ADVERTISEMENT

ಪುನರ್ವಸತಿ ಪ್ಯಾಕೇಜ್‌ ₹15 ಲಕ್ಷಕ್ಕೆ ಹೆಚ್ಚಳ

ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಒಪ್ಪಿಗೆ

​ಪ್ರಜಾವಾಣಿ ವಾರ್ತೆ
Published 31 ಜನವರಿ 2023, 19:54 IST
Last Updated 31 ಜನವರಿ 2023, 19:54 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಅಭಯಾರಣ್ಯಗಳು ಹಾಗೂ ರಾಷ್ಟ್ರೀಯ ಉದ್ಯಾನಗಳಿಂದ ಸ್ವಯಂಪ್ರೇರಿತವಾಗಿ ಹೊರಗೆ ಬರುವ ಪ್ರತಿ ಕುಟುಂಬಕ್ಕೆ ನೀಡುವ ₹10 ಲಕ್ಷದ ಪುನರ್ವಸತಿ ಮೊತ್ತವನ್ನು ₹15 ಲಕ್ಷಕ್ಕೆ ಹೆಚ್ಚಿಸಲು ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಸ್ಥಾಯಿ ಸಮಿತಿ ಒಪ್ಪಿಗೆ ನೀಡಿದೆ.

ನವದೆಹಲಿಯಲ್ಲಿ ಈಚೆಗೆ ನಡೆದ ಮಂಡಳಿಯ 71ನೇ ಸಭೆಯಲ್ಲಿ ಈ ತೀರ್ಮಾನ ತೆಗೆದುಕೊಳ್ಳಲಾಯಿತು. ಹುಲಿ ಸಂರಕ್ಷಿತ ಪ್ರದೇಶಗಳಿಂದ ಸ್ವಯಂಪ್ರೇರಿತರಾಗಿ ಹೊರ ಬರುವ ಪ್ರತಿ ಕುಟುಂಬಕ್ಕೆ ₹15 ಲಕ್ಷ ನೀಡಲಾಗುತ್ತಿದೆ. ಇದನ್ನು ಅಭಯಾರಣ್ಯ ಹಾಗೂ ರಾಷ್ಟ್ರೀಯ ಉದ್ಯಾನಕ್ಕೂ ವಿಸ್ತರಿಸಬೇಕು ಎಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳು ಪರಿಸರ ಸಚಿವಾಲಯಕ್ಕೆ ಪ್ರಸ್ತಾವ ಸಲ್ಲಿಸಿದ್ದವು.

ಈ ಮಧ್ಯೆ, ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ ಕುಲಕರ್ಣಿ ಅವರು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರಕ್ಕೆ ಪತ್ರ ಬರೆದು, ‘ಈಗಿರುವ ನಿಯಮಾವಳಿಗಳ ಪ್ರಕಾರ ₹15 ಲಕ್ಷ ಪ್ಯಾಕೇಜ್ ಹುಲಿ ಸಂರಕ್ಷಿತ ಪ್ರದೇಶಗಳಿಗೆ ಮಾತ್ರ ಅನ್ವಯಿಸು
ತ್ತದೆ. ಆದರೆ, ದೇಶದೆಲ್ಲೆಡೆ ಅಳಿವಿನಂಚಿ ನಲ್ಲಿರುವ ಅನೇಕ ವನ್ಯಪ್ರಭೇದಗಳನ್ನು ಹೊಂದಿರುವ ಅಭಯಾರಣ್ಯಗಳು ಮತ್ತು ರಾಷ್ಟ್ರೀಯ ಉದ್ಯಾನಗಳು ಹಲವಾರು ಇವೆ. ಇವುಗಳು ಹುಲಿ ಸಂರಕ್ಷಿತ ಪ್ರದೇಶಗಳೆಂದು ಅಧಿಸೂಚಿತವಾಗಿರುವುದಿಲ್ಲ. ಆದರೆ,ಇಲ್ಲಿ ವಾಸಿಸುತ್ತಿರುವ ಸಾವಿರಾರುಕುಟುಂಬಗಳು ಮೂಲಸೌಕರ್ಯಗಳ ಕೊರತೆ ಹಾಗೂ ತಮ್ಮ ಮುಂದಿನ ಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಸ್ವಯಂಪ್ರೇರಿತರಾಗಿ ಪುನರ್ವಸತಿಗೆ ಸಿದ್ಧರಾಗಿದ್ದಾರೆ. ಆದರೆ, ಸೂಕ್ತ ಪುನರ್ವಸತಿ ಪ್ಯಾಕೇಜಿನ ಕೊರತೆಯಿಂದ ಪುನರ್ವಸತಿ ಯೋಜನೆ ಸೂಕ್ತ ಪ್ರಗತಿ ಕಂಡಿಲ್ಲ’ ಎಂದು ಗಮನ ಸೆಳೆದಿದ್ದರು.

ADVERTISEMENT

‘ಸೂಕ್ತ ಪುನರ್ವಸತಿ ಒದಗಿಸಿ ಎಂದು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕಿನ ತಳೇವಾಡಿ ಗ್ರಾಮಸ್ಥರು ಮನವಿ ಸಲ್ಲಿಸಿ ಎಂಟು ವರ್ಷಗಳು ಕಳೆದಿವೆ. ಇಲ್ಲಿಯ ತನಕ ಯಾವುದೇ ಪ್ರಗತಿ ಆಗಿಲ್ಲ. ಇಂತಹ ಸಂರಕ್ಷಿತ ಪ್ರದೇಶಗಳಿಗೆ ಪುನರ್ವಸತಿಗೆ ಬೇಕಾಗುವ ಅನುದಾನಕ್ಕೆ ಯಾವುದೇ ಕೊರತೆ ಇರುವುದಿಲ್ಲ’ ಎಂದು ಪತ್ರದಲ್ಲಿ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.