ADVERTISEMENT

ರಾಜೀವ್ ಗಾಂಧಿ ಹತ್ಯೆ ಅಪರಾಧಿ ಬಿಡುಗಡೆ: ಸಿಎಂ ಸ್ಟಾಲಿನ್ ಭೇಟಿಯಾದ ಪೇರರಿವಾಳನ್

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಮೇ 2022, 2:10 IST
Last Updated 19 ಮೇ 2022, 2:10 IST
ಎ.ಜಿ.ಪೇರರಿವಾಳನ್ ಕುಟುಂಬಸ್ಥರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಿದ್ದರು.
ಎ.ಜಿ.ಪೇರರಿವಾಳನ್ ಕುಟುಂಬಸ್ಥರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಿದ್ದರು.   

ಚೆನ್ನೈ: ಮಾಜಿ ಪ್ರಧಾನಿ ರಾಜೀವ್ ಗಾಂಧಿ ಅವರ ಹತ್ಯೆ ಪ್ರಕರಣದ ಅಪರಾಧಿ ಎ.ಜಿ.ಪೇರರಿವಾಳನ್ ಅವರನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಬುಧವಾರ ಬಿಡುಗಡೆ ಮಾಡಲಾಗಿದೆ.

ಜೈಲಿನಿಂದ ಬಿಡುಗಡೆಯಾದ ಬೆನ್ನಲ್ಲೇ ಎ.ಜಿ.ಪೇರರಿವಾಳನ್ ಹಾಗೂ ಅವರ ತಾಯಿ ಅರ್ಪುತಮ್ಮ ಅಮ್ಮಾಳ್ ಅವರು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರನ್ನು ಭೇಟಿಯಾಗಿದ್ದಾರೆ.

ರಾಜೀವ್ ಗಾಂಧಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಎ.ಜಿ ಪೇರರಿವಾಳನ್‌ ಅವರನ್ನು 1991ರ ಜೂನ್‌ 19ರಂದು ಬಂಧಿಸಲಾಗಿತ್ತು. ಅವರು 31 ವರ್ಷಗಳ ಕಾಲ ಜೈಲಿನಲ್ಲಿದ್ದರು. ಮಗನ ಬಿಡುಗಡೆಗಾಗಿ ಅರ್ಪುತಮ್ಮ ಅಮ್ಮಾಲ್‌ ಅವರು 31 ವರ್ಷಗಳ ಕಾಲ ಸುದೀರ್ಘ ಹೋರಾಟ ನಡೆಸಿದ್ದರು.

ADVERTISEMENT

ಪ್ರಕರಣದ 7 ಮಂದಿ ಅಪರಾಧಿಗಳಲ್ಲಿ ಪೇರರಿವಾಳನ್‌ ಒಬ್ಬರಾಗಿದ್ದು, ಜೀವಾವಧಿ ಶಿಕ್ಷೆ ಅನುಭವಿಸುತ್ತಿದ್ದರು.

ಪೇರರಿವಾಳನ್‌ ಭೇಟಿ ಕುರಿತಾದ ವಿಡಿಯೊವನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿರುವ ಸ್ಟಾಲಿನ್, ‘30 ವರ್ಷಗಳ ಜೈಲುವಾಸ ಮುಗಿಸಿ ಹಿಂದಿರುಗಿದ ಸಹೋದರ ಪೇರರಿವಾಳನ್‌ ಅವರನ್ನು ಭೇಟಿಯಾದೆ. ಪೇರರಿವಾಳನ್‌ ಹಾಗೂ ಆತನ ತಾಯಿ ಅರ್ಪುತಮ್ಮ ಅಮ್ಮಾಲ್‌ ಅವರಿಗೆ ಸಂತೋಷದಿಂದ ಜೀವನ ನಡೆಸಲು ಹಾರೈಸಿದ್ದೇನೆ’ ಎಂದು ಬರೆದುಕೊಂಡಿದ್ದಾರೆ.

ರಾಜೀವ್ ಗಾಂಧಿ ಹಂತಕರ ಬಿಡುಗಡೆಯು ಡಿಎಂಕೆ ಮತ್ತು ಎಐಎಡಿಎಂಕೆ ನಡುವಿನ ರಾಜಕೀಯ ವಿಷಯಗಳಲ್ಲಿ ಒಂದಾಗಿತ್ತು. ಹಾಗಾಗಿ ಈ ಪ್ರಕರಣ ಹೆಚ್ಚು ಪ್ರಮುಖ್ಯತೆ ಪಡೆದುಕೊಂಡಿತ್ತು.

ಕಳೆದ ವಿಧಾನಸಭೆ ಚುನಾವಣೆ ಪ್ರಣಾಳಿಕೆಯಲ್ಲಿ ಡಿಎಂಕೆ ಅಧಿಕಾರಕ್ಕೆ ಬಂದ ನಂತರ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ ಏಳು ಮಂದಿ ಅಪರಾಧಿಗಳನ್ನು ಬಿಡುಗಡೆ ಮಾಡುವುದಾಗಿ ಭರವಸೆ ನೀಡಿತ್ತು.

2018ರಲ್ಲಿ‌ ಮಾಜಿ ಮುಖ್ಯಮಂತ್ರಿ ಪಳನಿಸ್ವಾಮಿ ಅವರ ಸಂಪುಟವು ಅಪರಾಧಿಗಳ ಬಿಡುಗಡೆಗೆ ಶಿಫಾರಸು ಮಾಡಿತ್ತು. ಆದರೆ, ರಾಜ್ಯಪಾಲರು ಈ ಕುರಿತು ಯಾವುದೇ ಕ್ರಮ ಕೈಗೊಂಡಿರಲಿಲ್ಲ.

ಇದೀಗ ಸಂವಿಧಾನದ 142ನೇ ವಿಧಿಯ ಅಡಿಯಲ್ಲಿ ಸುಪ್ರೀಂಕೋರ್ಟ್‌ಗೆ ನೀಡಲಾಗಿರುವ ಪರಮಾಧಿಕಾರವನ್ನು ಚಲಾಯಿಸಿ ನ್ಯಾಯಮೂರ್ತಿಗಳಾದ ಎಲ್. ನಾಗೇಶ್ವರ ರಾವ್ ಮತ್ತು ಬಿ.ಆರ್. ಗವಾಯಿ ಅವರನ್ನೊಳಗೊಂಡ ನ್ಯಾಯ ಪೀಠವು ಪೇರರಿವಾಳನ್ ಅವರನ್ನು ಬಿಡುಗಡೆ ಮಾಡಲು ಆದೇಶ ನೀಡಿದೆ.

ಸಂವಿಧಾನದ 161ನೇ ವಿಧಿಯಡಿ ಪೇರರಿವಾಳನ್‌ ದೋಷಮುಕ್ತಿಗೆ ತೀರ್ಮಾನ ಕೈಗೊಳ್ಳಲು ತಮಿಳುನಾಡು ರಾಜ್ಯಪಾಲರು ಬಹಳಷ್ಟು ವಿಳಂಬ ಮಾಡಿದ ಹಿನ್ನೆಲೆಯಲ್ಲಿ ನ್ಯಾಯಪೀಠವು 142ನೇ ವಿಧಿಯಡಿ ಅಧಿಕಾರ ಚಲಾಯಿಸಿ ಬಿಡುಗಡೆಗೆ ಆದೇಶಿಸಿದೆ. ಜಾಮೀನು ಪ್ರಕಟಿಸುವ ಸಮಯದಲ್ಲಿ ನ್ಯಾಯಪೀಠವು, ‘ಅಪರಾಧಿಯು 30 ವರ್ಷಕ್ಕೂ ಹೆಚ್ಚು ಕಾಲ ಜೈಲುವಾಸ ಶಿಕ್ಷೆ ಅನುಭವಿಸಿದ್ದು, ಅವರ ನಡವಳಿಕೆಯು ತೃಪ್ತಿದಾಯಕವಾಗಿದೆ’ ಎಂದೂ ಹೇಳಿದೆ.

‘ಪ್ರಕರಣದ ಎಲ್ಲ 7 ಅಪರಾಧಿಗಳನ್ನು ಅವಧಿಗೆ ಮುನ್ನ ಬಿಡುಗಡೆ ಮಾಡುವಂತೆ ಶಿಫಾರಸು ಮಾಡಿರುವ ತಮಿಳುನಾಡು ರಾಜ್ಯ ಸಚಿವ ಸಂಪುಟದ ಸಲಹೆಯು ರಾಜ್ಯಪಾಲರಿಗೆ ಬದ್ಧವಾಗಿದೆ’ ಎಂದು ಹೇಳಿದ ನ್ಯಾಯಪೀಠವು, ‘ಐಪಿಸಿ ಸೆಕ್ಷನ್ 302ರ ಅಡಿಯಲ್ಲಿರುವ ಪ್ರಕರಣದಲ್ಲಿ ಕ್ಷಮಾದಾನ ನೀಡಲು ರಾಷ್ಟ್ರಪತಿಗಳಿಗೆ ಮಾತ್ರ ಅಧಿಕಾರವಿದೆ’ ಎಂಬ ಕೇಂದ್ರ ಸರ್ಕಾರದ ವಾದವನ್ನು ತಳ್ಳಿಹಾಕಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.