ಡಿ.ವೈ.ಚಂದ್ರಚೂಡ್
ನವದೆಹಲಿ: ಸುಪ್ರೀಂ ಕೋರ್ಟ್‌ನ ನಿವೃತ್ತ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರು ದೆಹಲಿಯ ಕೃಷ್ಣ ಮೆನನ್ ಮಾರ್ಗದ ಅಧಿಕೃತ ಬಂಗಲೆಯನ್ನು ಇನ್ನೂ ತೆರವು ಗೊಳಿಸಿಲ್ಲ. ಬಂಗಲೆ ತೆರವುಗೊಳಿಸಲು ತಕ್ಷಣ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಪತ್ರ ಬರೆದಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆದಿರುವ ಸುಪ್ರೀಂ ಕೋರ್ಟ್, ‘ಕೃಷ್ಣ ಮೆನನ್ ಮಾರ್ಗದ ಬಂಗಲೆ ಸಂಖ್ಯೆ 5– ಹಾಲಿ ಮುಖ್ಯ ನ್ಯಾಯಮೂರ್ತಿ ಅವರಿಗೆ ಮೀಸಲಿಟ್ಟ ಬಂಗಲೆ. ಆದರೆ ಚಂದ್ರಚೂಡ್ ಅವರು ನಿವೃತ್ತಿ ಬಳಿಕ ನಿಯಮಾನುಸಾರ ಪಡೆದ ಅವಧಿ ಅಲ್ಲದೆ, ವಿಶೇಷ ಅನುಮತಿ ಪಡೆದ ಅವಧಿಯ ಬಳಿಕವೂ ವಾಸ್ತವ್ಯ ಮುಂದುವರಿಸಿದ್ದಾರೆ ಎಂದು ದೂರಿದೆ’ ಎಂದು ಮೂಲಗಳು ತಿಳಿಸಿವೆ.
ಯಾವುದೇ ವಿಳಂಬ ಮಾಡದೆ ಚಂದ್ರಚೂಡ್ ಅವರಿಂದ ಬಂಗಲೆಯನ್ನು ತೆರವು ಮಾಡಿಸಬೇಕು ಎಂದು ಸಚಿವಾಲಯದ ಕಾರ್ಯದರ್ಶಿ ಅವರಿಗೆ ಮನವಿ ಮಾಡಿದೆ.
50ನೇ ಸಿಜೆಐ: ಚಂದ್ರಚೂಡ್ ಅವರು ಸುಪ್ರೀಂ ಕೋರ್ಟ್‌ನ 50ನೇ ಮುಖ್ಯ ನ್ಯಾಯಮೂರ್ತಿಯಾಗಿ 2022ರ ನವೆಂಬರ್‌ನಿಂದ 2024ರ ನವೆಂಬರ್‌ವರೆಗೆ ಕೆಲಸ ಮಾಡಿದ್ದಾರೆ. ನಿವೃತ್ತಿ ಪಡೆದು ಎಂಟು ತಿಂಗಳು ಕಳೆದರೂ ಸಿಜೆಐ ಅಧಿಕೃತ ನಿವಾಸದಲ್ಲಿಯೇ ವಾಸ್ತವ್ಯ ಹೂಡಿದ್ದಾರೆ.
ಹಂಚಿಕೆಯಾದ ಬಂಗಲೆಯ ನವೀಕರಣ ಕಾರ್ಯ ಪ್ರಗತಿಯಲ್ಲಿದೆ. ಅನಾರೋಗ್ಯದಿಂದ ಬಳಲುತ್ತಿರುವ ಇಬ್ಬರು ಹೆಣ್ಣುಮಕ್ಕಳ ಅನುಕೂಲಕ್ಕಾಗಿ ಈ ನಿವಾಸದ ತೆರವು ಕಾರ್ಯ ವಿಳಂಬವಾಗುತ್ತಿದೆ.– ಡಿ.ವೈ ಚಂದ್ರಚೂಡ್, ನಿವೃತ್ತ ಸಿಜೆಐ
ಅತಿಥಿ ಗೃಹದಲ್ಲಿ ವ್ಯವಸ್ಥೆ
ಚಂದ್ರಚೂಡ್ ಅವರಿಗೆ ನಿವೃತ್ತಿ ನಂತರ ವಾಸ್ತವ್ಯಕ್ಕಾಗಿ ತುಘಲಕ್ ರಸ್ತೆಯ ಬಂಗಲೆ ನಂ.14 ಅನ್ನು ಮಂಜೂರು ಮಾಡಲಾಗಿದೆ. ಆದರೆ, ಆ ಬಂಗಲೆಯ ನವೀಕರಣ ಕಾರ್ಯ ಪ್ರಗತಿಯಲ್ಲಿದ್ದ ಕಾರಣ ಸಿಜೆಐ ಅಧಿಕೃತ ನಿವಾಸದಲ್ಲಿಯೇ 2025ರ ಏಪ್ರಿಲ್ 30ರವರೆಗೆ ವಾಸಿಸಲು ಅವಕಾಶ ನೀಡಬೇಕು ಎಂದು ಸಿಜೆಐ ಖನ್ನಾ ಅವರಿಗೆ ಚಂದ್ರಚೂಡ್ ಅವರು 2024ರ ಡಿಸೆಂಬರ್ 18ರಂದು ಪತ್ರ ಬರೆದಿದ್ದರು. ಅದಕ್ಕೆ ಖನ್ನಾ ಒಪ್ಪಿಗೆ ನೀಡಿದ್ದರು. ಆನಂತರ ಮತ್ತೊಮ್ಮೆ ಮೇ 31ರವರೆಗೆ ಅನುಮತಿ ವಿಸ್ತರಿಸಲು ಮೌಖಿಕವಾಗಿ ಕೋರಿದ್ದರು.
ಹಲವು ನ್ಯಾಯಮೂರ್ತಿಗಳಿಗೆ ಅತಿಥಿ ಗೃಹ ಅಥವಾ ದೆಹಲಿಯ ವಿವಿಧೆಡೆ ಪರ್ಯಾಯ ವಸತಿ ವ್ಯವಸ್ಥೆ ಕಲ್ಪಿಸಿರುವುದರಿಂದ ಮತ್ತೊಮ್ಮೆ ಅವಧಿ ವಿಸ್ತರಣೆಗೆ ಕೋರುವಂತಿಲ್ಲ ಎಂಬ ಷರತ್ತಿನ ಮೇಲೆ ಖನ್ನಾ ಒಪ್ಪಿಗೆ ನೀಡಿದ್ದರು.
ನಿಯಮಗಳು ಏನು ಹೇಳುತ್ತವೆ?
ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ (ತಿದ್ದುಪಡಿ) ನಿಯಮ–2022ರ 3ಬಿ ಅಡಿಯಲ್ಲಿ, ಮುಖ್ಯ ನ್ಯಾಯಮೂರ್ತಿಯವರು ನಿವೃತ್ತಿಯ ನಂತರ ಗರಿಷ್ಠ ಆರು ತಿಂಗಳವರೆಗೆ ತಮ್ಮ ಅಧಿಕೃತ ನಿವಾಸದಲ್ಲಿ (ಟೈಪ್–5ಕ್ಕಿಂತ ಅಥವಾ ಅದಕ್ಕಿಂತ ಕೆಳಗಿನ ಹಂತದ) ಇರಲು ಅವಕಾಶವಿದೆ. ಆನಂತರ ಅವರು ಟೈಪ್ 7 ಬಂಗಲೆಯಲ್ಲಿ ವಾಸ್ತವ್ಯ ಹೂಡಬಹುದು. ಈ ನಿಯಮದ ಅಡಿಯಲ್ಲಿ ಚಂದ್ರಚೂಡ್ ಅವರಿಗೆ ವಾಸಿಸಲು ನೀಡಲಾಗಿದ್ದ ಆರು ತಿಂಗಳ ಅನುಮತಿಯು ಈ ವರ್ಷ ಮೇ 10ಕ್ಕೆ ಕೊನೆಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.