳು ಬಳಿ ಹೋಗಬಾರದು ಎಂದು ಕೆಎಸ್‌ಡಿಎಂಎ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.