ಸಂಜಯ್ ರಾಯ್
ಕೋಲ್ಕತ್ತ: ‘ನನ್ನ ಮಗ ತಪ್ಪಿತಸ್ಥನಾಗಿದ್ದರೆ ಅವನನ್ನು ಗಲ್ಲಿಗೇರಿಸಿ’ ಎಂದು ಆರ್.ಜಿ.ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ವಿದ್ಯಾರ್ಥಿನಿ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ಶಿಕ್ಷೆಗೊಳಗಾದ ಸಂಜಯ್ ರಾಯ್‌ನ ತಾಯಿ ಮಾಲತಿ ರಾಯ್ ಹೇಳಿದ್ದಾರೆ.
ಶನಿವಾರ(ಜ.18ರಂದು) ಸಂಜಯ್ ರಾಯ್‌ನನ್ನು ತಪ್ಪಿತಸ್ಥ ಎಂದು ಕೋಲ್ಕತ್ತ ನ್ಯಾಯಾಲಯ ತೀರ್ಪು ನೀಡಿತ್ತು. ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಲು ಹಿಂಜರಿದಿದ್ದ ಮಾಲತಿ ರಾಯ್ ಅವರು ಭಾನುವಾರ ಮುಂಜಾನೆ ತಮ್ಮ ಮನೆಯ ಮುಂದೆ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ್ದಾರೆ.
‘ಒಂದು ಹೆಣ್ಣಾಗಿ, ಮೂರು ಹೆಣ್ಣು ಮಕ್ಕಳ ತಾಯಿಯಾಗಿ, ಆ ತಾಯಿಯ(ವೈದ್ಯ ವಿದ್ಯಾರ್ಥಿನಿ ತಾಯಿ) ವೇದನೆ ಮತ್ತು ನೋವು ಅರ್ಥವಾಗುತ್ತದೆ’ ಎಂದು ಹೇಳಿದ್ದಾರೆ.
‘ಕಾನೂನಿನ ಪ್ರಕಾರ ಅವನ ಅಪರಾಧ ಸಾಬೀತಾಗಿದ್ದರೆ ನ್ಯಾಯಾಲಯ ಅವನನ್ನು ಗಲ್ಲಿಗೇರಿಸಿದರೂ ನನ್ನ ಅಭ್ಯಂತರವಿಲ್ಲ. ನಾನು ಏಕಾಂಗಿಯಾಗಿ ಅಳಬಹುದು ಆದರೆ, ವಿಧಿಯ ಇಚ್ಛೆಯಂತೆ ಅದನ್ನು ಒಪ್ಪಿಕೊಳ್ಳುತ್ತೇನೆ’ ಎಂದು ಹೇಳಿದ್ದಾರೆ.
ನ್ಯಾಯಾಲಯದ ವಿಚಾರಣೆ ವೇಳೆ ಅಥವಾ ಜೈಲಿನಲ್ಲಿರುವಾಗ ಸಂಜಯ್‌ನನ್ನು ಭೇಟಿಯಾಗಿದ್ದೀರಾ ಎಂಬ ಪ್ರಶ್ನೆಗೆ ‘ಇಲ್ಲ’ ಎಂದು ಉತ್ತರಿಸಿದ್ದಾರೆ.
‘ನ್ಯಾನ್ಯಾಕೆ ಭೇಟಿ ಮಾಡಬೇಕು? ಅವನ ಮೇಲೆ ಹೊರಿಸಿರುವ ಆರೋಪಗಳು ಸುಳ್ಳೆಂದು ಕಂಡುಬಂದಿದ್ದರೆ ನನ್ನ ಈ ಹದಗೆಟ್ಟ ಆರೋಗ್ಯವನ್ನು ಕಡೆಗಣಿಸಿಯಾದರೂ ಭೇಟಿ ಮಾಡಲು ಯತ್ನಿಸುತ್ತಿದ್ದೆ’ ಎಂದು ಕಣ್ಣೀರು ಹಾಕಿದ್ದಾರೆ.
‘ಅವನು ತಪ್ಪಿತಸ್ಥನೆಂದು ಸಾಬೀತಾದರೆ, ಕಾನೂನಿನ ಪ್ರಕಾರ ಅವನಿಗೆ ಶಿಕ್ಷೆಯಾಗಲಿ. ತೀರ್ಪನ್ನು ಪ್ರಶ್ನಿಸಿ ಯಾವುದೇ ನ್ಯಾಯಾಲಯದ ಮೆಟ್ಟಿಲೇರುವ ಯೋಜನೆಯನ್ನು ಕುಟುಂಬ ಹೊಂದಿಲ್ಲ’ ಎಂದು ಸಂಜಯ್ ರಾಯ್ ಸಹೋದರಿ ತಿಳಿಸಿದ್ದಾರೆ.
ಸುದ್ದಿಗಾರರು ಪ್ರಶ್ನೆ ಕೇಳುವುದನ್ನು ಮುಂದುವರಿಸಿದಾಗ, ‘ಈಗಾಗಲೇ ನಾವು ನೊಂದಿದ್ದೇವೆ. ದಯವಿಟ್ಟು ನಮ್ಮನ್ನು ನಮ್ಮ ಪಾಡಿಗೆ ಬಿಡಿ’ ಎಂದು ಅವರು ಹೇಳಿದ್ದಾರೆ.
ಸಂಜಯ್‌ಗೆ ಮೂವರು ಸಹೋದರಿಯರಿದ್ದು, ಅವರಲ್ಲಿ ಒಬ್ಬರು ವರ್ಷಗಳ ಹಿಂದೆ ನಿಧನರಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.