ADVERTISEMENT

ಮೇಘಸ್ಫೋಟ | ಜನಾಕ್ರೋಶ ಸಹಜ, ರಕ್ಷಣೆಗೆ ಒತ್ತು: ಸಿಎಂ ಒಮರ್‌ ಅಬ್ದುಲ್ಲಾ

ಪಿಟಿಐ
Published 16 ಆಗಸ್ಟ್ 2025, 14:22 IST
Last Updated 16 ಆಗಸ್ಟ್ 2025, 14:22 IST
<div class="paragraphs"><p>ಕಿಶ್ತವಾಡದ ಚಸೋತಿಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಗಾಯಗೊಂಡು ಜಮ್ಮುವಿನ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ಶನಿವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು</p></div>

ಕಿಶ್ತವಾಡದ ಚಸೋತಿಯಲ್ಲಿ ಸಂಭವಿಸಿದ ಮೇಘಸ್ಫೋಟದಿಂದ ಗಾಯಗೊಂಡು ಜಮ್ಮುವಿನ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳನ್ನು ಕೇಂದ್ರ ಸಚಿವ ಜಿತೇಂದ್ರ ಸಿಂಗ್‌ ಅವರು ಶನಿವಾರ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರು

   

ಪಿಟಿಐ ಚಿತ್ರ

ಚಸೋತಿ(ಜಮ್ಮು ಮತ್ತು ಕಾಶ್ಮೀರ): ‘ಕಿಶ್ತವಾಡ ಜಿಲ್ಲೆಯ ಚಸೋತಿ ಗ್ರಾಮದಲ್ಲಿ ಮೇಘಸ್ಫೋಟದ ರಕ್ಷಣಾ ಕಾರ್ಯಾಚರಣೆ ಕುರಿತು ಜನರ ಆಕ್ರೋಶ ಸಹಜವಾಗಿದೆ, ಅದನ್ನು ನಾನು ಅರ್ಥ ಮಾಡಿಕೊಳ್ಳತ್ತೇನೆ. ಆದರೂ ಕಾರ್ಯಾಚರಣೆಗೆ ವೇಗ ನೀಡಲಾಗಿದ್ದು, ಅವಶೇಷಗಳ ಅಡಿಯಲ್ಲಿ ಸಿಲುಕಿದವರನ್ನು ಹುಡುಕುವ ಕೆಲಸ ಮಾಡುತ್ತಿದ್ದೇವೆ’ ಎಂದು ಜಮ್ಮು ಮತ್ತು ಕಾಶ್ಮೀರದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ತಿಳಿಸಿದ್ದಾರೆ.

ADVERTISEMENT

ದುರಂತದ ಸ್ಥಳಕ್ಕೆ ವೇಳೆ ಹಿರಿಯ ಅಧಿಕಾರಿಗಳ ಜೊತೆ ಭೇಟಿ ನೀಡಿದ್ದ ವೇಳೆ ಸ್ಥಳೀಯರು ರಕ್ಷಣಾ ಕಾರ್ಯಾಚರಣೆ ಕುರಿತು ಅಸಮಾಧಾನ ವ್ಯಕ್ತಪಡಿಸಿ, ಆಕ್ರೋಶ ಹೊರಹಾಕಿದರು. ಸನಿಹದ ಟೆಂಟ್‌ನಲ್ಲಿ ಕೂತು, ಜನರಿಂದ ಅಹವಾಲು ಸ್ವೀಕರಿಸಲು ಮುಂದಾದರು. ಕೆಲವರು ಅವರ ಬಳಿ ತೆರಳದೇ, ದೂರ ಉಳಿದರು. ಆದಷ್ಟು ಬೇಗ ರಕ್ಷಣಾ ಕಾರ್ಯಾಚರಣೆ ಪೂರ್ಣಗೊಳಿಸುವುದಾಗಿ ಭರವಸೆ ನೀಡಿ, ಅಲ್ಲಿಂದ ತೆರಳಿದರು. 

ರಕ್ಷಣಾ ಕಾರ್ಯಾಚರಣೆ ಬಿರುಸು: ರಕ್ಷಣಾ ಹಾಗೂ ಪರಿಹಾರ ತಂಡಗಳು ಪರಸ್ಪರ ಸಮನ್ವಯದಿಂದ ಕಾರ್ಯಾಚರಣೆ ತೀವ್ರಗೊಳಿಸಿದ್ದು, ನಾಪತ್ತೆಯಾದ 70ರಿಂದ 80 ಮಂದಿಯ ಪತ್ತೆಗೆ ಹುಡುಕಾಟ ಮುಂದುವರಿಸಲಾಗಿದೆ.

ಮಾರ್ಗಮಧ್ಯದಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು, ‘ಜನರ ಆಕ್ರೋಶ ಅರ್ಥ ಮಾಡಿಕೊಳ್ಳುತ್ತೇನೆ. ಕಣ್ಮರೆಯಾದವರು ಬದುಕಿದ್ದರೋ, ಸತ್ತಿದ್ದಾರೋ ಎಂಬುದು ಗೊತ್ತಿಲ್ಲ. ಅವರು ಉತ್ತರವನ್ನು ಬಯಸುತ್ತಿದ್ದಾರೆ. ಸತ್ತಿದ್ದರೆ, ಆದಷ್ಟು ಬೇಗ ಮೃತದೇಹವನ್ನು ಹಸ್ತಾಂತರಿಸುವಂತೆ ಒತ್ತಾಯಿಸಿದ್ದಾರೆ’ ಎಂದು ಅಬ್ದುಲ್ಲಾ ಹೇಳಿದ್ದಾರೆ.

ಕಾರ್ಯಾಚರಣೆಯಲ್ಲಿ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್‌), ರಾಜ್ಯ ವಿಪತ್ತು ನಿರ್ವಹಣಾ ಪಡೆ (ಎಸ್‌ಡಿಆರ್‌ಎಫ್‌), ಸೇನೆ, ಜಮ್ಮು ಮತ್ತು ಕಾಶ್ಮೀರದ ಪೊಲೀಸರು, ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ(ಸಿಐಎಸ್‌ಎಫ್‌) ಸಿಬ್ಬಂದಿ ತೊಡಗಿಸಿಕೊಂಡಿದ್ದು, ಸಮರೋಪಾದಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೆಲವರು ಕೊಚ್ಚಿ ಹೋದ ಬಗ್ಗೆ ತಿಳಿಸಿದ್ದು, ಅಂತಹವರನ್ನು ಹುಡುಕುವ ಕೆಲಸ ಮಾಡುತ್ತಿದ್ದೇವೆ’ ಎಂದು ತಿಳಿಸಿದ್ದಾರೆ.

ಸಾವಿನ ಸಂಖ್ಯೆ ಏರಿಕೆ: ‘ಮೇಘ ಸ್ಫೋಟದಲ್ಲಿ ಇದುವರೆಗೂ 60 ಮಂದಿ ಮೃತಪಟ್ಟಿದ್ದಾರೆ. ಕಣ್ಮರೆಯಾದವರ ಸಂಖ್ಯೆ 70ರಿಂದ 80ರಷ್ಟಿದೆ. ಈ ಸಂಖ್ಯೆ ಸ್ವಲ್ಪ ಮಟ್ಟಿಗೆ ವ್ಯತ್ಯಾಸವಾಗಬಹುದು. 500ರಿಂದ 1,000 ಮಂದಿ ಕಣ್ಮರೆಯಾಗಿದ್ದಾರೆ ಎಂದು ಕೆಲವರು ಊಹಿಸಿದ್ದಾರೆ. ಅಂತಹ ಸಾಧ್ಯತೆ ಇಲ್ಲ. ಈಗಿನ ಪ್ರಕಾರ, 80 ಮಂದಿ ಕಣ್ಮರೆಯಾಗಿರುವ ಮಾಹಿತಿಯಿದ್ದು, ಅದು ಕೂಡ ದೊಡ್ಡ ಸಂಖ್ಯೆಯೇ ಆಗಿದೆ’ ಎಂದು ಅಬ್ದುಲ್ಲಾ ವಿವರಿಸಿದ್ದಾರೆ.

‘ಸಂತ್ರಸ್ತ ಕುಟುಂಬಸ್ಥರಿಗೆ ಇದುವರೆಗೆ ಒಟ್ಟು ₹36 ಲಕ್ಷ ನೆರವು ನೀಡಲಾಗಿದ್ದು, ಇನ್ನೂ ಹೆಚ್ಚಿನ ನೆರವು ನೀಡಲಾಗುವುದು. ಇಡೀ ಗ್ರಾಮವನ್ನು ಸ್ಥಳಾಂತರಿಸುವ ಕುರಿತು ಈಗಲೇ ಹೇಳಲು ಸಾಧ್ಯವಿಲ್ಲ. ತಜ್ಞರ ತಂಡವು ಎಲ್ಲವನ್ನೂ ಪರಿಶೀಲಿಸಿ, ವರದಿ ನೀಡಿದ ನಂತರವೇ ಮುಂದಿನ ಕ್ರಮ ಕೈಗೊಳ್ಳಲಾಗುವುದು’ ಎಂದಿದ್ದಾರೆ.

ಚಸೋತಿ ಗ್ರಾಮಕ್ಕೆ ಶನಿವಾರ ಭೇಟಿ ನೀಡಿದ ಮುಖ್ಯಮಂತ್ರಿ ಒಮರ್‌ ಅಬ್ದುಲ್ಲಾ ಅವರ ಮುಂದೆ ಮಹಿಳೆಯೊಬ್ಬರು ಕಣ್ಣೀರಿಟ್ಟರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.