ADVERTISEMENT

ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಗಮನ ಸೆಳೆಯಲಿದೆ ರಾಮ ದೇವಾಲಯದ ಪ್ರತಿಕೃತಿ

ಏಜೆನ್ಸೀಸ್
Published 23 ಜನವರಿ 2021, 5:53 IST
Last Updated 23 ಜನವರಿ 2021, 5:53 IST
ರಾಮಮಂದಿರ
ರಾಮಮಂದಿರ   

ನವದೆಹಲಿ: ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಣವಾಗುತ್ತಿರುವ ಈ ಸಂದರ್ಭದಲ್ಲಿ ಈ ವರ್ಷದ ಗಣರಾಜ್ಯೋತ್ಸವ ಆಚರಣೆಯನ್ನು ವಿಶಿಷ್ಟವಾಗಿಸಲು ಉತ್ತರ ಪ್ರದೇಶ ಸರ್ಕಾರ ನಿರ್ಧರಿಸಿದೆ.

ಜನವರಿ 26 ರಂದು ದೆಹಲಿಯಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಪ್ರಾಚೀನ ನಗರ ಅಯೋಧ್ಯೆಯ ಪರಂಪರೆ, ರಾಮ ದೇವಾಲಯದ ಪ್ರತಿರೂಪ, 'ದೀಪೋತ್ಸವ'ದ ದರ್ಶನ ಮತ್ತು ರಾಮಾಯಣ ಮಹಾಕಾವ್ಯದ ವಿವಿಧ ಕಥೆಗಳನ್ನು ಬಿಂಬಿಸುವ ಸ್ತಬ್ಧಚಿತ್ರವನ್ನು ಪ್ರದರ್ಶಿಸಲು ಉತ್ತರ ಪ್ರದೇಶ ಸರ್ಕಾರ ಸಿದ್ಧತೆ ನಡೆಸಿದೆ.

ಸ್ತಬ್ಧಚಿತ್ರದ ಮುಂಭಾಗದಲ್ಲಿ ಮಹರ್ಷಿ ವಾಲ್ಮೀಕಿ ಕುಳಿತಿರುವ ಪ್ರತಿಕೃತಿ ಇರಲಿದ್ದು, ಹಿಂಭಾಗದಲ್ಲಿ ದೇವಾಲಯದ ಪ್ರತಿಕೃತಿ ಇರಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

"ಅಯೋಧ್ಯೆ ನಮಗೆ ಧಾರ್ಮಿಕ ಪವಿತ್ರ ಸ್ಥಳವಾಗಿದೆ. ರಾಮ ದೇವಾಲಯದ ವಿಷಯವು ಒಂದು ಭಾವನಾತ್ಮಕ ಸಂಗತಿಯಾಗಿದೆ. ದೇಶದಾದ್ಯಂತ ಅಸಂಖ್ಯಾತ ಜನರಿಂದ ಪೂಜಿಸಲ್ಪಡುವ ಅಯೋಧ್ಯೆ ನಗರದ ಕುರಿತಾದ ನಮ್ಮ ಸ್ತಬ್ಧ ಚಿತ್ರವು ಪ್ರಾಚೀನ ಪರಂಪರೆಯನ್ನು ಬಿಂಬಿಸುತ್ತದೆ," ಎಂದು ಉತ್ತರ ಪ್ರದೇಶದ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಇಬ್ಬರು ನೃತ್ಯಗಾರ್ತಿಯರು ಸೇರಿ ಕಲಾವಿದರ ಗುಂಪು ಸ್ತಬ್ಧಚಿತ್ರದ ಭಾಗವಾಗಲಿದ್ದು, ಒಬ್ಬ ಕಲಾವಿದ ಭಗವಾನ್ ರಾಮನ ವೇಷ ಧರಿಸಿರುತ್ತಾರೆ.

ನವದೆಹಲಿಯ ರಾಜಪಥದಲ್ಲಿ ನಡೆಯಲಿರುವ ಗಣರಾಜ್ಯೋತ್ಸವದ ಪಥಸಂಚಲನದಲ್ಲಿ 17 ರಾಜ್ಯಗಳ ಸಂಸ್ಕೃತಿ, ಪರಂಪರೆ ಬಿಂಬಿಸುವ ಸ್ತಬ್ಧಚಿತ್ರಗಳು ಗಮನ ಸೆಳೆಯಲಿವೆ.
‌‌‌‌‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.