ADVERTISEMENT

ಉತ್ತರ ಪ್ರದೇಶ: ₹3 ಕೋಟಿ ಪಾವತಿಸುವಂತೆ ರಿಕ್ಷಾ ಚಾಲಕನಿಗೆ ಐಟಿ ನೋಟಿಸ್!

ಪಿಟಿಐ
Published 25 ಅಕ್ಟೋಬರ್ 2021, 1:42 IST
Last Updated 25 ಅಕ್ಟೋಬರ್ 2021, 1:42 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ    

ಮಥುರಾ: ಉತ್ತರ ಪ್ರದೇಶದ ರಿಕ್ಷಾ ಚಾಲಕರೊಬ್ಬರಿಗೆ ₹3 ಕೋಟಿ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆಯಿಂದ (ಐ.ಟಿ) ನೋಟಿಸ್ ಬಂದಿದೆ ಎನ್ನಲಾಗಿದ್ದು, ಈ ವಿಚಾರವಾಗಿ ಅವರು ಭಾನುವಾರ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ಮಥುರಾದ ಬಾಕಾಳ್‌ಪುರದ ಅಮರ್ ಕಾಲೋನಿಯ ರಿಕ್ಷಾ ಚಾಲಕ ಪ್ರತಾಪ್ ಸಿಂಗ್ ಅವರು ಹೆದ್ದಾರಿ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ಠಾಣೆ ಅಧಿಕಾರಿ (ಎಸ್‌ಎಚ್‌ಒ) ಅನುಜ್ ಕುಮಾರ್, ಸದ್ಯ ಸಿಂಗ್ ಅವರ ದೂರಿನ ಆಧಾರದಲ್ಲಿ ಪ್ರಕರಣ ದಾಖಲಿಸಿಲ್ಲ. ಏನು ಸಮಸ್ಯೆ ಆಗಿದೆ ಎಂಬುದರ ಕುರಿತು ಗಮನಹರಿಸುತ್ತೇವೆ ಎಂದು ಹೇಳಿದ್ದಾರೆ.

ADVERTISEMENT

ಪ್ರತಾಪ್ ಸಿಂಗ್ ಹೇಳುವುದೇನು?: ಬ್ಯಾಂಕ್‌ನವರು ಐ.ಟಿ ರಿಟರ್ನ್ಸ್ ದಾಖಲೆ ಕೇಳಿದ್ದರಿಂದ ಮಾರ್ಚ್ 15ರಂದು ಪಾನ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಿದ್ದೆ. ಬಾಕಾಳ್‌ಪುರದ ತೇಜ್ ಪ್ರಕಾಶ್ ಉಪಾಧ್ಯಾಯ ಎಂಬುವರ ಮಾಲೀಕತ್ವದ ಜನ್ ಸುವಿಧಾ ಕೇಂದ್ರದಲ್ಲಿ ಅರ್ಜಿ ಸಲ್ಲಿಸಿದ್ದೆ. ಬಳಿಕ ಸಂಜಯ್ ಸಿಂಗ್ ಎಂಬುವರು ಪಾನ್‌ಕಾರ್ಡೊಂದರ ನಕಲು ಪ್ರತಿಯನ್ನು ನೀಡಿದ್ದರು ಎಂದು ಸಿಂಗ್ ಹೇಳಿದ್ದಾರೆ.

ಅನಕ್ಷರಸ್ಥನಾಗಿರುವುದರಿಂದ ಮೂಲ ಪಾನ್‌ ಕಾರ್ಡ್ ಮತ್ತು ತನಗೆ ದೊರೆತ ನಕಲು ಪ್ರತಿಯ ವ್ಯತ್ಯಾಸ ತಿಳಿಯುವುದು ಸಾಧ್ಯವಾಗಿಲ್ಲ. ಆದರೆ, ಅಕ್ಟೋಬರ್ 19ರಂದು ₹3,47,54,896 ಪಾವತಿಸುವಂತೆ ಐ.ಟಿ ಇಲಾಖೆಯಿಂದ ನೋಟಿಸ್ ಬಂದಿದೆ. ವಿಚಾರಿಸಿದಾಗ, ಯಾರೋ ನಿಮ್ಮನ್ನು ಯಾಮಾರಿಸಿ ನಿಮ್ಮ ಹೆಸರು ಬಳಸಿಕೊಂಡು ಜಿಎಸ್‌ಟಿ (ಸರಕು ಮತ್ತು ಸೇವಾ ತೆರಿಗೆ) ಸಂಖ್ಯೆ ಪಡೆದಿದ್ದಾರೆ. 2018–19ರಲ್ಲಿ ಅವರ ವಹಿವಾಟು ₹43,44,36,201 ಆಗಿತ್ತು ಎಂದು ತಿಳಿಸಿರುವುದಾಗಿ ಪ್ರತಾಪ್ ಸಿಂಗ್ ಹೇಳಿದ್ದಾರೆ.

ಯಾರೋ ತಮ್ಮನ್ನು ಯಾಮಾರಿಸಿ ವಂಚಿಸಿದ್ದಾರೆ ಎಂದು ಎಫ್‌ಐಆರ್ ದಾಖಲಿಸುವಂತೆ ಐ.ಟಿ. ಅಧಿಕಾರಿಗಳು ಸಲಹೆ ನೀಡಿದ್ದಾರೆ ಎಂದೂ ಅವರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.