ADVERTISEMENT

ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಜತೆಗೆ ಸಿಎಂ ಆಗಲು ಸಿದ್ಧ: ಇ. ಶ್ರೀಧರನ್‌

ಪಿಟಿಐ
Published 19 ಫೆಬ್ರುವರಿ 2021, 19:30 IST
Last Updated 19 ಫೆಬ್ರುವರಿ 2021, 19:30 IST
ಮೆಟ್ರೊ ಮ್ಯಾನ್ ಖ್ಯಾತಿಯ ಇ. ಶ್ರೀಧರನ್
ಮೆಟ್ರೊ ಮ್ಯಾನ್ ಖ್ಯಾತಿಯ ಇ. ಶ್ರೀಧರನ್   

ನವದೆಹಲಿ: ‘ಕೇರಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಲು ನೆರವಾಗುವ ಜತೆಗೆ ಪಕ್ಷ ಬಯಸಿದರೆ ಮುಖ್ಯಮಂತ್ರಿ ಸ್ಥಾನ ಅಲಂಕರಿಸಲು ಸಿದ್ಧವಿದ್ದೇನೆ’ ಎಂದು ಮುಂದಿನ ವಾರ ಬಿಜೆಪಿ ಸೇರಲಿರುವ ಮೆಟ್ರೋಮ್ಯಾನ್‌ ಎಂದೇ ಹೆಸರಾದ ಇ. ಶ್ರೀಧರನ್‌ ಶುಕ್ರವಾರ ಹೇಳಿದ್ದಾರೆ.

ಕೇರಳದ ಪೊನ್ನಾನಿಯಿಂದ ದೂರವಾಣಿಯಲ್ಲಿ ಮಾತನಾಡಿರುವ ಅವರು, ಇದೇ ವರ್ಷದ ಏಪ್ರಿಲ್‌– ಮೇ ತಿಂಗಳಿನಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಜಯ ಗಳಿಸಿದರೆ ರಾಜ್ಯದಲ್ಲಿ ಮೂಲಸೌಕರ್ಯಗಳನ್ನು ದೊಡ್ಡಮಟ್ಟದಲ್ಲಿ ಅಭಿವೃದ್ಧಿಪಡಿಸಲಾಗುವುದು. ಅಲ್ಲದೇ ರಾಜ್ಯವನ್ನು ಸಾಲದ ಬಲೆಯಿಂದ ಮುಕ್ತಗೊಳಿಸಲು ಗಮನ ಹರಿಸಲಾಗುವುದು ಎಂದು ಹೇಳಿದ್ದಾರೆ.

‘ರಾಜ್ಯಪಾಲ ಹುದ್ದೆಯ ಮೇಲೆ ನನಗೆ ಆಸಕ್ತಿ ಇಲ್ಲ. ಸಾಂವಿಧಾನಿಕ ಹುದ್ದೆಗೆ ಹೆಚ್ಚಿನ ಅಧಿಕಾರವಿರುವುದಿಲ್ಲ, ಆ ಹುದ್ದೆಯಿಂದ ರಾಜ್ಯದಲ್ಲಿ ಸಕರಾತ್ಮಕ ಬದಲಾವಣೆ ತರಲು ಮತ್ತು ರಾಜ್ಯಕ್ಕೆ ಹೆಚ್ಚಿನ ಕೊಡುಗೆ ನೀಡಲು ಸಾಧ್ಯವಾಗದು. ಪಕ್ಷ ಬಯಸಿದರೆ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವೆ. ಪಕ್ಷವು ಅಧಿಕಾರಕ್ಕೆ ಬಂದು, ಪಕ್ಷ ಸೂಚಿಸಿದರೆ ಮುಖ್ಯಮಂತ್ರಿ ಸ್ಥಾನವನ್ನು ಅಲಂಕರಿಸಲು ಸಿದ್ಧನಿದ್ದೇನೆ’ ಎಂದು 88ರ ಹರೆಯದ ತಂತ್ರಜ್ಞ ಇ. ಶ್ರೀಧರನ್‌ ಹೇಳಿದ್ದಾರೆ.

ADVERTISEMENT

‘ಕೇರಳದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರುವುದು ನನ್ನ ಪ್ರಮುಖ ಆಲೋಚನೆ. ಕೇರಳದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದರೆ, ನಾವು ಗಮನಹರಿಸಬಹುದಾದ ಮೂರರಿಂದ ನಾಲ್ಕು ಪ್ರಮುಖ ಕ್ಷೇತ್ರಗಳಿವೆ. ಒಂದು; ದೊಡ್ಡಮಟ್ಟದಲ್ಲಿ ಮೂಲಸೌಕರ್ಯ ಅಭಿವೃದ್ಧಿಪಡಿಸುವುದು ಮತ್ತು ಇನ್ನೊಂದು; ರಾಜ್ಯಕ್ಕೆ ಕೈಗಾರಿಕೆಗಳನ್ನು ತರುವುದು’ ಎಂದು ಹೇಳಿದ್ದಾರೆ.

‘ರಾಜ್ಯ ಸರ್ಕಾರ ಅತಿಯಾದ ಸಾಲ ಮಾಡುತ್ತಿರುವುದರಿಂದ ಸಾಲದ ಸುಳಿಗೆ ಸಿಲುಕಿದೆ. ಪ್ರತಿ ಮಲಯಾಳಿಗರ ಮೇಲೆ ತಲಾ ₹ 1.4 ಲಕ್ಷ ಸಾಲವಿದೆ. ರಾಜ್ಯ ಆರ್ಥಿಕವಾಗಿ ದಿವಾಳಿಯಾಗುತ್ತಿದೆ. ರಾಜ್ಯದ ಆರ್ಥಿಕ ಸ್ಥಿತಿ ಸರಿದಾರಿಗೆ ತರಲು ಹಣಕಾಸು ಆಯೋಗ ರಚಿಸುವ ಉದ್ದೇಶವೂ ಇದೆ’ ಎಂದು ಅವರು ಹೇಳಿದ್ದಾರೆ.

‘ಕಳೆದ 20 ವರ್ಷಗಳಿಂದ ಸರದಿ ಪ್ರಕಾರ ಯುಡಿಎಫ್‌ ಮತ್ತು ಎಲ್‌ಡಿಎಫ್‌ ರಾಜ್ಯದಲ್ಲಿ ಅಧಿಕಾರ ನಡೆಸುತ್ತಿವೆ. ಈ ಎರಡೂ ಪಕ್ಷಗಳಿಂದ ರಾಜ್ಯವನ್ನು ಪ್ರಗತಿಯತ್ತ ಕೊಂಡೊಯ್ಯಲು ಸಾಧ್ಯವಾಗಿಲ್ಲ, ಒಂದೇ ಒಂದು ಉದ್ಯಮವನ್ನು ತರಲು ಆಗಿಲ್ಲ. ಸದಾ ಕೇಂದ್ರ ಸರ್ಕಾರದೊಂದಿಗೆ ಸಂಘರ್ಷ ನಡೆಸಿಕೊಂಡು ಬಂದಿವೆ. ಇದರಿಂದ ರಾಜ್ಯವು ಅಭಿವೃದ್ಧಿಯಲ್ಲಿ ಹಿಂದುಳಿದಿದೆ. ಕೇಂದ್ರದಲ್ಲಿ ಬಿಜೆಪಿ ಇರುವುದರಿಂದ ರಾಜ್ಯದಲ್ಲೂ ಬಿಜೆಪಿ ಅಧಿಕಾರಕ್ಕೆ ಬಂದರೆ ಒಳ್ಳೆಯ ಸಂಬಂಧ ಸಾಧಿಸಿ, ರಾಜ್ಯವನ್ನು ಅಭಿವೃದ್ಧಿಯತ್ತ ಮುನ್ನಡೆಸಬಹುದು’ ಎಂದು ಅವರು ಹೇಳಿದ್ದಾರೆ.

ಫೆ.25ರಂದು ಇ.ಶ್ರೀಧರನ್‌ ಔಪಚಾರಿಕವಾಗಿ ಪಕ್ಷವನ್ನು ಸೇರಲಿದ್ದು, ರಾಜಕೀಯ ರಂಗ ಪ್ರವೇಶಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.