
ಇ.ಡಿ
ನವದೆಹಲಿ: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟ ಕುರಿತ ತನಿಖೆಯನ್ನು ವ್ಯಾಪಕಗೊಳಿಸಿರುವ ಜಾರಿ ನಿರ್ದೇಶನಾಲಯ (ಇ.ಡಿ), ಅಲ್ ಫಲಾಹ್ ವಿಶ್ವವಿದ್ಯಾಲಯ ಟ್ರಸ್ಟಿಗಳು ಹಾಗೂ ಪ್ರವರ್ತಕರಿಗೆ ಸಂಬಂಧಿಸಿದ ಸ್ಥಳಗಳಲ್ಲಿ ಮಂಗಳವಾರ ಶೋಧ ನಡೆಸಿದೆ.
ರಾಷ್ಟ್ರ ರಾಜಧಾನಿ ದೆಹಲಿ ಹಾಗೂ ಸುತ್ತಲಿನ ನಗರ ಪ್ರದೇಶಗಳಲ್ಲಿನ ಸ್ಥಳಗಳಲ್ಲಿ ಇ.ಡಿ ಅಧಿಕಾರಿಗಳು ಶೋಧ ನಡೆಸಿದ್ಧಾರೆ. ಸಂಶಯಾಸ್ಪದ ಭಯೋತ್ಪಾದಕ ಚಟುವಟಿಕೆಗಳಲ್ಲಿ, ಅಲ್ ಫಲಾಹ್ ವಿಶ್ವವಿದ್ಯಾಲಯದ ಕೆಲ ಸಿಬ್ಬಂದಿ ಪಾತ್ರ ಇದೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಇ.ಡಿ ಈ ಕಾರ್ಯಾಚರಣೆ ನಡೆಸಿದೆ.
ಶೆಲ್ ಕಂಪನಿಗಳ (ಸಕ್ರಿಯವಾದ ಚಟುವಟಿಕೆ ಇಲ್ಲದ ಕಂಪನಿಗಳು) ಮೂಲಕ ಹಣದ ಅವ್ಯವಹಾರ ನಡೆಸಲಾಗಿದೆ, ಅಲ್ ಫಲಾಹ್ ಟ್ರಸ್ಟ್ ಹಾಗೂ ಅದರ ಇತರ ಅಂಗಸಂಸ್ಥೆಗಳಿಂದ ಹಣದ ಅಕ್ರಮ ವರ್ಗಾವಣೆ ನಡೆದಿದೆ ಎಂಬ ಆರೋಪಗಳ ಕುರಿತ ತನಿಖೆಯ ಭಾಗವಾಗಿ ಈ ಶೋಧ ನಡೆಸಲಾಗಿದೆ ಎಂದೂ ಅಧಿಕಾರಿಗಳು ಹೇಳಿದ್ದಾರೆ.
‘ಬೆಳಿಗ್ಗೆ 5.15ಕ್ಕೆ ಶೋಧ ಕಾರ್ಯಕ್ಕೆ ಚಾಲನೆ ನೀಡಲಾಯಿತು. ಅಲ್ ಫಲಾಹ್ ಟ್ರಸ್ಟ್ ಹಾಗೂ ವಿಶ್ವವಿದ್ಯಾಲಯ, ವಿ.ವಿಯ ಹಣಕಾಸು ಮತ್ತು ಆಡಳಿತ ಮೇಲ್ವಿಚಾರಣೆ ನಡೆಸುವ ಸಿಬ್ಬಂದಿಗೆ ಸೇರಿದ 25 ಸ್ಥಳಗಳಲ್ಲಿ ಶೋಧ ನಡೆಸಲಾಗಿದೆ. ದೆಹಲಿಯ ಓಖ್ಲಾದಲ್ಲಿರುವ ಟ್ರಸ್ಟ್‌ನ ಕಚೇರಿಯಲ್ಲೂ ಶೋಧ ನಡೆಸಲಾಗಿದೆ’ ಎಂದು ಅಧಿಕಾರಿಗಳು ಹೇಳಿದ್ದಾರೆ.
ಈ ವಿಶ್ವವಿದ್ಯಾಲಯವು ಹರಿಯಾಣದ ಫರೀದಾಬಾದ್ ಜಿಲ್ಲೆಯ ಧೌಜ್ ಗ್ರಾಮದಲ್ಲಿದ್ದು, ದೆಹಲಿ ಗಡಿಯಿಂದ 30 ಕಿ.ಮೀ. ದೂರದಲ್ಲಿದೆ.
ವಿ.ವಿಯ ಹಣಕಾಸು ವ್ಯವಹಾರ ಕುರಿತು ಇ.ಡಿ ಹಾಗೂ ಇತರ ಸಂಸ್ಥೆಗಳಿಂದ ಲೆಕ್ಕಪರಿಶೋಧನೆ ಹಾಗೂ ತನಿಖೆ ನಡೆಸುವಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಆದೇಶಿಸಿದ ಬೆನ್ನಲ್ಲೇ, ಇ.ಡಿ ಅಧಿಕಾರಿಗಳು ಕಾರ್ಯಾಚರಣೆ ಆರಂಭಿಸಿದ್ದಾರೆ.
* ಒಂದೇ ವಿಳಾಸದಲ್ಲಿ ನೋಂದಣಿಯಾಗಿರುವ 9 ಶೆಲ್ ಕಂಪನಿಗಳ ಕುರಿತ ವಿವರಗಳನ್ನು ಇ.ಡಿ ಅಧಿಕಾರಿಗಳು ಜಾಲಾಡಿದ್ದಾರೆ
* ಈ ಎಲ್ಲ ಶೆಲ್ ಕಂಪನಿಗಳು ಒಂದೇ ಮೊಬೈಲ್ ನಂಬರ್ ಹಾಗೂ ಇ–ಮೇಲ್ ವಿಳಾಸ ಬಳಸುತ್ತಿವೆ
* ಈ ಕಂಪನಿಗಳು ಕಚೇರಿಗಳನ್ನು ಹೊಂದಿಲ್ಲ. ಅವುಗಳು ಘೋಷಿಸಿರುವ ಸ್ಥಳಗಳಲ್ಲಿ ಯಾವುದೇ ವಾಣಿಜ್ಯ ಚಟುವಟಿಕೆಗಳು ಇಲ್ಲ ಎಂದು ಅಧಿಕಾರಿಗಳ ಹೇಳಿಕೆ
* ಕಂಪನಿಗಳು ಘೋಷಿಸಿರುವ ಕಾರ್ಯಾಚರಣೆಗಳಿಗೂ ಹಾಗೂ ಇಪಿಎಫ್‌ಒ/ಇಎಸ್‌ಐಸಿಗೆ ಸಲ್ಲಿಸಿರುವ ದಾಖಲೆಗಳಿಗೆ ತಾಳೆ ಆಗುತ್ತಿಲ್ಲ ಎಂದು ಇ.ಡಿ ತಿಳಿಸಿದೆ
* ಕಂಪನಿಗಳ ಸಿಬ್ಬಂದಿಯ ಕೆವೈಸಿ ಸಮರ್ಪಕವಾಗಿ ಇಲ್ಲ. ಕನಿಷ್ಠ ಪ್ರಮಾಣದ ವೇತನವನ್ನು ಬ್ಯಾಂಕ್ ಖಾತೆಗಳ ಮೂಲಕ ವಿತರಿಸಿರುವುದು ಮಾನವ ಸಂಪನ್ಮೂಲ ದಾಖಲೆಗಳು ಇಲ್ಲದಿರುವುದನ್ನು ಪತ್ತೆ ಹಚ್ಚಲಾಗಿದೆ ಎಂದು ತಿಳಿಸಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.