ADVERTISEMENT

ರಾಜ್ಯಸಭಾ ಚುನಾವಣೆ: ಮುನ್ನೆಲೆಗೆ ಬಂದ ‘ರೆಸಾರ್ಟ್‌ ತಂತ್ರಗಾರಿಕೆ’

ರಾಜ್ಯಸಭಾ ಚುನಾವಣೆ: ರಾಜಸ್ಥಾನ, ಹರಿಯಾಣ ಕಾಂಗ್ರೆಸ್‌ ಶಾಸಕರ ಸ್ಥಳಾಂತರ

​ಪ್ರಜಾವಾಣಿ ವಾರ್ತೆ
Published 3 ಜೂನ್ 2022, 0:59 IST
Last Updated 3 ಜೂನ್ 2022, 0:59 IST
ಹರಿಯಾಣ ಕಾಂಗ್ರೆಸ್‌ ಶಾಸಕರು ಗುರುವಾರ ಛತ್ತೀಸಗಡದ ರಾಯಪುರಕ್ಕೆ ಸ್ಥಳಾಂತರಿಸಲಾಯಿತು –ಪಿಟಿಐ ಚಿತ್ರ
ಹರಿಯಾಣ ಕಾಂಗ್ರೆಸ್‌ ಶಾಸಕರು ಗುರುವಾರ ಛತ್ತೀಸಗಡದ ರಾಯಪುರಕ್ಕೆ ಸ್ಥಳಾಂತರಿಸಲಾಯಿತು –ಪಿಟಿಐ ಚಿತ್ರ   

ನವದೆಹಲಿ: ರಾಜ್ಯಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ಮತ್ತೆ‘ರೆಸಾರ್ಟ್‌’ಗಳಿಗೆ ಶಾಸಕರನ್ನು ಕರೆದೊಯ್ಯುವ ‘ತಂತ್ರಗಾರಿಕೆ’ ಮುನ್ನೆಲೆಗೆ ಬಂದಿದೆ.

ಚುನಾವಣೆಗೂ ಮುನ್ನ ತಮ್ಮ ಶಾಸಕರನ್ನು ‘ಖರೀದಿಸುವ’ ಯತ್ನಗಳ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕಾಂಗ್ರೆಸ್‌, ರಾಜಸ್ಥಾನ ಹಾಗೂ ಹರಿಯಾಣದ ತನ್ನ ಶಾಸಕರನ್ನು ‘ಸುರಕ್ಷಿತ ಜಾಗ‘ಗಳಿಗೆ ಕರೆದೊಯ್ದಿದೆ.

ಬಿಜೆಪಿ ಬೆಂಬಲಿತ ಪಕ್ಷೇತರ ಅಭ್ಯರ್ಥಿಗಳು ಆಮಿಷವೊಡ್ಡುವ ಮೂಲಕ ಪಕ್ಷದ ಶಾಸಕರ ಬೆಂಬಲ ಪಡೆಯಲಿದ್ದಾರೆ ಎಂಬ ಸಂಶಯವೂ ಕಾಂಗ್ರೆಸ್‌ ವರಿಷ್ಠರ ಈ ನಡೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ADVERTISEMENT

ಮೂವರು ಶಾಸಕರು ಹಾಗೂ ಶಾಸಕಾಂಗ ಪಕ್ಷದ ನಾಯಕ ಭೂಪೀಂದರ್‌ ಹೂಡಾ ಅವರನ್ನು ಹೊರತುಪಡಿಸಿ, ಹರಿಯಾಣದ 27 ಶಾಸಕರನ್ನು ಛತ್ತೀಸಗಡದ ರಾಯಪುರಕ್ಕೆ ಸ್ಥಳಾಂತರಿಸಲಾಗಿದೆ. ಪಕ್ಷದ ರಾಜಸ್ಥಾನ ಘಟಕವು ಪಕ್ಷೇತರರು ಸೇರಿದಂತೆ ಇತರ 40 ಶಾಸಕರನ್ನು ಜೈಪುರದಿಂದ ಉದಯಪುರಕ್ಕೆ ಕರೆದೊಯ್ದಿದೆ.

ರಾಯಪುರಕ್ಕೆ ಕರೆದೊಯ್ಯುವ ಮುನ್ನ ಹೂಡಾ ಅವರು ನವದೆಹಲಿಯಲ್ಲಿ ಹರಿಯಾಣದ ಎಲ್ಲ ಶಾಸಕರ ಸಭೆ ನಡೆಸಿದ್ದರು. ಆದರೆ, ಪಕ್ಷದ ನಾಯಕರೊಂದಿಗೆ ಮುನಿಸಿಕೊಂಡಿರುವ ಕುಲದೀಪ್‌ ಬಿಷ್ಣೋಯ್ ಹಾಗೂ ಕಿರಣ್‌ ಚೌಧರಿ ಅವರು ಸಭೆಯಿಂದ ದೂರ ಉಳಿದಿದ್ದರು.

ಮತ್ತೊಬ್ಬ ಶಾಸಕ ಚಿರಂಜೀವಿ ರಾವ್‌ ಅವರು ತಮ್ಮ ಜನ್ಮದಿನ ಆಚರಿಸಿಕೊಳ್ಳುವ ಸಲುವಾಗಿ ಕುಟುಂಬದೊಂದಿಗೆ ಶಿಮ್ಲಾಕ್ಕೆ ತೆರಳಿದ್ದರು. ಆದರೆ, ಅಲ್ಲಿಂದ ಮರಳಿದ ನಂತರ, ರಾಯಪುರದಲ್ಲಿ ಉಳಿದ ಶಾಸಕರನ್ನು ಸೇರುವುದಾಗಿ ವರಿಷ್ಠರಿಗೆ ತಿಳಿಸಿದ್ದರು ಎಂದು ಮೂಲಗಳು ಹೇಳಿವೆ.

ಸಭೆಯ ನಂತರ, ಹೂಡಾ ಅವರ ಪುತ್ರ ಹಾಗೂ ರಾಜ್ಯಸಭಾ ಸದಸ್ಯ ದೀಪೀಂದರ್ ಹೂಡಾ ಅವರು ಎಲ್ಲ ಶಾಸಕರನ್ನು ಬಾಡಿಗೆ ವಿಮಾನದ ಮೂಲಕ ರಾಯಪುರಕ್ಕೆ ಕರೆದುಕೊಂಡು ಹೋದರು.

ಹರಿಯಾಣದಿಂದ ಹಿರಿಯ ಮುಖಂಡ ಅಜಯ ಮಾಕೆನ್ ಕಣಕ್ಕಿಳಿದಿದ್ದಾರೆ. ಇಲ್ಲಿ ಕಾಂಗ್ರೆಸ್‌ 31 ಶಾಸಕರನ್ನು ಹೊಂದಿದ್ದು, ಮಾಕೆನ್‌ ಗೆಲುವಿಗೆ 30 ಮತಗಳು ಬೇಕು. ಹೀಗಾಗಿ ಮಾಕೆನ್‌ ಗೆಲುವು ಸುಲಭ ಎಂದಿಕೊಂಡಿದ್ದ ಕಾಂಗ್ರೆಸ್‌ಗೆ, ಬಿಜೆಪಿಯಿಂದ ಕಣಕ್ಕಿಳಿದಿರುವ ಮಾಧ್ಯಮ ಕ್ಷೇತ್ರದ ಉದ್ಯಮಿ ಕಾರ್ತಿಕೇಯ ಶರ್ಮಾ ಆತಂಕ ಮೂಡಿಸಿದ್ದಾರೆ.

ಶರ್ಮಾ ಅವರ ಗೆಲುವಿಗೆ ಮೂರರಿಂದ ನಾಲ್ಕು ಮತಗಳು ಬೇಕು. ಈ ಮತಗಳನ್ನು ಕಾಂಗ್ರೆಸ್‌ ಪಾಳೆಯದಿಂದ ಪಡೆಯುವಲ್ಲಿ ಶರ್ಮಾ ಸಫಲರಾದರೆ ಆಗ ಮಾಕೆನ್‌ಗೆ ತೀವ್ರ ಹಿನ್ನಡೆಯಾಗಲಿದೆ ಎಂದು ವಿಶ್ಲೇಷಿಸಲಾಗುತ್ತಿದೆ.

ಅರಾವಲಿ ರೆಸಾರ್ಟ್‌ಗೆ ಶಾಸಕರು
ಕಳೆದ ಬಾರಿ ಪಕ್ಷದ ಚಿಂತನ ಶಿಬಿರ ನಡೆದಿದ್ದ ಅರಾವಲಿ ರೆಸಾರ್ಟ್‌ಗೆ ರಾಜಸ್ಥಾನದ ಶಾಸಕರನ್ನು ಸ್ಥಳಾಂತರಿಸಲಾಗಿದೆ.

ಇಲ್ಲಿ ಪಕ್ಷದ ಅಭ್ಯರ್ಥಿ ಗೆಲ್ಲುವ ವಿಶ್ವಾಸದಲ್ಲಿ ಕಾಂಗ್ರೆಸ್‌ ಇದೆ. ಆದರೆ, ಹಾಲಿ ರಾಜ್ಯಸಭಾ ಸದಸ್ಯ ಸುಭಾಷ್‌ ಚಂದ್ರ ಅವರು ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದು, ಅವರನ್ನು ಬಿಜೆಪಿ ಬೆಂಬಲಿಸಿದೆ.

ಚಂದ್ರ ಅವರು ಪಕ್ಷೇತರರಲ್ಲದೇ, ಇತರ ಶಾಸಕರ ಬೆಂಬಲ ಪಡೆಯುವ ಕಸರತ್ತು ನಡೆಸಿದ್ದಾರೆ. ಹೀಗಾಗಿ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಮೂರನೇ ಅಭ್ಯರ್ಥಿಯ ಗೆಲುವಿಗೆ ಇವರು ಅಡ್ಡಿಯಾದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.

ನಾಲ್ಕರ ಪೈಕಿ ಮೂರು ಸ್ಥಾನಗಳನ್ನು ಪಕ್ಷ ಗೆಲ್ಲಲಿದೆ ಎಂದು ಮುಖ್ಯಮಂತ್ರಿ ಅಶೋಕ ಗೆಹಲೋತ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.