ADVERTISEMENT

ಮುಸ್ಲಿಮರಿಗೆ ಹಿಂಸೆ ನೀಡಿದ ಬಿಜೆಪಿ ನಾಯಕರನ್ನು ವಜಾಗೊಳಿಸಿ – ದಿಗ್ವಿಜಯ್‌ ಸಿಂಗ್‌

ಮೋಹನ್‌ ಭಾಗವತ್‌ ಹೇಳಿಕೆಗೆ ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಪ್ರತಿಕ್ರಿಯೆ

ಪಿಟಿಐ
Published 5 ಜುಲೈ 2021, 7:54 IST
Last Updated 5 ಜುಲೈ 2021, 7:54 IST
ದಿಗ್ವಿಜಯ್‌ ಸಿಂಗ್‌
ದಿಗ್ವಿಜಯ್‌ ಸಿಂಗ್‌   

ನವದೆಹಲಿ: ‘ಅಮಾಯಕ ಮುಸ್ಲಿಮರಿಗೆ ಹಿಂಸೆ ನೀಡಿರುವ ಬಿಜೆಪಿ ನಾಯಕರನ್ನು ಅವರ ಹುದ್ದೆಗಳಿಂದ ತೆಗೆದುಹಾಕಬೇಕು. ಇದು ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರಿಂದ ಆರಂಭವಾಗಬೇಕು’ ಎಂದು ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ದಿಗ್ವಿಜಯ್‌ ಸಿಂಗ್‌ ಒತ್ತಾಯಿಸಿದ್ದಾರೆ.

ಘಜಿಯಾಬಾದ್‌ದಲ್ಲಿ ಭಾನುವಾರ ಮುಸ್ಲಿಂ ರಾಷ್ಟ್ರೀಯ ಮಂಚ್‌ ಆಯೋಜಿಸಿದ್ದ ‘ಹಿಂದೂಸ್ತಾನ ಫಸ್ಟ್‌, ಹಿಂದೂಸ್ತಾನಿ ಬೆಸ್ಟ್‌’ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ಅವರು, ‘ಎಲ್ಲ ಭಾರತೀಯರ ಡಿಎನ್‌ಎ ಒಂದೇ’ ಎಂದು ಹೇಳಿಕೆ ನೀಡಿದ್ದರು. ಜತೆಗೆ, ‘ಗೋವು ಪವಿತ್ರ ಪ್ರಾಣಿ. ಆದರೆ, ಗುಂಪು ಹತ್ಯೆ ಮಾಡುವುದು ಹಿಂದುತ್ವಕ್ಕೆ ವಿರುದ್ಧವಾಗಿದೆ. ಕೆಲವು ಸಂದರ್ಭಗಳಲ್ಲಿ ಗುಂಪು ಹತ್ಯೆಯ ಸುಳ್ಳು ಪ್ರಕರಣಗಳನ್ನು ಕೆಲವರ ವಿರುದ್ಧ ದಾಖಲಿಸಲಾಗಿದೆ’ ಎಂದು ಹೇಳಿದ್ದರು.

ಭಾಗವತ್‌ ಅವರ ಹೇಳಿಕೆಗೆ ದಿಗ್ವಿಜಯ್‌ ಸಿಂಗ್‌ ಅವರು ಈ ಪ್ರತಿಕ್ರಿಯೆ ನೀಡಿದ್ದಾರೆ.

ADVERTISEMENT

‘ಭಾಗವತ್‌ ಅವರು ತಮ್ಮ ಹೇಳಿಕೆಗೆ ಬದ್ಧರಾಗಿ ಬಿಜೆಪಿ ನಾಯಕರಿಗೆ ನಿರ್ದೇಶನ ನೀಡಬೇಕು. ಅಮಾಯಕ ಮುಸ್ಲಿಮರಿಗೆ ಹಿಂಸೆ ನೀಡಿರುವ ಬಿಜೆಪಿ ನಾಯಕರನ್ನು ಅವರ ಹುದ್ದೆಗಳಿಂದ ಕೆಳಗಿಳಿಸಬೇಕು. ಆದರೆ, ಭಾಗವತ್‌ ಅವರು ನಿರ್ದೇಶನ ನೀಡುವುದಿಲ್ಲ. ಅವರ ಮಾತಿಗೂ ಮತ್ತು ಕೃತಿಗೂ ಅಂತರವಿದೆ’ ಎಂದು ಹೇಳಿದ್ದಾರೆ.

‘ಮೋಹನ್‌ ಭಾಗವತ್‌ ಜೀ, ನಿಮ್ಮ ಅಭಿಪ್ರಾಯಗಳನ್ನು ಅನುಯಾಯಿಗಳಿಗೂ ತಿಳಿಸುತ್ತೀರಾ? ವಿಶ್ವ ಹಿಂದೂ ಪರಿಷತ್‌, ಬಜರಂಗದಳ ಕಾರ್ಯಕರ್ತರಿಗೂ ಹೇಳುವಿರಾ? ಮೋದಿ ಮತ್ತು ಶಾ ಹಾಗೂ ಬಿಜೆಪಿ ಮುಖ್ಯಮಂತ್ರಿಗಳಿಗೂ ತಿಳಿಸುತ್ತೀರಾ’ ಎಂದು ಪ್ರಶ್ನಿಸಿದ್ದಾರೆ.

‘ಮೋಹನ್‌ ಭಾಗವತ್‌ ಜೀ, ನಿಮ್ಮ ಅನುಯಾಯಿಗಳಿಗೆ, ನಿಮ್ಮಲ್ಲಿರುವ ಚಿಂತನೆಗಳನ್ನು ಪಾಲಿಸುವಂತೆ ಕಡ್ಡಾಯಗೊಳಿಸಿದರೆ ನಾನು ನಿಮ್ಮ ಅನುಯಾಯಿಯಾಗುತ್ತೇನೆ ಮತ್ತು ಅಭಿಮಾನಿಯಾಗುತ್ತೇನೆ’ ಎಂದು ಹೇಳಿದ್ದಾರೆ.

‘ಹಿಂದೂಗಳು ಮತ್ತು ಮುಸ್ಲಿಮರ ನಡುವೆ ಆರ್‌ಎಸ್‌ಎಸ್‌ ದ್ವೇಷವನ್ನು ಬಿತ್ತಿದೆ. ದ್ವೇಷದ ಬೀಜವನ್ನು ಈಗ ತೆಗೆದುಹಾಕುವುದು ಸುಲಭವಲ್ಲ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.