
ನವದೆಹಲಿ: ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಗಣರಾಜ್ಯೋತ್ಸವದ ನಿಮಿತ್ತ ನಿನ್ನೆ (ಭಾನುವಾರ) ಕೇಂದ್ರ ಸರ್ಕಾರದ ವಿವಿಧ ಇಲಾಖೆಯ ಫಲಾನುಭವಿಗಳ ಜೊತೆ ವಿಶೇಷ ಸಂವಾದ ಆಯೋಜಿಸಿತ್ತು.
ದೆಹಲಿಯ ಡಾ. ಅಂಬೇಡ್ಕರ್ ರಾಷ್ಟ್ರೀಯ ಸ್ಮಾರಕದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಅತಿಥಿಗಳು ಭಾಗವಹಿಸಿದ್ದರು.
ಡಿಎನ್‌ಟಿ ಸಮುದಾಯಗಳ ಆರ್ಥಿಕ ಸಬಲೀಕರಣ ಯೋಜನೆ (ಸೀಡ್) ಅಡಿಯಲ್ಲಿ 151 ಫಲಾನುಭವಿಗಳು. ಸ್ಮೈಲ್ (ಲಿಂಗತ್ವ ಅಲ್ಪಸಂಖ್ಯಾತರು) ಯೋಜನೆ ಅಡಿಯಲ್ಲಿ 42 ಫಲಾನುಭವಿಗಳು ಮತ್ತು ಸ್ಮೈಲ್ (ಕಡು ಬಡತನ ) ಯೋಜನೆ ಅಡಿಯಲ್ಲಿ 51 ಫಲಾನುಭವಿಗಳು ಸೇರಿ ಒಟ್ಟು 244 ಫಲಾನುಭವಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಎಂದು ಸಚಿವಾಲಯ ಮಾಹಿತಿ ನೀಡಿದೆ.
ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯು ಕಲ್ಯಾಣ ಕಾರ್ಯಕ್ರಮಗಳ ಮೂಲಕ ಸಾಧಿಸಿದ ಪ್ರಗತಿ ಮತ್ತು ಸ್ಪೂರ್ತಿದಾಯಕ ಪ್ರಯಾಣವನ್ನು ಗುರುತಿಸುವ ಉದ್ದೇಶದಿಂದ ವಿಶೇಷ ಅತಿಥಿಗಳ ಸಂವಾದ ಆಯೋಜಿಸಿತ್ತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆ ಸಚಿವ ವೀರೇಂದ್ರ ಕುಮಾರ್ ಅವರು ಫಲಾನುಭವಿಗಳ ಜೊತೆ ಸಂವಾದ ನಡೆಸಿದರು. ಮಾತ್ರವಲ್ಲ, ಫಲಾನುಭವಿಗಳ ಅನುಭವ ಆಲಿಸಿದರು.
ಸಭೆಯನ್ನುದ್ದೇಶಿಸಿ ಮಾತನಾಡಿದ ವೀರೇಂದ್ರ ಕುಮಾರ್ ಅವರು, ಸಮಗ್ರ ಅಭಿವೃದ್ಧಿ ಮತ್ತು ಸಾಮಾಜಿಕ ನ್ಯಾಯದ ಕುರಿತು ಸರ್ಕಾರ ಅಚಲ ಬದ್ಧತೆ ಹೊಂದಿದೆ ಎಂದು ತಿಳಿಸಿದ್ದಾರೆ.
ರಾಷ್ಟ್ರೀಯ ಆಚರಣೆಗಳ ಸಂದರ್ಭದಲ್ಲಿ ತಳ ಸಮುದಾಯಗಳ ಫಲಾನುಭವಿಗಳ ಉಪಸ್ಥಿತಿಯು ಪ್ರಧಾನಿ ನರೇಂದ್ರ ಮೋದಿಯವರ ‘ಸಬ್ ಕಾ ಸಾಥ್, ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್, ಸಬ್ ಕಾ ಪ್ರಯಾಸ್’ ಎಂಬ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ ಎಂದು ಅವರು ಒತ್ತಿ ಹೇಳಿದರು.
ಫಲಾನುಭವಿಗಳು ಮಾತನಾಡಿ, ಸರ್ಕಾರದ ಯೋಜನೆಗಳು, ಘನತೆ, ಸಾಮಾಜಿಕ ಸೇರ್ಪಡೆ, ಸ್ವಾವಲಂಬನೆ ಮತ್ತು ಸುಸ್ಥಿರ ಜೀವನೋಪಾಯ ಉತ್ತೇಜಿಸುವ ಮೂಲಕ ತಮ್ಮ ಜೀವನದಲ್ಲಿ ಅರ್ಥಪೂರ್ಣ ಮತ್ತು ಪರಿವರ್ತನಾತ್ಮಕ ಬದಲಾವಣೆಗಳನ್ನು ಹೇಗೆ ತಂದಿವೆ ಎಂಬುದನ್ನು ವಿವರಿಸಿದರು.
ಕಾರ್ಯಕ್ರಮದಲ್ಲಿ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯದ ಕಾರ್ಯದರ್ಶಿ ಸುಧಾಂಶ್ ಪಂತ್ ಮತ್ತು ಸಚಿವಾಲಯದ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.