ADVERTISEMENT

ತಮಿಳಿನ ಖ್ಯಾತ ಬರಹಗಾರ ಕೆ. ರಾಜನಾರಾಯಣ್‌ ನಿಧನ

ಪಿಟಿಐ
Published 18 ಮೇ 2021, 9:35 IST
Last Updated 18 ಮೇ 2021, 9:35 IST
ಕೆ. ರಾಜನಾರಾಯಣ್‌       -ಟ್ವಿಟರ್ ಚಿತ್ರ 
ಕೆ. ರಾಜನಾರಾಯಣ್‌       -ಟ್ವಿಟರ್ ಚಿತ್ರ    

ಪುದುಚೇರಿ: ‘ತಮಿಳಿನ ಖ್ಯಾತ ಬರಹಗಾರ, ಕಾದಂಬರಿಕಾರ ಮತ್ತು ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕೆ. ರಾಜನಾರಾಯಣ್‌ ಅವರು(98) ಸೋಮವಾರ ರಾತ್ರಿ ನಿಧನರಾದರು’ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಅವರಿಗೆ ಇಬ್ಬರು ಪುತ್ರರು ಇದ್ದಾರೆ. ಕಿ ರಾ ಎಂದು ಜನಪ್ರಿಯತೆ ಪಡೆದ ಕೆ.ರಾಜನಾರಾಯಣ್‌ ಅವರು ವಯೋಸಹಜ ಕಾಯಿಲೆಯಿಂದಾಗಿ ಸೋಮವಾರ ರಾತ್ರಿ ಸರ್ಕಾರಿ ನಿವಾಸದಲ್ಲಿ ಕೊನೆ ಉಸಿರೆಳೆದರು.

ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಡಾ. ತಮಿಳಿಸೈ ಸೌಂದರರಾಜನ್ ಅವರು ಮಂಗಳವಾರ ಕಿ ರಾ ಅವರ ನಿವಾಸಕ್ಕೆ ಭೇಟಿ ನೀಡಿ, ಅಂತಿಮ ನಮನ ಸಲ್ಲಿಸಿದರು.

ADVERTISEMENT

ಈ ವೇಳೆ ಮಾಧ್ಯಮದವರಲ್ಲಿ ಮಾತನಾಡಿದ ಅವರು,‘ರಾಜನಾರಾಯಣ್‌ ಅವರ ಮನೆಯನ್ನು ಸ್ಮಾರಕ ಗ್ರಂಥಾಲಯವನ್ನಾಗಿ ಪರಿವರ್ತಿಸುವಂತೆ ಅನೇಕ ತಮಿಳು ಬರಹಗಾರರು ಮನವಿ ಸಲ್ಲಿಸಿದ್ದಾರೆ. ಈ ಬಗ್ಗೆ ಚಿಂತನೆ ನಡೆಸಲಾಗುವುದು’ ಎಂದು ಅವರು ತಿಳಿಸಿದರು.

ಕೆ.ರಾಜನಾರಾಯಣ್‌ ಅವರ ನಿಧನದ ಬಗ್ಗೆ ಸಂತಾಪ ಸೂಚಿಸಿರುವ ಪುದುಚೇರಿ ಮುಖ್ಯಮಂತ್ರಿ ಎನ್‌. ರಂಗಸ್ವಾಮಿ ಅವರು,‘ ಸಾಹಿತ್ಯ ಲೋಕವು ಒಬ್ಬ ಪ್ರಸಿದ್ಧ ಚಿಂತಕ, ಬರಹಗಾರರನ್ನು ಕಳೆದುಕೊಂಡಿದೆ’ ಎಂದಿದ್ದಾರೆ. ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್‌ ಅವರು ಕೂಡ ಸಂತಾಪ ಸೂಚಿಸಿದ್ದಾರೆ.

1980ರ ದಶಕದಲ್ಲಿ ಪುದುಚೇರಿ ವಿಶ್ವವಿದ್ಯಾಲಯದ ಜಾನಪದ ವಿಭಾಗದ ಪ್ರಾಧ್ಯಾಪಕರಾಗಿ ರಾಜನಾರಾಯಣ್‌ ಅವರು ಸೇವೆ ಸಲ್ಲಿಸಿದ್ದರು.ಅವರು ಸಣ್ಣ ಕಥೆಗಳು, ಕಾದಂಬರಿಗಳು, ಜಾನಪದ ಮತ್ತು ಪ್ರಬಂಧಗಳಿಗೆ ಪ್ರಖ್ಯಾತಿ ಪಡೆದಿದ್ದರು. 1991ರಲ್ಲಿ ‘ಗೋಪಲ್ಲಪುರತು ಮಕ್ಕಳ್‌’ ಕಾದಂಬರಿಗಾಗಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಪಡೆದರು.

ತಮಿಳುನಾಡಿನ ದಕ್ಷಿಣ ಭಾಗದ ಒಣ ಮತ್ತು ಬಿರುಬಿಸಿಲಿನ ಪ್ರದೇಶ ‘ಕರಿಸಾಲ್‌ ಭೂಮಿ’ಯ ಜನರು ಮತ್ತು ಅಲ್ಲಿನ ಸಂಸ್ಕೃತಿ ಬಗ್ಗೆ ಕೆ.ರಾಜನಾರಾಯಣ್‌ ಅವರು ಬಿಂಬಿಸಿದ ಚಿತ್ರಣವು ಅತಿ ಹೆಚ್ಚು ಜನಪ್ರಿಯತೆಯನ್ನು ಪಡೆದಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.