ADVERTISEMENT

ತಮಿಳುನಾಡು ಗಡಿಯ ಜನವಸತಿ ಪ್ರದೇಶಕ್ಕೆ ನುಗ್ಗಿದ ಕೇರಳದಿಂದ ಸ್ಥಳಾಂತರಗೊಂಡ ಕಾಡಾನೆ

ಐಎಎನ್ಎಸ್
Published 6 ಮೇ 2023, 10:53 IST
Last Updated 6 ಮೇ 2023, 10:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಚೆನ್ನೈ: ಹೈಕೋರ್ಟ್ ಆದೇಶದ ಪ್ರಕಾರ ಕೇರಳದ ಇಡುಕ್ಕಿ ಜಿಲ್ಲೆಯಿಂದ ಸ್ಥಳಾಂತರಗೊಂಡ 'ಅರಿಕೊಂಬನ್' ಎಂಬ ಕಾಡಾನೆ ತಮಿಳುನಾಡು ಗಡಿ ಪ್ರದೇಶದಲ್ಲಿ ಜನವಸತಿ ಪ್ರದೇಶಕ್ಕೆ ನುಗ್ಗಿದ್ದು, ಅಲ್ಲಿನ ನಿವಾಸಿಗಳಲ್ಲಿ ಆತಂಕ ಉಂಟು ಮಾಡಿದೆ.

ಬಳಿಕ ಅರಣ್ಯ ಸಿಬ್ಬಂದಿ ಹಾಗೂ ಸ್ಥಳೀಯರು ಸೇರಿ ಆನೆಯನ್ನು ಮರಳಿ ಕಾಡಿನತ್ತ ಅಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.

ತಮಿಳುನಾಡು ಅರಣ್ಯ ಇಲಾಖೆ ಅಧಿಕಾರಿಗಳ ಪ್ರಕಾರ, ಕಾಡಾನೆಯು ಮೇಘಮಲ, ಇರವಿಂಗಲರ್ ಮತ್ತು ಮನಮಲರ್ ಜನವಸತಿ ಪ್ರದೇಶಗಳಿಗೆ ನುಗ್ಗಲು ಯತ್ನಿಸಿದೆ.

ADVERTISEMENT

ಕಾಡಾನೆಯನ್ನು ಇಡುಕ್ಕಿ ಜಿಲ್ಲೆಯ ಚಿನ್ನಕನಾಲ್‌ನಿಂದ ಸುಮಾರು 110 ಕಿ.ಮೀ. ದೂರದಲ್ಲಿರುವ ಪೆರಿಯಾರ್ ಹುಲಿ ರಕ್ಷಿತಾರಣ್ಯದ (ಪಿಟಿಆರ್) ಮಂಗಳಾದೇವಿ ಅರಣ್ಯಕ್ಕೆ ಸ್ಥಳಾಂತರ ಮಾಡಲಾಗಿತ್ತು.

ಚಿನ್ನಕನಾಲ್‌ನಲ್ಲಿ ಆರು ಮಂದಿಯ ಸಾವಿಗೆ ಕಾರಣವಾಗಿದ್ದ ಕಾಡಾನೆ, 300ಕ್ಕೂ ಹೆಚ್ಚು ಮನೆಗಳನ್ನು ಧ್ವಂಸಗೊಳಿಸಿತ್ತು.

ಏಪ್ರಿಲ್ 29ರಂದು ಸತತ ಪ್ರಯತ್ನದ ಬಳಿಕ ಅರಿವಳಿಕೆ ಮದ್ದು ನೀಡಿ ತರಬೇತಿ ಪಡೆದ ಇತರೆ ಆನೆಗಳ ಸಹಾಯದಿಂದ ಕೇರಳದ ಅರಣ್ಯ ಸಿಬ್ಬಂದಿ ಕಾಡಾನೆಯನ್ನು ಸ್ಥಳಾಂತರ ಮಾಡಿದ್ದರು.

ಬಳಿಕ ರೇಡಿಯೊ ಕಾಲರ್ ಸಹಾಯದಿಂದ ಕಾಡಾನೆಯ ಚಟುವಟಿಕೆಗಳ ಮೇಲೆ ನಿಗಾ ಇರಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.