ADVERTISEMENT

ಸುಶಾಂತ್‌ ಆತ್ಮಹತ್ಯೆ | ರಿಯಾಗೆ 'ಇ.ಡಿ ಡ್ರಿಲ್'‌: ವಿಚಾರಣೆಗೆ ಹಾಜರಾದ ನಟಿ

ಏಜೆನ್ಸೀಸ್
Published 10 ಆಗಸ್ಟ್ 2020, 12:54 IST
Last Updated 10 ಆಗಸ್ಟ್ 2020, 12:54 IST
ವಿಚಾರಣೆಗೆ ಹಾಜರಾದ ಸಂದರ್ಭ
ವಿಚಾರಣೆಗೆ ಹಾಜರಾದ ಸಂದರ್ಭ   

ಮುಂಬೈ: ಬಾಲಿವುಡ್‌ ನಟ ಸುಶಾಂತ್ ಸಿಂಗ್ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ರಿಯಾ ಚಕ್ರವರ್ತಿ ಸೋಮವಾರ ತಮ್ಮ ಕುಟುಂಬ ಸದಸ್ಯರ ಜೊತೆಇಲ್ಲಿನ ಜಾರಿ ನಿರ್ದೇಶನಾಲಯದ (ಇ.ಡಿ) ಎದುರು ವಿಚಾರಣೆಗಾಗಿ ಸೋಮವಾರ ಹಾಜರಾದರು.

ಸುಶಾಂತ್ ಸಿಂಗ್ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದು ಮತ್ತು ಈ ಪ್ರಕರಣದಲ್ಲಿ ಅಕ್ರಮ ಹಣ ವರ್ಗಾವಣೆ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗುವಂತೆ ಜಾರಿ ನಿರ್ದೇಶನಾಲಯ ರಿಯಾ ಚಕ್ರವರ್ತಿ ಅವರಿಗೆ ನೋಟಿಸ್ ಜಾರಿ ಮಾಡಿತ್ತು.

ಶುಕ್ರವಾರವು ವಿಚಾರಣೆಗೆ ಹಾಜರಾಗಿದ್ದ ರಿಯಾ ಸೋಮವಾರ ಮತ್ತೆ ಬೆಳಗ್ಗೆ 11 ಗಂಟೆಗೆ ಹಾಜರಾದರು. ಇಡೀ ದಿನ ವಿಚಾರಣೆ ನಡೆಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ರಿಯಾ ಚಕ್ರವರ್ತಿಯವರ ಹೂಡಿಕೆ, ವ್ಯಾಪಾರ, ವೃತ್ತಿ ತೆರಿಗೆಯ ಬಗ್ಗೆ ಇ.ಡಿ ಅಧಿಕಾರಿಗಳು ತಪಾಸಣೆ ನಡೆಸಿದ್ದಾರೆ. ಆದರೆ ಅವರು ಆದಾಯ ಮತ್ತು ಖರ್ಚಿನ ಬಗ್ಗೆ ನೀಡಿರುವ ಮಾಹಿತಿ ಸರಿಯಾಗಿ ಹೊಂದಾಣಿಕೆಯಾಗುತ್ತಿಲ್ಲ ಎಂದು ಇ.ಡಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಸುಶಾಂತ್ ಸಿಂಗ್‌ ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದಾರೆಂದು ಆರೋಪಿಸಿ ಸುಶಾಂತ್ ಸಿಂಗ್ ತಂದೆ ಕೆ.ಕೆ.ಸಿಂಗ್ ಅವರು, ನಟಿ ರಿಯಾ ಮತ್ತು ಅವರ ಕುಟುಂಬದವರ ವಿರುದ್ಧ ಜುಲೈ 25ರಂದು ಪಟ್ನಾ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಸುಶಾಂತ್ ಬ್ಯಾಂಕ್‌ ಖಾತೆಯಿಂದ ₹ 15 ಕೋಟಿಯನ್ನು ಅಕ್ರಮವಾಗಿ ವರ್ಗಾವಣೆ ಮಾಡಲಾಗಿದೆ ಎಂದು ಆರೋಪಿಸಿದ್ದರು.

ಪೊಲೀಸರು ರಿಯಾ, ಆಕೆಯ ಪೋಷಕರಾದ ಇಂದ್ರಜಿತ್, ಸಂಧ್ಯಾಚಕ್ರವರ್ತಿ, ಸಹೋದರ ಶೋಯಿಕ್ ಚಕ್ರವರ್ತಿ ಮತ್ತು ಸ್ಯಾಮುಯೆಲ್ ಮಿರಾಂಡಾ ಮತ್ತು ಶೃತಿ ಮೋದಿ ವಿರುದ್ಧ ಎಫ್‌ಐಆರ್ ದಾಖಲಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.