ADVERTISEMENT

ಹೆರಿಗೆ: ಬಟ್ಟೆ ಜೋಳಿಗೆಯಲ್ಲಿ ಗರ್ಭಿಣಿ ಸಾಗಣೆ

ಮಳೆ ಸೃಷ್ಟಿಸಿದ ಅವಾಂತರ

ಪಿಟಿಐ
Published 4 ಡಿಸೆಂಬರ್ 2019, 15:48 IST
Last Updated 4 ಡಿಸೆಂಬರ್ 2019, 15:48 IST

ಚೆನ್ನೈ: ಭಾರಿ ಮಳೆಯಿಂದಾಗಿ ಸಂಚಾರವೇ ದುಸ್ತರವಾಗಿದ್ದ ಸಂದರ್ಭದಲ್ಲಿ, ಬಟ್ಟೆ ಹಾಗೂ ಬಂಬೂ ಬಳಸಿ ಸಿದ್ಧಪಡಿಸಿದ ಜೋಳಿಗೆಯಲ್ಲಿ ಗರ್ಭಿಣಿಯನ್ನು ಆಂಬುಲೆನ್ಸ್‌ ಇರುವ ಸ್ಥಳಕ್ಕೇ ಹೊತ್ತೊಯ್ದ ಘಟನೆ ಈರೋಡ್‌ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಬರಗೂರು ಹಿಲ್ಸ್‌ ಎಂಬಲ್ಲಿರುವ ಸಂದೈಪುರ ಗ್ರಾಮದ, 23 ವರ್ಷದ ಕುಮಾರಿ ಎಂಬ ಗರ್ಭಿಣಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಮಳೆಯಿಂದಾಗಿ ರಸ್ತೆ ಸಂಪರ್ಕ ಕಡಿತಗೊಂಡಿದ್ದ ಕಾರಣ, ಮಹಿಳೆಯನ್ನು ಆಸ್ಪತ್ರೆಗೆ ಒಯ್ಯುವುದೇ ಸವಲಾಯಿತು. ಆಂಬುಲೆನ್ಸ್‌ ಅನ್ನು ಗ್ರಾಮಕ್ಕೆ ತರುವ ಪ್ರಯತ್ನಗಳೂ ಕೈಗೂಡಲಿಲ್ಲ.

ಕೊನೆಗೆ ಬಂಬೂ ಹಾಗೂ ಬಟ್ಟೆ ಬಳಸಿ ಜೋಳಿಗೆಯೊಂದನ್ನು ಸಿದ್ಧಪಡಿಸಿದ ಗ್ರಾಮಸ್ಥರು, ಅದರಲ್ಲಿ ಮಹಿಳೆಯನ್ನು ಕೂಡಿಸಿ 6 ಕಿ.ಮೀ. ದೂರ ಸಾಗಿ, ಅಲ್ಲಿ ಕಾಯುತ್ತಿದ್ದ ಆಂಬುಲೆನ್ಸ್‌ಗೆ ಆಕೆಯನ್ನು ಸ್ಥಳಾಂತರ ಮಾಡಿದ್ದಾರೆ. ಈ ದೃಶ್ಯಗಳನ್ನು ಕೆಲವರು ಚಿತ್ರೀಕರಿಸಿದ್ದು, ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ADVERTISEMENT

ಆದರೆ, ಮಾರ್ಗ ಮಧ್ಯೆಯೇ ಆಂಬುಲೆನ್ಸ್‌ನಲ್ಲಿ ಹೆರಿಗೆಯಾಗಿದ್ದು, ಆ ಮಹಿಳೆ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಕೂಡಲೇ ಸಮೀಪದ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ತಾಯಿ–ಮಗುವನ್ನು ದಾಖಲಿಸಿ, ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ನಂತರ ಅಂದಿಯೂರ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.