ಜೂನ್ 9ರಂದು ಉಗ್ರರು ನಡೆಸಿದ ಗುಂಡಿನ ದಾಳಿಯಿಂದಾಗಿ ಯಾತ್ರಿಕ ಬಸ್ ಕಂದಕಕ್ಕೆ ಉರುಳಿಬಿದ್ದಿತ್ತು
–ಪಿಟಿಐ ಚಿತ್ರ
ನವದೆಹಲಿ: ಇತ್ತೀಚೆಗೆ ಜಮ್ಮು ಮತ್ತು ಕಾಶ್ಮೀರದ ರಿಯಾಸಿ ಜಿಲ್ಲೆಯಲ್ಲಿ ನಡೆದ ಭಯೋತ್ಪಾದನಾ ದಾಳಿ ಪ್ರಕರಣಕ್ಕೆ ಸಂಬಂಧಿಸಿದ ತನಿಖೆಯನ್ನು ಚುರುಕುಗೊಳಿಸಿರುವ ರಾಷ್ಟ್ರೀಯ ತನಿಖಾ ತಂಡವು (ಎನ್ಐಎ) ಭಾನುವಾರ ರಾಜೌರಿ ಜಿಲ್ಲೆಯ ವಿವಿಧ ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದೆ.
ಈ ಕಾರ್ಯಾಚರಣೆ ವೇಳೆ ಭಯೋತ್ಪಾದಕರು ಮತ್ತು ಭಯೋತ್ಪಾದಕರಿಗೆ ವಸತಿ ಸೌಕರ್ಯ, ಹಣಕಾಸು ಸೇರಿದಂತೆ ಇನ್ನಿತರ ಸೌಕರ್ಯ ಕಲ್ಪಿಸಿಕೊಡುವ ಮಧ್ಯವರ್ತಿಗಳಿಗೆ ಸಂಬಂಧಿಸಿದ ಹಲವು ವಸ್ತುಗಳನ್ನು ಜಪ್ತಿ ಮಾಡಲಾಗಿದೆ ಎಂದು ಎನ್ಐಎ ಹೇಳಿಕೆ ಬಿಡುಗಡೆ ಮಾಡಿದೆ.
ಬಂಧಿತ ಆರೋಪಿ ಹಕಂ ಖಾನ್ ಅಲಿಯಾಸ್ ಹಾಕಿನ್ ದಿನ್ ನೀಡಿದ ಮಾಹಿತಿ ಮೇರೆಗೆ ಐದು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ಕೈಗೊಳ್ಳಲಾಯಿತು. ಈ ಆರೋಪಿಯು, ಭಯೋತ್ಪಾದಕರಿಗೆ ಸುರಕ್ಷಿತ ವಸತಿ, ಆಹಾರ ಸೇರಿದಂತೆ ಇನ್ನಿತರ ಸೌಕರ್ಯಗಳನ್ನು ನೀಡಿದ್ದ ಎಂದು ಎನ್ಐಎ ತಿಳಿಸಿದೆ.
ಜೂನ್ 9ರಂದು ರಿಯಾಸಿ ಜಿಲ್ಲೆಯ ಪೌನಿ ಎಂಬಲ್ಲಿ ಶಿವ ಖೋರಿಯಿಂದ ಕಾತರಾ ಎಂಬ ಪ್ರದೇಶಕ್ಕೆ ಯಾತ್ರಿಕರನ್ನು ಕರೆದೊಯ್ಯುತ್ತಿದ್ದ ಬಸ್ಸಿನ ಮೇಲೆ ಭಯೋತ್ಪಾದಕರು ಗುಂಡಿನ ದಾಳಿ ನಡೆಸಿದ್ದರು. ಇದರಿಂದ ಬಸ್ ಕಂದಕಕ್ಕೆ ಉರುಳಿಬಿದ್ದು, 9 ಮಂದಿ ಮೃತಪಟ್ಟಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.