ADVERTISEMENT

ಔಷಧ ಕಂಪನಿ ಅಧಿಕಾರಿ ವಿಚಾರಣೆಗೆ ಬಿಜೆಪಿ ಆಕ್ಷೇಪ: ಶಿವಸೇನಾ ಖಂಡನೆ

ಪಿಟಿಐ
Published 19 ಏಪ್ರಿಲ್ 2021, 8:12 IST
Last Updated 19 ಏಪ್ರಿಲ್ 2021, 8:12 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮುಂಬೈ: ರೆಮ್‌ಡಿಸಿವಿರ್ ಇಂಜೆಕ್ಷನ್‌ಗಳನ್ನು ಅಕ್ರಮವಾಗಿ ದಾಸ್ತಾನು ಮಾಡಿರುವ ಆರೋಪದ ಮೇಲೆ ಔಷಧ ಕಂಪನಿಯ ಉನ್ನತಮಟ್ಟದ ಅಧಿಕಾರಿಯನ್ನು ವಿಚಾರಣೆಗೊಳಪಡಿಸಿಸುವುದಕ್ಕೆ ಆಕ್ಷೇಪಿಸುತ್ತಿರುವ ಬಿಜೆಪಿ ನಾಯಕರ ವಿರುದ್ಧ ಶಿವಸೇನಾ ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯದ ಕಾನೂನು ಮತ್ತು ಆರೋಗ್ಯ ಸ್ಥಿತಿಗತಿಯನ್ನು ಹಾಳುಗೆಡಹುವ ಪಿತೂರಿಯನ್ನು ಇವರು ನಡೆಸಿದ್ದಾರೆಯೇ ಎಂಬ ಅಚ್ಚರಿ ವ್ಯಕ್ತಪಡಿಸಿದೆ.

ಈ ಕುರಿತು ಪಕ್ಷದ ಮುಖವಾಣಿ ‘ಸಾಮ್ನಾ’ದ ಸಂಪಾದಕೀಯದಲ್ಲಿ ಬಿಜೆಪಿ ನಾಯಕರಾದ ದೇವೇಂದ್ರ ಫಡಣವೀಸ್ ಮತ್ತು ಪ್ರವೀಣ್ ದಾರೇಕರ್ ವಿರುದ್ಧ ವಾಗ್ದಾಳಿ ನಡೆಸಿರುವ ಶಿವಸೇನಾ, ‘ಕೋವಿಡ್‌ ಸ್ಥಿತಿ ನಿರ್ವಹಣೆಯಲ್ಲಿ ಮಹಾರಾಷ್ಟ್ರ ಸರ್ಕಾರ ಪೂರ್ಣ ಸೋಲಬೇಕೆಂಬುದು ಬಿಜೆಪಿ ಕಾರ್ಯಸೂಚಿಯಾಗಿದೆ. ಆ ನಿಟ್ಟಿನಲ್ಲಿ ಕೇಂದ್ರದ ನೆರವಿನೊಂದಿಗೆ ಸತತವಾಗಿ ಪ್ರಯತ್ನ ಮಾಡುತ್ತಿದೆ‘ ಎಂದು ಆರೋಪಿಸಿದೆ.

‘ಜನರ ಜೀವ ಉಳಿಸುವ ವಿಚಾರದಲ್ಲಿ ಮಹಾರಾಷ್ಟ್ರ ಸರ್ಕಾರ ಮತ್ತು ಪ್ರತಿಪಕ್ಷಗಳು ಒಗ್ಗೂಡಿ ಕೆಲಸ ಮಾಡಬೇಕು. ಔಷಧಿಯ ಕೊರತೆಯಿಂದ ಸಾಯುವವರ ಸಂಖ್ಯೆ ಹೆಚ್ಚಿದ್ದು, ಔಷಧಕ್ಕೆ ಬೇಡಿಕೆ ಹೆಚ್ಚುತ್ತಿರುವ ಸಂದರ್ಭದಲ್ಲಿ ಯಾರೂ ರಾಜಕೀಯ ಲಾಭಪಡೆಯುವ ಬಗ್ಗೆ ಯೋಚಿಸಬಾರದು‘ ಎಂದು ಸಂಪಾದಕೀಯದಲ್ಲಿ ಉಲ್ಲೇಖಿಸಲಾಗಿದೆ.

ADVERTISEMENT

ರೆಮ್‌ಡಿಸಿವಿರ್‌ ಇಂಜೆಕ್ಷನ್‌ಗಳ ಮೇಲಿನ ರಫ್ತು ನಿಷೇಧಿಸಿರುವ ನಡುವೆಯೂ ಆ ಚುಚ್ಚುಮದ್ದಿನ ಸಾವಿರಾರು ಬಾಟಲುಗಳನ್ನು ದೇಶದಿಂದ ಹೊರಗೆ ಸಾಗಿಸುತ್ತಿದ್ದಾರೆಂಬ ಮಾಹಿತಿಯ ಹಿನ್ನೆಲೆಯಲ್ಲಿ ಮುಂಬೈ ಪೊಲೀಸರು ಶನಿವಾರ ಫಾರ್ಮಾ ಕಂಪನಿಯೊಂದರ ನಿರ್ದೇಶಕರನ್ನು ವಶಕ್ಕೆ ಪಡೆದು ಪ್ರಶ್ನಿಸಿದ್ದರು. ಈ ಸುದ್ದಿ ತಿಳಿದ ಕೂಡಲೇ ಫಡಣವೀಸ್ ಮತ್ತು ದಾರೇಕರ್ ಅವರು ಆ ಪೊಲೀಸ್ ಠಾಣೆಗೆ ಧಾವಿಸಿದ್ದರು.‌

‘ರಾಜ್ಯದಲ್ಲಿ ರೆಮ್‌ಡಿಸಿವಿರ್ ಕೊರತೆಯಾಗಿದ್ದು, ಬಿಜೆಪಿ ಫಾರ್ಮಾ ಕಂಪನಿಗಳನ್ನು ಭೇಟಿ ಮಾಡಿ, ಮಹಾರಾಷ್ಟ್ರಕ್ಕೆ ರೆಮ್‌ಡಿಸಿವಿರ್ ಔಷಧಗಳನ್ನು ತರಲು ಪ್ರಾಮಾಣಿಕ ಪ್ರಯತ್ನ ಮಾಡುತ್ತಿದೆ’ ಎಂದು ಫಡಣವೀಸ್‌ ಹೇಳಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.