ADVERTISEMENT

ರಾಷ್ಟ್ರದ ರಾಜಕೀಯ ಮನಸ್ಥಿತಿ ಬಿಂಬಿಸಲಿರುವ ಉಪಚುನಾವಣಾ ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 10 ನವೆಂಬರ್ 2020, 9:09 IST
Last Updated 10 ನವೆಂಬರ್ 2020, 9:09 IST
ಸಾಂಕೇತಿಕ ಚಿತ್ರ
ಸಾಂಕೇತಿಕ ಚಿತ್ರ   

ನವದೆಹಲಿ: ಪ್ರಸ್ತುತ ಬಿಹಾರ ಸೇರಿದಂತೆ ದೇಶದ ಹನ್ನೊಂದು ರಾಜ್ಯಗಳಲ್ಲಿ ನಡೆಯುತ್ತಿರುವ ವಿಧಾನಸಭಾ ಚುನಾವಣೆಗಳ ಫಲಿತಾಂಶ ರಾಷ್ಟ್ರದ ರಾಜಕೀಯ ಮನಸ್ಥಿತಿಯನ್ನು ಪ್ರತಿಬಿಂಬಿಸುವ ಸಾಧ್ಯತೆ ಇದೆ.

ಬಿಹಾರದ ವಿಧಾನಸಭೆ ಜತೆಗೆ, ಮಧ್ಯಪ್ರದೇಶದಲ್ಲಿ 28, ಗುಜರಾತ್‌ನಲ್ಲಿ ಎಂಟು, ಉತ್ತರಪ್ರದೇಶದಲ್ಲಿ ಏಳು, ಜಾರ್ಖಂಡ್, ಕರ್ನಾಟಕ, ನಾಗಾಲ್ಯಾಂಡ್ ಮತ್ತು ಒಡಿಶಾದಲ್ಲಿ ತಲಾ ಎರಡು ಮತ್ತು ಛತ್ತೀಸ್‌ಗಡ, ಹರಿಯಾಣ ಮತ್ತು ತೆಲಂಗಾಣದಲ್ಲಿ ತಲಾ ಒಂದು ಕ್ಷೇತ್ರಗಳು ಸೇರಿದಂತೆ 10 ರಾಜ್ಯಗಳ 54 ವಿಧಾನಸಭಾ ಕ್ಷೇತ್ರಗಳಿಗೆ ಉಪ ಚುನಾವಣೆಗಳು ನಡೆಯುತ್ತಿವೆ.

ಬಿಹಾರದ ಜೆಡಿಯು– ನೇತೃತ್ವದ ಎನ್‌ಡಿಎ ಮಿತ್ರ ಪಕ್ಷಕ್ಕೆ ಈ ಬಾರಿ ಹಿನ್ನಡೆ ಉಂಟಾಗುತ್ತದೆ ಎಂದು ಎಲ್ಲ ಮತಗಟ್ಟೆ ಸಮಿಕ್ಷೆಗಳು ಹೇಳಿದ್ದವು. ಆದರೆ, ಬಿಹಾರವೂ ಸೇರಿದಂತೆ ದೇಶದಲ್ಲಿ ನಡೆಯುತ್ತಿರುವ 54 ಕ್ಷೇತ್ರಗಳ ಉಪಚುನಾವಣೆಗಳ ಫಲಿತಾಂಶದಲ್ಲೂ ಬಿಜೆಪಿ ಪ್ರಾಬಲ್ಯ ಮುಂದುವರಿದಂತೆ ಕಾಣಿಸುತ್ತಿದ್ದು, ಮತಗಟ್ಟೆ ಸಮೀಕ್ಷೆಗಳು ತಿರುಗುಮುರುಗಾಗುವ ಲಕ್ಷಣಗಳು ಕಾಣಿಸುತ್ತಿವೆ.

ADVERTISEMENT

ಈ ಚುನಾವಣೆ ನಡೆಯುತ್ತಿರುವ 11 ರಾಜ್ಯಗಳ ಪೈಕಿ, ಏಳು ರಾಜ್ಯಗಳಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಈ ಚುನಾವಣೆಯ ಫಲಿತಾಂಶದ ಪ್ರಗತಿಯನ್ನು ಗಮನಿಸುತ್ತಿದ್ದರೆ, ಬಹುತೇಕ ಈ ಎಲ್ಲ ರಾಜ್ಯದಲ್ಲೂ ಬಿಜೆಪಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದಂತೆ ಕಾಣುತ್ತಿದೆ.

ಬಿಹಾರ ಚುನಾವಣೆಗೆ ಸಂಬಂಧಿಸಿದಂತೆ ಪ್ರಕಟವಾದ ಎಲ್ಲ ಮತಗಟ್ಟೆ ಸಮೀಕ್ಷೆಗಳು ಆಡಳಿತರೂಢ ವಿರೋಧಿ ಅಲೆಯಿಂದಾಗಿ, ಎನ್‌ಡಿಎ ನೇತೃತ್ವದ ಪಕ್ಷಕ್ಕೆ ಹಿನ್ನಡೆಯಾಗುತ್ತದೆ ಎಂದು ವಿಶ್ಲೇಷಿಸಿದ್ದವು. ಸಾಮಾನ್ಯವಾಗಿ, ಇತ್ತೀಚೆಗಿನ ವರ್ಷಗಳಲ್ಲಿ ಮತಗಟ್ಟೆ ಸಮೀಕ್ಷೆಗಳು ಸುಳ್ಳಾಗಿದ್ದು ಕಡಿಮೆ. ಆದರೆ, ಬಿಹಾರ ಚುನಾವಣೆಯ ವಿಷಯದಲ್ಲಿ ಈ ಸಮೀಕ್ಷೆಗಳೆಲ್ಲ ತಿರುಗುಮುರುಗಾಗುವ ಸಾಧ್ಯತೆ ಕಾಣುತ್ತಿದೆ.ಮತಗಟ್ಟೆ ಸಮೀಕ್ಷೆಗೆ ವಿರುದ್ಧವಾದ ಫಲಿತಾಂಶ ಹೊರ ಹೊಮ್ಮುವ ಸಾಧ್ಯತೆಯೂ ಕಾಣಿಸುತ್ತಿದೆ.

ಚುನಾವಣೆ ನಡೆದಿರುವ ಬಹುತೇಕ ರಾಜ್ಯಗಳಲ್ಲಿ ಮತದಾರರು ಆಡಳಿತಾರೂಢ ಪಕ್ಷದ ಬಗ್ಗೆ ಒಲವು ತೋರಿಸಿದಂತೆ ಕಾಣುತ್ತಿದೆ.

ಇಲ್ಲಿವರೆಗೂ ಗುಜರಾತ್‌ನಲ್ಲಿ ಬಿಜೆಪಿಯ ಪ್ರಾಬಲ್ಯ ಉತ್ತಮವಾಗಿದೆ. ಮಧ್ಯಪ್ರದೇಶದಲ್ಲೂ ಶಿವರಾಜ್‌ಸಿಂಗ್ ಚೌಹಾಣ್ ನೇತೃತ್ವದಲ್ಲಿ ಸರ್ಕಾರ ರಚಿಸಿತ್ತು. ಇಲ್ಲಿ ಕಾಂಗ್ರೆಸ್‌ನಿಂದ ಬಂಡಾಯವೆದ್ದು ಹೊರಬಂದಿದ್ದ, ಜ್ಯೋತಿರಾದಿತ್ಯ ಸಿಂದಿಯಾ ಮತ್ತು ಕೆಲ ಶಾಸಕರು ಬಿಜೆಪಿಗೆ ಬೆಂಬಲ ನೀಡಿದ್ದರು. ಆ ಸ್ಥಾನಗಳಿಗೆ ಈಗ ಉಪ ಚುನಾವಣೆ ನಡೆದಿದ್ದು, ಆ ಕ್ಷೇತ್ರಗಳಲ್ಲಿ ಸರ್ಕಾರಕ್ಕೆ ಬೆಂಬಲ ನೀಡಿರುವ ಶಾಸಕರೇ ಗೆಲುವು ಸಾಧಿಸುವ ಲಕ್ಷಣ ಕಾಣುತ್ತಿವೆ. ಹೀಗಾಗಿ ಮಧ್ಯಪ್ರದೇಶದಲ್ಲಿ ಹಿಂದೆ ಕಾಂಗ್ರೆಸ್ ತೆಕ್ಕೆಯಲ್ಲಿದ್ದ ಕ್ಷೇತ್ರಗಳು ಈಗ ಬಿಜೆಪಿ ಪಾಲಾಗುತ್ತಿವೆ. ಈ ಮೂಲಕ ಆ ರಾಜ್ಯದಲ್ಲೂ ಬಿಜೆಪಿ ತನ್ನ ಪ್ರಾಬಲ್ಯ ಸಾಧಿಸಲು ಮುಂದಾಗಿದೆ.

ಬಿಹಾರದಲ್ಲಿ ಇಲ್ಲಿವರೆಗೂ ಪ್ರಾಬಲ್ಯವಿದ್ದ ಜೆಡಿಯು, ಈ ಬಾರಿಯ ಚುನಾವಣೆಯಲ್ಲಿ ಎರಡನೇ ಸ್ಥಾನಕ್ಕಿಳಿದು, ಅಲ್ಲಿ ಮೊದಲ ಬಾರಿಗೆ ಬಿಜೆಪಿ ಅತಿದೊಡ್ಡ ಪಕ್ಷವಾಗಿ ಹೊರ ಹೊಮ್ಮುವ ಸೂಚನೆಗಳು ಕಾಣಿಸುತ್ತಿವೆ.

ಕೇಂದ್ರ ಜಾರಿಗೆ ತಂದ ಕೃಷಿ ಕಾನೂನುಗಳ ವಿರುದ್ಧ ಉತ್ತರ ಭಾರತದಲ್ಲಿ ಭಾರಿ ಪ್ರತಿಭಟನೆಗಳು ನಡೆದವು. ಈ ಬೆನ್ನಲ್ಲೇ ಬಿಹಾರ ಸೇರಿದಂತೆ ದೇಶ ವಿವಿಧ ಭಾಗಗಳಲ್ಲಿ ಉಪಚುನಾವಣೆಗಳು ನಡೆದವು. ಈ ಎಲ್ಲ ವಿರೋಧದಿಂದ ಎನ್‌ಡಿಎ ಒಕ್ಕೂಟಕ್ಕೆ ಈಚುನಾವಣೆಗಳಲ್ಲಿ ಹಿನ್ನಡೆ ಉಂಟಾಗಬಹುದು ಎಂದು ವಿಶ್ಲೇಷಿಸಲಾಗಿತ್ತು. ಆದರೆ ಅಂಥ ಯಾವುದೇ ಪರಿಣಾಮ ಚುನಾವಣೆಗಳ ಮೇಲೆ ಬಿದ್ದಂತೆ ಸದ್ಯಕ್ಕೆ ಕಾಣುತ್ತಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.