ಪ್ರಶಾಂತ್ ಕೊರಟಕರ್
ಪುಣೆ: ಛತ್ರಪತಿ ಶಿವಾಜಿ ಮಹಾರಾಜ ಮತ್ತು ಅವರ ಪುತ್ರ ಛತ್ರಪತಿ ಸಂಭಾಜಿ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಪತ್ರಕರ್ತ ಪ್ರಶಾಂತ್ ಕೊರಟಕರ್ ಅವರನ್ನು ಕೊಲ್ಹಾಪುರದ ಸೆಷನ್ಸ್ ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ನಾಗ್ಪುರ ನಿವಾಸಿ ಕೊರಟಕರ್ ಅವರನ್ನು ಮಾರ್ಚ್ 24 ರಂದು ಬಂಧಿಸಲಾಗಿತ್ತು.
ಪೊಲೀಸ್ ಕಸ್ಟಡಿ ಅವಧಿ ಮುಗಿದ ಹಿನ್ನೆಲೆ ಭಾನುವಾರ ಅವರನ್ನು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ನ್ಯಾಯಾಲಯವು ಅವರನ್ನು 14 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.
ಸುರಕ್ಷತಾ ಕಾರಣಗಳಿಗಾಗಿ ಅವರನ್ನು ಕೊಲ್ಹಾಪುರದ ಕಲಂಬಾ ಜೈಲಿನಲ್ಲಿ ಪ್ರತ್ಯೇಕ ಸೆಲ್‌ನಲ್ಲಿ ಇರಿಸಲಾಗುವುದು ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಕೊರಟಕರ್ ಜೊತೆಗಿನ ಸಂಭಾಷಣೆಯನ್ನು ಕೊಲ್ಹಾಪುರ ಮೂಲದ ಇತಿಹಾಸಕಾರ ಇಂದ್ರಜೀತ್ ಸಾವಂತ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಸಂಭಾಷಣೆಯಯಲ್ಲಿ ಕೊರಟಕರ್ ಅವರು ಆಕ್ಷೇಪಾರ್ಹ ಹೇಳಿಕೆಗಳನ್ನು ನೀಡಿದ್ದಾರೆ ಎಂದು ಆರೋಪಿಸಲಾಗಿದೆ. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.
ಗುಂಪುಗಳ ನಡುವೆ ದ್ವೇಷಭಾವನೆ ಹರಡಿದ ಆರೋಪದಡಿ ಕೊರಟಕರ್ ವಿರುದ್ಧ ಫೆ.26ರಂದು ಪ್ರಕರಣ ದಾಖಲಾಗಿತ್ತು. ಮಾರ್ಚ್ 24ರಂದು ಅವರನ್ನು ತೆಲಂಗಾಣದಲ್ಲಿ ಬಂಧಿಸಲಾಗಿತ್ತು.
ನನ್ನ ಸಂಭಾಷಣೆಯನ್ನು ತಿರುಚಿಲಾಗಿದೆ. ನಾನು ಈ ಬಗ್ಗೆ ಸಾರ್ವಜನಿಕವಾಗಿ ಕ್ಷಮೆ ಯಾಚಿಸಿದ್ದೇನೆ ಎಂದು ಕೊರಟಕರ್ ಅವರು ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದರು. ಆದರೆ ಅವರ ಅರ್ಜಿಯನ್ನು ಕೊಲ್ಹಾಪುರದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶರು ಮಾರ್ಚ್ 18ರಂದು ವಜಾಗೊಳಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.