ADVERTISEMENT

ಟಿಆರ್‌ಪಿ ತಿರುಚಿದ ಪ್ರಕರಣ: ವಿಚಾರಣೆಗೆ ಹಾಜರಾಗದ ರಿಪಬ್ಲಿಕ್‌ ವಾಹಿನಿ ಸಿಎಫ್‌ಒ

ಪಿಟಿಐ
Published 10 ಅಕ್ಟೋಬರ್ 2020, 12:04 IST
Last Updated 10 ಅಕ್ಟೋಬರ್ 2020, 12:04 IST
ಸಾಂದರ್ಭಿಕ ಚಿತ್ರ 
ಸಾಂದರ್ಭಿಕ ಚಿತ್ರ    

ಮುಂಬೈ: ‘ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌ (ಟಿಆರ್‌ಪಿ) ತಿರುಚಿದ ಪ್ರಕರಣದಲ್ಲಿ ಮುಂಬೈ ಪೊಲೀಸರು ಸಮನ್ಸ್‌ ನೀಡಿದ್ದರೂ ಕೂಡ ರಿ‍ಪಬ್ಲಿಕ್ ಟಿ.ವಿ.ಯ ಮುಖ್ಯ ಹಣಕಾಸು ಅಧಿಕಾರಿ (ಸಿಎಫ್‌ಒ) ಶಿವ ಸುಬ್ರಮಣಿಯಂ ಸುಂದರಂ ಅವರು ವಿಚಾರಣೆಗೆ ಹಾಜರಾಗಿಲ್ಲ’ ಎಂದು ಹಿರಿಯ ಅಧಿಕಾರಿಯೊಬ್ಬರು ಶನಿವಾರ ತಿಳಿಸಿದ್ದಾರೆ.

‘ಪ್ರಕರಣಕ್ಕೆ ಸಂಬಂಧಿಸಿದಂತೆ ನಿಮ್ಮ ಹೇಳಿಕೆ ದಾಖಲಿಸಬೇಕಿದೆ. ಹೀಗಾಗಿ ಶನಿವಾರ ಬೆಳಿಗ್ಗೆ 11ಗಂಟೆಯೊಳಗೆ ವಿಚಾರಣೆಗೆ ಹಾಜರಾಗಿ’ ಎಂದು ಮುಂಬೈ ಅಪರಾಧ ದಳದ ಕ್ರೈಂ ಇಂಟೆಲಿಜೆನ್ಸ್‌ ಯೂನಿಟ್‌ನ (ಸಿಐಯು) ಅಧಿಕಾರಿಗಳು ಶುಕ್ರವಾರ ಸುಂದರಂ ಅವರಿಗೆ ನೀಡಿದ್ದ ಸಮನ್ಸ್‌ ನೀಡಿದ್ದರು.

‘ಪ್ರಕರಣದ ವಿಚಾರವಾಗಿ ನಮ್ಮ ವಾಹಿನಿಯು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ವಾರದೊಳಗೆ ಅರ್ಜಿಯ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಹೀಗಾಗಿ ಸದ್ಯ ನನ್ನ ಹೇಳಿಕೆ ದಾಖಲಿಸಬೇಡಿ. ವಿಚಾರಣೆಯಿಂದಲೂ ನನಗೆ ವಿನಾಯಿತಿ ನೀಡಿ ಎಂದು ಸುಂದರಂ ಮನವಿ ಮಾಡಿದ್ದಾರೆ.ಮ್ಯಾಡಿಸನ್‌ ವರ್ಲ್ಡ್‌ ಆ್ಯಂಡ್‌ ಮ್ಯಾಡಿಸನ್‌ ಕಮ್ಯುನಿಕೇಷನ್‌ನ ಮುಖ್ಯಸ್ಥ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸ್ಯಾಮ್‌ ಬಲ್ಸಾರ ಅವರು ವಿಚಾರಣೆಗೆ ಹಾಜರಾಗಿ ಹೇಳಿಕೆ ದಾಖಲಿಸಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿ ಮಾಹಿತಿ ನೀಡಿದ್ದಾರೆ.

ADVERTISEMENT

‘ಪ್ರಕರಣದಲ್ಲಿ ಭಾಗಿಯಾಗಿರುವ ‘ಫಕ್ತ್‌ ಮರಾಠಿ’ ಮತ್ತು ‘ಬಾಕ್ಸ್‌ ಸಿನಿಮಾ’ ಮರಾಠಿ ವಾಹಿನಿಗಳ ಅಕೌಂಟೆಂಟ್ಸ್‌ಗಳು ಹಾಗೂ ಕೆಲ ಜಾಹೀರಾತು ಏಜೆನ್ಸಿಗಳಿಗೂ ಸಮನ್ಸ್‌ ಜಾರಿಗೊಳಿಸಲಾಗಿದೆ’ ಎಂದೂ ಅವರು ಹೇಳಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ‘ಫಕ್ತ್‌ ಮರಾಠಿ’ ಮತ್ತು ‘ಬಾಕ್ಸ್‌ ಸಿನಿಮಾ’ ವಾಹಿನಿಗಳ ಮುಖ್ಯಸ್ಥರು ಸೇರಿದಂತೆ ಒಟ್ಟು ನಾಲ್ವರನ್ನು ಬಂಧಿಸಿರುವುದಾಗಿ ಮುಂಬೈ ಪೊಲೀಸ್‌ ಆಯುಕ್ತ ಪರಮ್‌ಬೀರ್ ಸಿಂಗ್‌ ಗುರುವಾರ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.