ADVERTISEMENT

ಮೀಸಲು: ಸಂಸತ್ತಿನಲ್ಲಿ ಗದ್ದಲ

ಮೀಸಲಾತಿ ರಕ್ಷಣೆಗೆ ಬದ್ಧ: ಕೇಂದ್ರ ಸರ್ಕಾರದ ಭರವಸೆ

​ಪ್ರಜಾವಾಣಿ ವಾರ್ತೆ
Published 10 ಫೆಬ್ರುವರಿ 2020, 20:17 IST
Last Updated 10 ಫೆಬ್ರುವರಿ 2020, 20:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ:ಪರಿಶಿಷ್ಟ ಜಾತಿ, ಪಂಗಡಗಳು ಮತ್ತು ಇತರ ಹಿಂದುಳಿದ ವರ್ಗಗಳ ಮೀಸಲಾತಿಯ ರಕ್ಷಣೆಗೆ ಬದ್ಧ ಮತ್ತು ಅದಕ್ಕೆ ಬೇಕಾದ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸರ್ಕಾರವು ಸಂಸತ್ತಿನಲ್ಲಿ ಸ್ಪಷ್ಟಪಡಿಸಿದೆ.

ಮೀಸಲಾತಿ ನೀತಿಯನ್ನು ಸುಪ್ರೀಂ ಕೋರ್ಟ್‌ನಲ್ಲಿ ಸಮರ್ಥಿಸಿಕೊಳ್ಳುವಲ್ಲಿ ಕೇಂದ್ರ ಸರ್ಕಾರ ವಿಫಲವಾಗಿದೆ ಎಂದು ಸಂಸತ್ತಿನ ಎರಡೂ ಸದನಗಳಲ್ಲಿ ವಿರೋಧ ಪಕ್ಷಗಳು ಸೋಮವಾರ ಆಕ್ರೋಶ ವ್ಯಕ್ತಪಡಿಸಿದ ಬಳಿಕ ಈ ಸ್ಪಷ್ಟನೆ ನೀಡಲಾಗಿದೆ.

ಉತ್ತರಾಖಂಡ ಸರ್ಕಾರಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ, ಬಡ್ತಿಯಲ್ಲಿ ಮೀಸಲಾತಿ ಪಡೆಯುವುದು ಮೂಲಭೂತ ಹಕ್ಕು ಅಲ್ಲ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರ ತೀರ್ಪು ನೀಡಿತ್ತು. ಲೋಕಸಭೆ ಮತ್ತು ರಾಜ್ಯಸಭೆಗಳೆರಡರಲ್ಲೂ ಈ ವಿಚಾರ ಪ್ರಸ್ತಾಪವಾಗಿ ಭಾರಿ ಗದ್ದಲ ಉಂಟಾಯಿತು.

ADVERTISEMENT

ವಿರೋಧ ಪಕ್ಷಗಳು ಮಾತ್ರವಲ್ಲದೆ, ಆಡಳಿತಾರೂಢ ಎನ್‌ಡಿಎಯ ಭಾಗವಾಗಿರುವ ಹಲವು ಸಂಸದರು ಕೂಡ ಸುಪ್ರೀಂ ಕೋರ್ಟ್‌ ತೀರ್ಪಿಗೆ ಆಕ್ಷೇಪ ವ್ಯಕ್ತಪಡಿಸಿದರು. ಪರಿಣಾಮವಾಗಿ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿ ಹಲವು ಸಚಿವರು ಸರ್ಕಾರದ ಸಮರ್ಥನೆಗೆ ಬರಬೇಕಾಯಿತು. ‘ಕಾಂಗ್ರೆಸ್‌ ಪಕ್ಷವು ಈ ಸೂಕ್ಷ್ಮ ವಿಚಾರವನ್ನು ರಾಜಕೀಯಕ್ಕೆ ಬಳಸಿಕೊಳ್ಳುತ್ತಿದೆ’ ಎಂದು ಲೋಕಸಭೆಯಲ್ಲಿ ಬಿಜೆಪಿ ಉಪನಾಯಕರೂ ಆಗಿರುವ ರಾಜನಾಥ್‌ ಆರೋಪಿಸಿದರು.

‘ಈ ವಿಚಾರದಲ್ಲಿ ಉನ್ನತ ಮಟ್ಟದ ತನಿಖೆ ನಡೆಯುತ್ತಿದೆ’ ಎಂದು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ ತಾವರಚಂದ್‌ ಗೆಹ್ಲೊಟ್‌ ವಿವರಣೆ ನೀಡಿದರು. ತೀರ್ಪಿಗೆ ಸಂಬಂಧಿಸಿದ ಆಕ್ರೋಶವನ್ನು ಕಾಂಗ್ರೆಸ್‌ ಪಕ್ಷದ ವಿರುದ್ಧವೇ ತಿರುಗಿಸಲು ಅವರು ಯತ್ನಿಸಿದರು. 2012ರಲ್ಲಿ ಉತ್ತರಾಖಂಡ ಸರ್ಕಾರ ಕೈಗೊಂಡಿದ್ದ ತೀರ್ಮಾನಕ್ಕೆ ಸಂಬಂಧಿಸಿದ ಸುಪ್ರೀಂ ಕೋರ್ಟ್‌ ಈ ತೀರ್ಪು ನೀಡಿದೆ. ಆಗ ಉತ್ತರಾಖಂಡದಲ್ಲಿ ಕಾಂಗ್ರೆಸ್‌ ಸರ್ಕಾರ ಇತ್ತು ಎಂದು ಅವರು ಹೇಳಿದರು.

ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವು ಕಕ್ಷಿದಾರ ಆಗಿರಲಿಲ್ಲ, ಮಾತ್ರವಲ್ಲ, ಪ್ರಮಾಣಪತ್ರ ಸಲ್ಲಿಸುವಂತೆ ಸೂಚನೆಯೂ ಬಂದಿರಲಿಲ್ಲ ಎಂದರು.

ಸಚಿವರ ಹೇಳಿಕೆಯು ಗದ್ದಲವನ್ನು ಇನ್ನಷ್ಟು ಹೆಚ್ಚಿಸಿತು. ಪ್ರಕರಣವನ್ನು ರಾಜಕೀಯಗೊಳಿಸಲು ಸರ್ಕಾರ ಯತ್ನಿಸುತ್ತಿದೆ ಎಂದು ವಿರೋಧ ಪಕ್ಷಗಳು ಆಕ್ಷೇಪಿಸಿ, ಎರಡೂ ಸದನಗಳಲ್ಲಿ ಸಭಾತ್ಯಾಗ ನಡೆಸಿದವು.

ಅದಕ್ಕೂ ಮೊದಲು, ಕಾಂಗ್ರೆಸ್‌ ನಾಯಕ ಅಧಿರ್‌ ರಂಜನ್‌ ಚೌಧರಿ ಮತ್ತು ತೃಣಮೂಲ ಕಾಂಗ್ರೆಸ್‌ನ ಕಲ್ಯಾಣ್‌ ಬ್ಯಾನರ್ಜಿ ಅವರು ಲೋಕಸಭೆಯಲ್ಲಿ ವಿಚಾರ ಪ್ರಸ್ತಾಪಿಸಿದರು. ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ಅಧಿಕಾರಕ್ಕೆ ಬಂದ ಬಳಿಕ ಮೀಸಲಾತಿ ನೀತಿ ಮೇಲೆ ಪ್ರಹಾರ ನಡೆಯುತ್ತಿದೆ ಎಂದು ಅವರು ಆರೋಪಿಸಿದರು. ಸ್ಪೀಕರ್‌ ಪೀಠದ ಮುಂದೆ ಜಮಾಯಿಸಿದ ಕಾಂಗ್ರೆಸ್‌ ಸದಸ್ಯರು ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.