ADVERTISEMENT

ಫೆ 3ರಂದು ಲೋಕಸಭೆಯಲ್ಲಿ ವಕ್ಫ್ (ತಿದ್ದುಪಡಿ) ಮಸೂದೆ-2024 ಮಂಡನೆ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಫೆಬ್ರುವರಿ 2025, 3:07 IST
Last Updated 2 ಫೆಬ್ರುವರಿ 2025, 3:07 IST
ಸಂಸತ್‌ ಭವನ
ಸಂಸತ್‌ ಭವನ   

ನವದೆಹಲಿ: ವಕ್ಫ್ (ತಿದ್ದುಪಡಿ) ಮಸೂದೆ–2024ರ ಜಂಟಿ ಸಮಿತಿಯ ವರದಿಯನ್ನು ಫೆಬ್ರವರಿ 3ರಂದು ಲೋಕಸಭೆಯಲ್ಲಿ ಮಂಡಿಸಲು ನಿರ್ಧರಿಸಲಾಗಿದೆ.

ಈ ಬಗ್ಗೆ ಸುದ್ದಿಸಂಸ್ಥೆ 'ಎಎನ್‌ಐ' ವರದಿ ಮಾಡಿದೆ.

ಬಿಜೆಪಿ ಸಂಸದ ಸಂಜಯ್ ಜೈಸ್ವಾಲ್ ಹಾಗೂ ವಕ್ಫ್ (ತಿದ್ದುಪಡಿ) ಮಸೂದೆಯ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ಅಧ್ಯಕ್ಷ ಜಗದಾಂಬಿಕಾ ಪಾಲ್ ವರದಿಯನ್ನು ಮಂಡಿಸಲಿದ್ದಾರೆ.

ADVERTISEMENT

ವಿಪಕ್ಷ ಸದಸ್ಯರಿಂದ ಭಿನ್ನಮತದ ಟಿಪ್ಪಣಿ

ವಕ್ಫ್ (ತಿದ್ದುಪಡಿ) ಮಸೂದೆ ಪರಿಶೀಲಿಸುತ್ತಿರುವ ಸಂಸತ್ ಜಂಟಿ ಸಮಿತಿಯು(ಜೆಪಿಸಿ) ಬುಧವಾರ ತನ್ನ ಕರಡು ವರದಿಯನ್ನು ಬಹುಮತದಿಂದ ಅಂಗೀಕರಿಸಿದೆ. ಆದರೆ, ಇದು ವಕ್ಫ್‌ ಮಂಡಳಿಯನ್ನು ನಾಶಪಡಿಸುವ ಕಸರತ್ತು ಎಂದು ವಿಪಕ್ಷಗಳು ಕಿಡಿಕಾರಿವೆ.

ಬಿಜೆಪಿ ಸದಸ್ಯ ಜಗದಾಂಬಿಕ ಪಾಲ್ ಅವರ ಅಧ್ಯಕ್ಷತೆಯ ಜೆಪಿಸಿ 15-11 ಬಹುಮತದಿಂದ ಕರಡು ಶಾಸನದ ವರದಿಯನ್ನು ಅಂಗೀಕರಿಸಿತ್ತು. ಈ ವರದಿಗೆ ವಿಪಕ್ಷ ಸದಸ್ಯರು ತೀವ್ರ ವಿರೋಧ ವ್ಯಕ್ತಪಡಿಸಿ, ತಮ್ಮ ಭಿನ್ನಮತವನ್ನು ದಾಖಲಿಸಿದ್ದರು.

ಸೋಮವಾರ ನಡೆದ ಸಭೆಯಲ್ಲಿ, ಸಮಿತಿಯು ಮಸೂದೆಗೆ 14 ತಿದ್ದುಪಡಿಗಳನ್ನು ಅಂಗೀಕರಿಸಿದೆ. ಈ ಎಲ್ಲ ತಿದ್ದುಪಡಿಗಳನ್ನು ಬಿಜೆಪಿ ಸದಸ್ಯರು ಪ್ರಸ್ತಾಪಿಸಿದ್ದರು. ಕಾಂಗ್ರೆಸ್, ಡಿಎಂಕೆ, ಟಿಎಂಸಿ, ಎಎಪಿ, ಶಿವ ಸೇನಾ-ಯುಬಿಟಿ ಮತ್ತು ಎಐಎಂಐಎಂ ಸೇರಿದಂತೆ ವಿರೋಧ ಪಕ್ಷಗಳ ಸದಸ್ಯರು ಸೂಚಿಸಿದ ಎಲ್ಲ ಶಿಫಾರಸುಗಳನ್ನು ಸಮಿತಿ ತಿರಸ್ಕರಿಸಿದೆ.

ಕಳೆದ ವರ್ಷದ ಆಗಸ್ಟ್‌ನಲ್ಲಿ ಲೋಕಸಭೆಯಲ್ಲಿ ಮಂಡಿಸಿದ ಮಸೂದೆಯು ವಕ್ಫ್ ಆಸ್ತಿಗಳ ನಿರ್ವಹಣೆಯಲ್ಲಿ ಆಧುನಿಕತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯನ್ನು ತರಲಿದೆ ಎಂದು ಆಡಳಿತರೂಢ ಬಿಜೆಪಿ ಸದಸ್ಯರು ಪ್ರತಿಪಾದಿಸಿದ್ದಾರೆ. ಆದರೆ, ವಿಪಕ್ಷಗಳು ಇದನ್ನು ಮುಸ್ಲಿಂ ಸಮುದಾಯದ ಸಾಂವಿಧಾನಿಕ ಹಕ್ಕುಗಳ ಮೇಲಿನ ದಾಳಿ ಮತ್ತು ವಕ್ಫ್‌ ಮಂಡಳಿಗಳ ಕಾರ್ಯನಿರ್ವಹಣೆಯಲ್ಲಿನ ಹಸ್ತಕ್ಷೇಪ ಎಂದು ಹರಿಹಾಯ್ದಿವೆ.‌‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.