ADVERTISEMENT

ಯುಪಿ | ಧಾರ್ಮಿಕ ಮತಾಂತರ ದಂಧೆ: ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದ ED

ಪಿಟಿಐ
Published 9 ಜುಲೈ 2025, 14:00 IST
Last Updated 9 ಜುಲೈ 2025, 14:00 IST
ಇ.ಡಿ
ಇ.ಡಿ   

ಲಖನೌ: ಸಮಾಜದಲ್ಲಿನ ದುರ್ಬಲ ಮತ್ತು ಬಡ ಜನರಿಗೆ ಹಣದ ಆಮಿಷವೊಡ್ಡಿ, ಮತಾಂತರ ದಂಧೆ ನಡೆಸುತ್ತಿರುವ ಜಾಲದ ವಿರುದ್ಧ ಜಾರಿ ನಿರ್ದೇಶನಾಲಯ (ಇ.ಡಿ) ಹಣ ಅಕ್ರಮ ವರ್ಗಾವಣೆ ಪ್ರಕರಣ ದಾಖಲಿಸಿದೆ. 

ಮತಾಂತರ ಕಾರ್ಯಕ್ಕಾಗಿ ಈ ದಂಧೆಯಲ್ಲಿ ತೊಡಗಿರುವವರಿಗೆ ವಿದೇಶಗಳಿಂದ ಕೋಟ್ಯಂತರ ರೂಪಾಯಿ ಅಕ್ರಮವಾಗಿ ವರ್ಗಾವಣೆ ಆಗಿದೆ ಎಂದು ಇ.ಡಿ ಉಲ್ಲೇಖಿಸಿದೆ.

ಜಾರಿ ನಿರ್ದೇಶನಾಲಯದ ಲಖನೌ ಘಟಕವು ಹಣ ಅಕ್ರಮ ವರ್ಗಾವಣೆ ತಡೆ ಕಾಯ್ದೆಯಡಿ (ಪಿಎಂಎಲ್‌ಎ) ಮಂಗಳವಾರ ಸಂಜೆ ಪ್ರಕರಣ ದಾಖಲು ಮಾಡಿದೆ.

ADVERTISEMENT

ಮತಾಂತರ ದಂಧೆಯ ಸೂತ್ರಧಾರ ಜಮಾಲುದ್ದೀನ್‌ ಅಲಿಯಾಸ್‌ ಚಂಗೂರ್‌ ಬಾಬಾನ ಅಕ್ರಮ ಚಟುವಟಿಕೆಗಳು ಮತ್ತು ವಿದೇಶದಿಂದ ವರ್ಗಾವಣೆಯಾಗಿರುವ ಹಣಕಾಸಿನ ಕುರಿತು ಇ.ಡಿ ತನಿಖೆ ನಡೆಸಲಿದೆ ಎಂದು ಮೂಲಗಳು ತಿಳಿಸಿವೆ.    

ಮತಾಂತರ ಜಾಲ ನಡೆಸುತ್ತಿದ್ದಾರೆ ಎಂಬ ಆರೋಪದ ಮೇಲೆ ಚಂಗೂರ್‌ ಬಾಬಾನನ್ನು ಉತ್ತರ ಪ್ರದೇಶದ ಭಯೋತ್ಪಾದಕ ನಿಗ್ರಹ ಪಡೆ (ಎಟಿಎಸ್‌) ಈಗಾಗಲೇ ಬಂಧಿಸಿದೆ. ದೇಶದಲ್ಲಿ ಈ ಕಾರ್ಯಕ್ಕಾಗಿ ವಿದೇಶಗಳಿಂದ ₹100 ಕೋಟಿಗೂ ಹೆಚ್ಚು ಹಣಕಾಸು ಪಡೆದಿರುವ ಆರೋಪ ಅವರ ಮೇಲಿದೆ ಎಂದು ಮೂಲಗಳು ತಿಳಿಸಿವೆ. 

ಚಂಗೂರ್‌ ಬಾಬಾ ಅವರನ್ನು ಶೀಘ್ರದಲ್ಲಿಯೇ ಜಾರಿ ನಿರ್ದೇಶನಾಲಯ ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ ಎಂದೂ ಮೂಲಗಳು ಹೇಳಿವೆ. 

ಈ ಜಾಲದಲ್ಲಿ 18 ಜನರು ಸಕ್ರಿಯವಾಗಿದ್ದು, ಆ ಪೈಕಿ ನಾಲ್ವರನ್ನು ಬಂಧಿಸಲಾಗಿದೆ. ಉಳಿದವರ ಬಂಧನಕ್ಕೆ ಶೋಧ ನಡೆಯುತ್ತಿದೆ. ಈ ಜಾಲವು ಉತ್ತರ ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದೆ ಎಂದು ಎಟಿಎಸ್‌ ಮೂಲಗಳು ತಿಳಿಸಿವೆ. 

ಜಲಾಲುದ್ದೀನ್‌ ಅವರ ಗುಂಪು ಸಮಾಜ ವಿರೋಧಿ ಅಷ್ಟೇ ಅಲ್ಲ ರಾಷ್ಟ್ರ ವಿರೋಧಿಯೂ ಆಗಿದೆ. ಈ ಜಾಲದಲ್ಲಿ ಇರುವವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಮಂಗಳವಾರ ಹೇಳಿದ್ದರು. ಇದರ ಬೆನ್ನಲ್ಲೇ ಬಲರಾಂಪುರದ ಉತ್ರೌಲಾದಲ್ಲಿರುವ ಜಲಾಲುದ್ದೀನ್‌ ಅವರ ಮನೆಯನ್ನು ಜಿಲ್ಲಾಡಳಿತ ಬುಲ್ಡೋಜರ್‌ಗಳನ್ನು ಬಳಸಿ ನೆಲಸಮಗೊಳಿಸಿತ್ತು. 

ಚಂಗೂರ್‌ ಬಾಬಾ ಪ್ರಕರಣ: ಒತ್ತುವರಿ ತೆರವು

ಬಾಲರಾಂಪುರ/ಯುಪಿ: ಅಕ್ರಮ ಮತಾಂತರ ದಂಧೆಯ ಸೂತ್ರಧಾರ ಜಲಾಲುದ್ದೀನ್‌ ಅಲಿಯಾಸ್‌ ಚಂಗೂರ್‌ ಬಾಬಾ, ಇಲ್ಲಿನ ಮಧ್ಯಾ‍ಪುರ ಗ್ರಾಮದಲ್ಲಿ ಒತ್ತುವರಿ ಮಾಡಿಕೊಂಡಿದ್ದ ಸರ್ಕಾರಿ ಜಮೀನನ್ನು ಬಾಲರಾಂಪುರ ಜಿಲ್ಲಾಡಳಿತ ಬುಧವಾರ ತೆರವುಗೊಳಿಸಿದೆ. 

‘ಸರ್ಕಾರಿ ಜಮೀನಿನಲ್ಲಿ ಚಂಗೂರ್‌ ಬಾಬಾ ಅಕ್ರಮವಾಗಿ ನಿರ್ಮಿಸಿಕೊಂಡಿದ್ದ ಕಟ್ಟಡಗಳನ್ನು 8 ಬುಲ್ಡೋಜರ್‌ ಬಳಸಿ ಧ್ವಂಸಗೊಳಿಸ‌ಲಾಗಿದ್ದು, ಒತ್ತುವರಿ ತೆರವು ಮಾಡಲಾಗಿದೆ’ ಎಂದು ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ವಿಶಾಲ್‌ ಪಾಂಡೆ ತಿಳಿಸಿದ್ದಾರೆ. 

‘ಜಲಾಲುದ್ದೀನ್‌ ಕೃತ್ಯಗಳು ಸಮಾಜ ವಿರೋಧಿ ಮಾತ್ರವಲ್ಲ, ಅವು ದೇಶ ವಿರೋಧಿಯೂ ಆಗಿವೆ’ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. 

ಜಲಾಲುದ್ದೀನ್‌ ಅಲಿಯಾಸ್‌ ಚಂಗೂರ್‌ ಬಾಬಾನನ್ನು ಉತ್ತರ ಪ್ರದೇಶ ಭಯೋತ್ಪಾದನಾ ನಿಗ್ರಹ ದಳ ಜುಲೈ 5ರಂದು ಬಂಧಿಸಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.