ADVERTISEMENT

ಮೋದಿ ಅಧಿಕಾರದಲ್ಲಿರುವವರೆಗೂ ಧರ್ಮಾಧಾರಿತ ಮೀಸಲಾತಿಗೆ ಅವಕಾಶ ನೀಡುವುದಿಲ್ಲ: ನಡ್ಡಾ

ಪಿಟಿಐ
Published 27 ಮೇ 2024, 11:11 IST
Last Updated 27 ಮೇ 2024, 11:11 IST
<div class="paragraphs"><p>ಜೆ.ಪಿ. ನಡ್ಡಾ</p></div>

ಜೆ.ಪಿ. ನಡ್ಡಾ

   

ವಾರಾಣಸಿ (ಉತ್ತರ ಪ್ರದೇಶ): ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ಸರ್ಕಾರ ಅಧಿಕಾರದಲ್ಲಿರುವವರೆಗೂ ಧರ್ಮಾಧಾರಿತ ಮೀಸಲಾತಿಗೆ ಅವಕಾಶ ನೀಡುವುದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ. ಪಿ ನಡ್ಡಾ ಹೇಳಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ದಲಿತರು, ಬುಡಕಟ್ಟು ಜನಾಂಗ, ಹಿಂದುಳಿದ ವರ್ಗಗಳ ಮೀಸಲಾತಿಯನ್ನು ಅತಿಕ್ರಮಿಸಲು ನಾವು ಅವಕಾಶ ನೀಡುವುದಿಲ್ಲ. ಜೂನ್‌ 4ರಂದು ಪ್ರತಿಪಕ್ಷಗಳ ಸ್ಥಿತಿ ಏನಾಗುತ್ತದೆ ಎಂಬುವುದನ್ನು ನೀವು ನೋಡುತ್ತೀರಿ’ ಎಂದು ತಿಳಿಸಿದ್ದಾರೆ.

ADVERTISEMENT

ಧರ್ಮದ ಆಧಾರದ ಮೇಲೆ ಮೀಸಲಾತಿ ನೀಡಲು ವಿರೋಧ ಪಕ್ಷಗಳು ಮುಂದಾಗಿವೆ ಎಂದು ಆರೋಪಿಸಿದ ಅವರು, ಸಂವಿಧಾನದಲ್ಲಿ ಧರ್ಮಾಧಾರಿತ ಮೀಸಲಾತಿ ನೀಡಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಬರೆಯಲಾಗಿದೆ ಎಂದು ಹೇಳಿದ್ದಾರೆ.

ಹಿಂದಿನಿಂದಲೂ ರಾಜಕೀಯ ಎಂದರೆ ಒಡೆದು ಆಳುವುದು ಎಂಬರ್ಥವಿದೆ. ಆದರೆ, ಈಗ ಅಭಿವೃದ್ಧಿಯ ರಾಜಕೀಯ ನಡೆಯುತ್ತಿದೆ. ಪ್ರಧಾನಿ ಮೋದಿ ಅವರು ಕಳೆದ 10 ವರ್ಷಗಳಲ್ಲಿ ದೇಶದ ಅಭಿವೃದ್ಧಿಯ ಬಗ್ಗೆ ಜನರಲ್ಲಿ ನಂಬಿಕೆ ಮೂಡಿಸಿದ್ದಾರೆ ಎಂದು ತಿಳಿಸಿದ್ದಾರೆ.

ಚುನಾವಣಾ ಪ್ರಚಾರದಲ್ಲಿ ಭಾಗವಹಿಸಿದ ಜೆ.ಪಿ ನಡ್ಡಾ, ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಮೂರನೇ ಬಾರಿಗೆ ಕಣಕ್ಕಿಳಿದಿರುವ ಪ್ರಧಾನಿ ಮೋದಿ ಅವರ ಪರ ಮತಯಾಚಿಸಿದರು.

ಜೂನ್‌ 1ರಂದು ಏಳನೇ ಮತ್ತು ಕೊನೆಯ ಹಂತದಲ್ಲಿ ವಾರಾಣಸಿ ಕ್ಷೇತ್ರಕ್ಕೆ ಮತದಾನ ನಡೆಯಲಿದೆ. ಜೂನ್‌ 4ರಂದು ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.