Republic Day 2025: ಕರ್ತವ್ಯಪಥದಲ್ಲಿ ಸಶಸ್ತ್ರ ಪಡೆಯಿಂದ ಶಕ್ತಿ ಪ್ರದರ್ಶನ
ಪ್ರಜಾವಾಣಿ ವೆಬ್ ಡೆಸ್ಕ್
Published 26 ಜನವರಿ 2025, 7:56 IST
Last Updated 26 ಜನವರಿ 2025, 7:56 IST
ದೇಶದೆಲ್ಲೆಡೆ 76ನೇ ಗಣರಾಜ್ಯೋತ್ಸವ ಸಂಭ್ರಮ, ಸಡಗರದಿಂದ ಆಚರಿಸಲಾಗುತ್ತಿದೆ. ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ವಜಾರೋಹಣ ನೆರವೇರಿಸಿದರು. ಬಳಿಕ ಕರ್ತವ್ಯಪಥದಲ್ಲಿ ಆಕರ್ಷಕ ಪಥಸಂಚಲನ ನಡೆಯಿತು. ಈ ವೇಳೆ ಸಶಸ್ತ್ರ ಪಡೆಗಳಿಂದ ಶಕ್ತಿ ಪ್ರದರ್ಶನ ನಡೆಯಿತು. ವಿವಿಧ ರಾಜ್ಯಗಳು ಸ್ತಬ್ಧಚಿತ್ರ ಪ್ರದರ್ಶಿಸಿತು. ರಾಜ್ಯದಲ್ಲೂ ಗಣರಾಜ್ಯೋತ್ಸವ ಸಂಭ್ರಮ ಮನೆ ಮಾಡಿದೆ. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯಪಾಲ ಥಾವರಚಂದ್ ಗೆಹಲೋತ್ ಧ್ವಜಾರೋಹಣ ನೆರವೇರಿಸಿದರು. ಬಳಿಕ ತೆರೆದ ವಾಹನದಲ್ಲಿ ಗೌರವ ವಂದನೆ ಸ್ವೀಕರಿಸಿದರು. ಆಯಾ ಜಿಲ್ಲಾ ಕೇಂದ್ರಗಳಲ್ಲಿ ಆಕರ್ಷಕ ಪಥಸಂಚಲನದೊಂದಿಗೆ ಕಾರ್ಯಕ್ರಮ ನೆರವೇರಿತು.
ರಾಷ್ಟ್ರ ರಾಜಧಾನಿಯಲ್ಲಿ ಭಾರಿ ಭದ್ರತೆ
ಗಣರಾಜ್ಯೋತ್ಸವ ದಿನದಂದು ರಾಷ್ಟ್ರ ರಾಜಧಾನಿಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ನಗರದಾದ್ಯಂತ 70ಕ್ಕೂ ಹೆಚ್ಚು ಅರೆಸೇನಾ ಪಡೆಗಳು ಮತ್ತು 70,000ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೇರಾ ಭಾರತ್ ಮಹಾನ್
ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರ ಕೈಯಲ್ಲಿ ಅರಳಿದ ಗಣರಾಜ್ಯೋತ್ಸವ ಕಲಾಕೃತಿ
ತ್ರಿವರ್ಣ ರಂಗಿನಿಂದ ಕಂಗೊಳಿಸಿದ ಕರ್ನಾಟಕ ವಿಧಾನಸೌಧ
ಅಟ್ಟಾರಿ–ವಾಘಾ ಗಡಿಯಲ್ಲಿ ಬೀಟಿಂಗ್ ರಿಟ್ರೀಟ್ ಕಾರ್ಯಕ್ರಮ
ತಾಜ್‌ಮಹಲ್ ಎದುರು ದೇಶಭಕ್ತಿ...
ಜಮ್ಮು-ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯಲ್ಲಿ ಮಂಜುಗಡ್ಡೆಯಲ್ಲಿ ಭದ್ರತಾ ಪಡೆ ಸಿಬ್ಬಂದಿಯಿಂದ 'ತಿರಂಗಾ ಯಾತ್ರೆ'
ದೇಶದೆಲ್ಲೆಡೆ ಮನೆ ಮಾಡಿದ ಗಣರಾಜೋತ್ಸವ ಸಂಭ್ರಮ
ಕನ್ನಡದ ನವತಾರೆಗಳಿಗೆ ‘ಪದ್ಮ’ ಗರಿ
ಹೆಸರಾಂತ ವಯೊಲಿನ್ ವಾದಕ ಲಕ್ಷ್ಮೀ ನಾರಾಯಣ ಸುಬ್ರಮಣಿಯಂ, ಹಿರಿಯ ನಟ ಅನಂತನಾಗ್, ಪ್ರಸಿದ್ಧ ವೈದ್ಯೆ ವಿಜಯಲಕ್ಷ್ಮೀ ದೇಶಮಾನೆ, ತೊಗಲು ಬೊಂಬೆಯಾಟದ ಹಿರಿಯ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಸೇರಿ ರಾಜ್ಯದ 9 ಮಹನೀಯರು ಈ ಸಾಲಿನ ಪ್ರತಿಷ್ಠಿತ ಪದ್ಮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.
ADVERTISEMENT
ಕೇಂದ್ರ ಗೃಹ ಸಚಿವಾಲಯ ಈ ಸಾಲಿನ ಪದ್ಮ ಪ್ರಶಸ್ತಿ ಪುರಸ್ಕೃತರ ವಿವರವನ್ನು ಶನಿವಾರ ಪ್ರಕಟಿಸಿತು. 7 ಸಾಧಕರು ‘ಪದ್ಮವಿಭೂಷಣ’, 19 ಸಾಧಕರು ‘ಪದ್ಮಭೂಷಣ’ ಮತ್ತು 113 ಮಂದಿ ತಮ್ಮ ಕ್ಷೇತ್ರಗಳಲ್ಲಿನ ಗಣನೀಯ ಸಾಧನೆಗಾಗಿ ‘ಪದ್ಮಶ್ರಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸಂವಿಧಾನ ವಿರೋಧಿ ಶತ್ರುಗಳ ವಿರುದ್ಧ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಸಬೇಕಿದೆ: ಸಿಎಂ ಸಿದ್ದರಾಮಯ್ಯ
ನಾಡಿನ ಸಮಸ್ತ ಬಾಂಧವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ, 76ನೇ ಗಣರಾಜ್ಯೋತ್ಸವದ ಹಾರ್ದಿಕ ಶುಭಾಶಯಗಳನ್ನು ಕೋರಿದ್ದಾರೆ. ಈ ಸಂಬಂಧ ಸಾಮಾಜಿಕ ಮಾಧ್ಯಮ 'ಎಕ್ಸ್'ನಲ್ಲಿ ವಿಡಿಯೊ ಸಂದೇಶವನ್ನು ಹಂಚಿದ್ದಾರೆ.
'ಇಂತಹದ್ದೊಂದು ಅಪಾಯದ ಸ್ಥಿತಿಯಲ್ಲಿ ಭಾರತ ಇಂದು ನಿಂತಿದೆ. ಪ್ರಜಾಪ್ರಭುತ್ವವನ್ನು ಉಳಿಸುವ ದೊಡ್ಡ ಜವಾಬ್ದಾರಿ ಪ್ರತಿಯೊಬ್ಬ ಪ್ರಜೆಯ ಹೆಗಲ ಮೇಲಿದೆ. ಜಾತಿ, ಮತ, ಪಂಥ, ಪ್ರದೇಶದ ಭೇದಗಳನ್ನು ಮರೆತು ಇಡೀ ದೇಶ ಒಂದಾಗಿ ಹೊರಗಿನ ಶತ್ರುಗಳನ್ನು ಹೊಡೆದೋಡಿಸಲು ಹೇಗೆ ಸ್ವಾತಂತ್ರ್ಯಹೋರಾಟ ನಡೆಸಲಾಯಿತೋ, ಅಂತಹದ್ದೇ ಒಂದು ಹೋರಾಟವನ್ನು ದೇಶದೊಳಗಿನ ಸಂವಿಧಾನ ವಿರೋಧಿ ಶತ್ರುಗಳ ವಿರುದ್ಧ ನಡೆಸಬೇಕಾಗಿದೆ. ಇದಕ್ಕಾಗಿ ಎರಡನೇ ಸ್ವಾತಂತ್ರ್ಯ ಹೋರಾಟ ನಡೆಯದೆ ಹೋದರೆ ಮುಂದಿನ ಪೀಳಿಗೆಗೆ ಬದುಕುಳಿಯಲು ಪ್ರಜಾಪ್ರಭುತ್ವ ಇರುವುದಿಲ್ಲ' ಎಂದು ಹೇಳಿದ್ದಾರೆ.
ದೇಶದ ಜನತೆಗೆ ಗಣರಾಜ್ಯೋತ್ಸವ ಶುಭಾಶಯ ಕೋರಿದ ಪ್ರಧಾನಿ ಮೋದಿ
'ಈ ಸಂದರ್ಭವು ನಮ್ಮ ಸಂವಿಧಾನದ ಆದರ್ಶಗಳನ್ನು ಸಂರಕ್ಷಿಸುವ ಮತ್ತು ಬಲಿಷ್ಠ ಹಾಗೂ ಸಮೃದ್ಧ ದೇಶಕ್ಕಾಗಿ ಕೆಲಸ ಮಾಡುವ ನಮ್ಮ ಪ್ರಯತ್ನಗಳನ್ನು ಬಲಪಡಿಸಲಿ' ಎಂದು ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಕೋರಿದ್ದಾರೆ.
ನಾವು ನಮ್ಮ ಸಂವಿಧಾನವನ್ನು ಗೌರವಿಸಬೇಕು. ಮೂಲಭೂತ ಹಕ್ಕುಗಳನ್ನು ಪಡೆಯುತ್ತಾ, ಸಂವಿಧಾನದಲ್ಲಿ ಹೇಳಿದ ಮೂಲಭೂತ ಕರ್ತವ್ಯಗಳನ್ನು ಸಹ ಪಾಲಿಸಬೇಕು.
ಆರ್. ಅಶೋಕ, ವಿಧಾನಸಭೆ ವಿರೋಧ ಪಕ್ಷದ ನಾಯಕ
ನಮ್ಮ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ ಶ್ರೇಷ್ಠ ಸಂವಿಧಾನವೇ ಆಧಾರ: ವಿಜಯೇಂದ್ರ
ಗಣರಾಜ್ಯೋತ್ಸವದ ಶುಭಾಶಯ ಕೋರಿರುವ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, 'ನಮ್ಮ ಬಲಿಷ್ಠ ಪ್ರಜಾಪ್ರಭುತ್ವ ವ್ಯವಸ್ಥೆಗೆ ನಮ್ಮ ಶ್ರೇಷ್ಠ ಸಂವಿಧಾನವೇ ಆಧಾರ. ಪವಿತ್ರ ಸಂವಿಧಾನದ ಮೌಲ್ಯಗಳನ್ನು ಸದಾ ಪಾಲಿಸುವ ಜತೆಗೆ ದೇಶದ ಏಕತೆ, ವೈವಿಧ್ಯತೆ ಹಾಗೂ ಅನನ್ಯತೆಗಳನ್ನು ಎತ್ತಿಹಿಡಿಯೋಣ' ಎಂದು ಹೇಳಿದ್ದಾರೆ.
ಸಂವಿಧಾನ ರಕ್ಷಣೆಗಾಗಿ ತ್ಯಾಗಕ್ಕೂ ಸಿದ್ಧರಾಗಿ: ಮಲ್ಲಿಕಾರ್ಜುನ ಖರ್ಗೆ ಕರೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಬಿಗಿ ಭದ್ರತೆ
ದೆಹಲಿಯ ಕರ್ತವ್ಯ ಪಥದಲ್ಲಿ ನಡೆಯಲಿರುವ ಆಕರ್ಷಕ ಪಥಸಂಚಲನ
ಪ್ರಧಾನಿ ಮೋದಿ ಅವರ 'ವಿಕಸಿತ' ಮತ್ತು 'ಆತ್ಮನಿರ್ಭರ ಭಾರತ' ನಿರ್ಮಾಣಕ್ಕಾಗಿ ಸಂಕಲ್ಪ ಮಾಡಿ: ಕೇಂದ್ರ ಗೃಹ ಸಚಿವ ಅಮಿತ್ ಶಾ ಕರೆ
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿದ ಮಲ್ಲಿಕಾರ್ಜುನ ಖರ್ಗೆ. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಉಪಸ್ಥಿತರಿದ್ದರು.
ಮಡಿಕೇರಿ: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಧ್ವಜಾರೋಹಣ ನೆರವೇರಿಸಿದರು.
ತುಮಕೂರು: ಧ್ವಜಾರೋಹಣ ನೆರವೇರಿಸಿದ ಪರಮೇಶ್ವರ
ತುಮಕೂರು: ಗಣರಾಜ್ಯೋತ್ಸವದ ಪ್ರಯುಕ್ತ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಜಿ.ಪರಮೇಶ್ವರ ಧ್ವಜಾರೋಹಣ ನೆರವೇರಿಸಿದರು.
ಮಡಿಕೇರಿ: ಧ್ವಜಾರೋಹಣ ನೆರವೇರಿಸಿದ ಸಚಿವ ಎನ್.ಎಸ್.ಭೋಸರಾಜು
ಸಂವಿಧಾನಕ್ಕೆ ಬದ್ದವಾಗಿ ಬದುಕುವ ಮನೋಭೂಮಿಕೆ ಇಂದಿನ ತುರ್ತು ಅಗತ್ಯವಾಗಿದೆ. ಆಗ ಮಾತ್ರವೇ ಸಂವಿಧಾನದ ಅತೀ ಶ್ರೇಷ್ಠ ಮೌಲ್ಯಗಳಾದ ಸಮಾನತೆ, ಸ್ವಾತಂತ್ರ್ಯ ಮತ್ತು ಭ್ರಾತೃತ್ವಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ಪ್ರತಿಪಾದಿಸಿದರು.
ಮೈಸೂರು: ಇಲ್ಲಿನ ಬನ್ನಿಮಂಟಪದ ಪಂಜಿನ ಕವಾಯತು ಮೈದಾನದಲ್ಲಿ ಭಾನುವಾರ 76ನೇ ಗಣರಾಜ್ಯೋತ್ಸವ ಅಂಗವಾಗಿ ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಸಿ.ಮಹದೇವಪ್ಪ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ವಿಜಯನಗರ: ದೇಶದ ಎರಡನೇ ಅತಿ ಎತ್ತರದ ಧ್ವಜಸ್ತಂಭದಿಂದ ಜಾರಿ ಬಿದ್ದ ತ್ರಿವರ್ಣ ಧ್ವಜ
ಹೊಸಪೇಟೆ (ವಿಜಯನಗರ): ಇಲ್ಲಿನ ಪುನೀತ್ ರಾಜ್ ಕುಮಾರ್ ಕ್ರೀಡಾಂಗಣದಲ್ಲಿರುವ ದೇಶದ ಎರಡನೇ ಬೃಹತ್ ಧ್ವಜಸ್ತಂಭಕ್ಕೆ ಏರುತ್ತಿದ್ದ ಬೃಹತ್ ಧ್ವಜ ಕುಸಿದು ಬಿದ್ದ ಘಟನೆ ಭಾನುವಾರ ಗಣರಾಜ್ಯೋತ್ಸವ ನಡೆಯುತ್ತಿದ್ದ ವೇಳೆಯೇ ನಡೆದಿದೆ.
ಕಲಬುರಗಿ: 76ನೇ ಗಣರಾಜ್ಯೋತ್ಸವದ ಅಂಗವಾಗಿ ಜಿಲ್ಲಾಡಳಿತ ಇಲ್ಲಿನ ಡಿಎಆರ್ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತರಾಜ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.
ವಿಜಯಪುರ: ಜಿಲ್ಲಾಡಳಿತದಿಂದ ನಗರದ ಡಾ.ಬಿ.ಆರ್. ಅಂಬೇಡ್ಕರ್ ಕ್ರೀಡಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಗಣರಾಜ್ಯೋತ್ಸವದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲ ಧ್ವಜಾರೋಹಣ ನೆರವೇರಿಸಿದರು.
ಕೊಪ್ಪಳ: ಗಣರಾಜ್ಯೋತ್ಸವದಲ್ಲಿ ಪದ್ಮಶ್ರೀ ಭೀಮವ್ವಗೆ ಗೌರವ ಸನ್ಮಾನ
ಕೊಪ್ಪಳ: ಇಲ್ಲಿನ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು. ಇದೇ ವೇಳೆ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ತೊಗಲು ಗೊಂಬೆಯಾಟ ಕಲಾವಿದೆ ಭೀಮವ್ವ ದೊಡ್ಡಬಾಳಪ್ಪ ಶಿಳ್ಳೇಕ್ಯಾತರ ಅವರಿಗೆ ಜಿಲ್ಲಾಡಳಿತದ ವತಿಯಿಂದ ಸನ್ಮಾನಿಸಲಾಯಿತು.
ರಾಯಚೂರು: ಜಿಲ್ಲಾಡಳಿತದ ವತಿಯಿಂದ ಇಲ್ಲಿಯ 76ನೇ ಗಣರಾಜ್ಯೋತ್ಸವದ ಅಂಗವಾಗಿ ಮಹಾತ್ಮಾ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶರಣಪ್ರಕಾಶ ಪಾಟೀಲ ಧ್ವಜಾರೋಹಣ ನೆರವೇರಿಸಿದರು.
ರಾಯಚೂರು: ಧ್ವಜಾರೋಹಣ ಮಾಡಲು ಹರಸಾಹಸ ಪಟ್ಟ ವ್ಯವಸ್ಧಾಪಕ ನಿರ್ದೇಶಕಿ ಶಿಲ್ಪ
ಹಟ್ಟಿ ಚಿನ್ನದ ಗಣಿ (ರಾಯಚೂರು ಜಿಲ್ಲೆ) : ಹಟ್ಟಿ ಚಿನ್ನದ ಗಣಿ ಕಂಪನಿ ವತಿಯಿಂದ ಧಾರುವಾಲ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ 76 ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಗಣಿ ಕಂಪನಿ ನಿರ್ದೇಶಕಿ ಶಿಲ್ಪಾ ಆರ್. ಧ್ವಜಾರೋಹಣ ಮಾಡಲು ಹಗ್ಗ ಎಳೆದಾಗ ಧ್ವಜ ಬಿಚ್ಚಿಕೊಳ್ಳಲಿಲ್ಲ. ಶಿಲ್ಪಾ ಅವರು ನಾಲ್ಕೈದು ಬಾರಿ ಹಗ್ಗ ಎಳೆದರೂ ಧ್ವಜ ಬಿಚ್ಚಿಕೊಳ್ಳದಿದ್ದಾಗ ಅದನ್ನು ಪುನಃ ಕೆಳಿಗಿಳಿಸಿ ಸರಿಪಡಿಸಿ ಧ್ವಜಾರೋಹಣ ಮಾಡಲಾಯಿತು.
ರಾಷ್ಟ್ರ ರಾಜಧಾನಿ ದೆಹಲಿಯ ಕರ್ತವ್ಯಪಥದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಧ್ರಜಾರೋಹಣ ನೆರವೇರಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು. ಇದಾದ ಬಳಿಕ ಆಕರ್ಷಕ ಪಥಸಂಚಲನ ಆರಂಭವಾಗಿದೆ.
ಸಶಸ್ತ್ರ ಪಡೆ, ಪೊಲೀಸ್, ಎನ್‌ಸಿಸಿ ಸೇರಿದಂತೆ ವಿವಿಧ ತುಕಡಿಗಳಿಂದ ಆಕರ್ಷಕ ಪಥ ಸಂಚಲನ
ಹಾವೇರಿ: ಧ್ವಜಾರೋಹಣ ನೆರವೇರಿಸಿದ ಸಚಿವ ಶಿವಾನಂದ ಪಾಟೀಲ
ಹಾವೇರಿ: ಇಲ್ಲಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಬೆಳಿಗ್ಗೆ ಆಯೋಜಿಸಿದ್ದ ಗಣರಾಜ್ಯೋತ್ಸವ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ ಅವರು ರಾಷ್ಟ್ರ ಧ್ವಜಾರೋಹಣ ನೆರವೇರಿಸಿದರು.