ADVERTISEMENT

ಪೂರ್ಣ ಸಮರಕ್ಕೂ ಸನ್ನದ್ಧ; ಭಾರತದ ಸೇನೆ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2020, 2:26 IST
Last Updated 17 ಸೆಪ್ಟೆಂಬರ್ 2020, 2:26 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ಜಮ್ಮು : ಚೀನಾದ ಜತೆಗೆ ಪೂರ್ವ ಲಡಾಖ್‌ನಲ್ಲಿ ಚಳಿಗಾಲದಲ್ಲಿ ಕೂಡ ಪೂರ್ಣ ಪ್ರಮಾಣದ ಯುದ್ಧ ನಡೆ
ಸಲು ಸನ್ನದ್ಧ ಎಂದು ಭಾರತದ ಸೇನೆಯು ಬುಧವಾರ ಹೇಳಿದೆ.

ಯುದ್ಧದ ಸನ್ನಿವೇಶವನ್ನು ಚೀನಾ ಸೃಷ್ಟಿಸಿದರೆ, ಉತ್ತಮ ತರಬೇತಿ ಮತ್ತು ಸನ್ನದ್ಧತೆಯ, ಸಾಕಷ್ಟು ವಿಶ್ರಾಂತಿ ಪಡೆದಿರುವ ಹಾಗೂ ಮಾನಸಿಕವಾಗಿ ಹೆಚ್ಚು ದೃಢವಾಗಿರುವ ಭಾರತದ ಸೈನಿಕರನ್ನು ಎದುರಾಗಬೇಕಾಗುತ್ತದೆ ಎಂದು ಸೇನೆಯು ಎಚ್ಚರಿಕೆ ನೀಡಿದೆ.

ನಗರ ಪ್ರದೇಶದಿಂದ ಬಂದಿರುವ ಚೀನಾದ ಸೈನಿಕರಿಗೆ ಹೋಲಿಸಿದರೆ, ಭಾರತದ ಯೋಧರು ದೈಹಿಕ ಮತ್ತು ಮಾನಸಿಕವಾಗಿ ಹೆಚ್ಚು ಗಟ್ಟಿಗರು. ಕಠಿಣ ಪರಿಸ್ಥಿತಿ ಮತ್ತು ಗಡಿಯ ಪ್ರತಿಕೂಲ ಹವಾಮಾನದಲ್ಲಿ ದೀರ್ಘಾವಧಿ ನಿಯೋಜನೆಗೊಂಡ ಅನುಭವವೂ ಚೀನಾದ ಸೈನಿಕರಿಗೆ ಇಲ್ಲ ಎಂದು ಸೇನೆಯು ಉತ್ತರ ಕಮಾಂಡ್‌ ಹೇಳಿಕೆಯಲ್ಲಿ ತಿಳಿಸಿದೆ.

ADVERTISEMENT

ಭಾರತವು ಕಠಿಣ ಕಾರ್ಯಾಚರಣೆಗೆ ಸಜ್ಜಾಗಿಲ್ಲ ಮತ್ತು ಚಳಿಗಾಲವಿಡೀ ಹೋರಾಡುವಷ್ಟು ಪೂರ್ವ ಸಿದ್ಧತೆ ಇಲ್ಲ ಎಂದು ಚೀನಾದ ಸರ್ಕಾರಿ ಸ್ವಾಮ್ಯದ ‘ಗ್ಲೋಬಲ್‌ ಟೈಮ್ಸ್‌’ ಇತ್ತೀಚೆಗೆ ವರದಿ ಮಾಡಿತ್ತು. ಈ ವರದಿಗೆ ಸೇನೆಯ ಉತ್ತರ ಕಮಾಂಡ್‌ ಹೇಳಿಕೆಯ ಮೂಲಕ ಪ್ರತಿಕ್ರಿಯೆ ನೀಡಿದೆ.

‘ಇದು ಅಜ್ಞಾನವಲ್ಲದೆ ಬೇರೇನೂ ಅಲ್ಲ. ಭಾರತದ ಸೇನೆಯು ಸನ್ನದ್ಧವಾಗಿದೆ ಮತ್ತು ಪೂರ್ವ ಲಡಾಖ್‌ನಲ್ಲಿ‍ಪೂರ್ಣಪ್ರಮಾಣಕ್ಕಿಂತಲೂ ಹೆಚ್ಚಿನದಾದ ಯುದ್ಧಕ್ಕೆ ಸಜ್ಜುಗೊಂಡಿದೆ’ ಎಂದು ಉತ್ತರ ಕಮಾಂಡ್‌ನ ವಕ್ತಾರ ಹೇಳಿದ್ದಾರೆ.

‘ಭಾರತವು ಶಾಂತಿಪ್ರಿಯ ದೇಶ. ನೆರೆಯ ದೇಶಗಳ ಜತೆಗೆ ಸೌಹಾರ್ದ ಸಂಬಂಧ ಇರಿಸಿಕೊಳ್ಳಲು ಬಯಸುತ್ತದೆ. ಪೂರ್ವ ಲಡಾಖ್‌ನಲ್ಲಿನ ಗಡಿ ಸಮಸ್ಯೆ ಮಾತುಕತೆ ನಡೆಯುತ್ತಿರುವಾಗಲೂ ಸುದೀರ್ಘ ಯುದ್ಧಕ್ಕೆ ಸೇನೆ ಸಜ್ಜಾಗಿಯೇ ಇರುತ್ತದೆ’ ಎಂದು ವಕ್ತಾರ ತಿಳಿಸಿದ್ದಾರೆ.

ಗಡಿಯಲ್ಲಿ ‘ಎಚ್ಚರಿಕೆ ಗುಂಡು’

ಚೀನಾದ ಸೈನ್ಯವು ಪೂರ್ವ ಲಡಾಕ್‌ನ ಪಾಂಗಾಂಗ್ ಸರೋವರದ ಉತ್ತರ ದಂಡೆಯಲ್ಲಿ ಕಳೆದ ವಾರ ಹಲವು ಸುತ್ತು ‘ಎಚ್ಚರಿಕೆ ಗುಂಡು’ ಹಾರಾಟ ನಡೆಸಿತ್ತು. ಎರಡೂ ದೇಶಗಳ ವಿದೇಶಾಂಗ ಸಚಿವರ ನಡುವೆ ಮಾಸ್ಕೊದಲ್ಲಿನ ಸಭೆಗೂ ಮುನ್ನ ಇದು ನಡೆದಿತ್ತು ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಭಾರತದ ಯೋಧರು ಇದ್ದ ಸ್ಥಳಕ್ಕೆ ಬರಲು ಚೀನಾದ ಸೈನಿಕರು ಯತ್ನಿಸಿದ್ದರು. ಆದರೆ, ಗುಂಡು ಹಾರಾಟದ ಬೆದರಿಕೆಗೆ ಭಾರತದ ಯೋಧರು ಜಗ್ಗಲಿಲ್ಲ. ಹಾಗಾಗಿ ಚೀನೀಯರು ಹಿಂದಿರುಗಿದರು. ಹೀಗೆ ಹಿಂದಿರುಗುವಾಗ 100–200 ಸುತ್ತು ಗುಂಡು ಹಾರಿಸಿ ಹೆದರಿಸಲು ಯತ್ನಿಸಿದ್ದಾರೆ.ಸೆಪ್ಟೆಂಬರ್‌ 7ರಂದು ಕೂಡ ಗಡಿಯಲ್ಲಿ ಗುಂಡು ಹಾರಾಟ ನಡೆದಿತ್ತು. ಗುಂಡು ಹಾರಾಟದ ಬಗ್ಗೆ ಭಾರತ ಮತ್ತು ಚೀನಾ ಪರಸ್ಪರರ ವಿರುದ್ಧ ಆರೋಪ ಮಾಡಿದ್ದವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.